ಕಲಬುರಗಿ: ಜೈ ಭವಾನಿ, ಜೈ ಜಗದಂಬಾ.. ಜೈ ಜೈ ರಾಧೆ ಘೋಷವಾಕ್ಯಗಳು ಮೊಳಗುತ್ತಿವೆ. ಸ್ತ್ರೀಶಕ್ತಿ ದೇಗುಲಗಳು ಅಲಂಕೃತಗೊಂಡು, ಕತ್ತಲಾಗುತ್ತಿದ್ದಂತೆ ವಿದ್ಯುದ್ದೀಪದ ಬೆಳಕಲ್ಲಿ ಕಣ್ಣು ಕುಕ್ಕುತ್ತಿವೆ. ಶಕ್ತಿ ದೇವತೆಯನ್ನು ಆರಾಧನೆ ಮಾಡುವ ಹಬ್ಬ ನವರಾತ್ರಿಗೆ ಸೋಮವಾರ ನಗರದಲ್ಲಿ ಅದ್ದೂರಿ ಚಾಲನೆ ದೊರೆಯಿತು.
ನವರಾತ್ರಿಯ ಮೊದಲ ದಿನವಾದ ಸೋಮವಾರ ದೇಗುಲಗಳು ಮತ್ತು ಮನೆ, ಮನೆಗಳಲ್ಲೂ ಘಟಸ್ಥಾಪನೆಯಾಗಿದ್ದು, ಹಬ್ಬಕ್ಕೆ ಚಾಲನೆ ದೊರೆತಿದೆ. ಮೊದಲ ದಿನದ ಬಣ್ಣವಾದ ಕಿತ್ತಳೆ ಸೀರೆಯನ್ನುಟ್ಟುಕೊಂಡು ಹೆಂಗಳೆಯರು ದೇಗುಲಗಳಿಗೆ ಬಂದು ಪೂಜೆ ಸಲ್ಲಿಸುತ್ತಿದ್ದುದು ಎಲ್ಲೆಡೆ ಕಂಡು ಬಂತು.
ಟ್ಯಾಂಕ್‌ಬಂಡ್ ರಸ್ತೆಯ ಯಲ್ಲಮ್ಮ ದೇಗುಲ, ಶಹಾಜಾರ್‌ನ ಜಗದಂಬಾ ಮಂದಿರ, ಅಯ್ಯರ್‌ಗುಡಿಯ ಅಂಭಾಭವಾನಿ, ನ್ಯೂ ಜೇವರ್ಗಿ ರಸ್ತೆಯ ಸಿಂದಗಿ ಅಂಬಾಭವಾನಿ ಮಂದಿರ, ಗಂಜ ಕಾಲೊನಿಯ ಅಂಬಾ ಭವಾನಿ ದೇವಸ್ಥಾನ ಸೇರಿದಂತೆ ಹಲವೆಡೆ ದೇಗುಲಗಳನ್ನು ಶುದ್ಧೀಕರಿಸಿ, ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಸೋಮವಾರ ಶಹಬಜಾರ್‌ನ ಜಗದಂಬಾ ದೇವಿಗೆ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಶಿವಪಾರ್ವತಿ ಅಲಂಕಾರ ಮಾಡಿದ್ದರು.
ಟ್ಯಾಂಕ್‌ಬಂಡ್ ರಸ್ತೆಯ ಯಲ್ಲಮ್ಮ ದೇಗುಲದಲ್ಲಿ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಂಡು ಸಂಜೆ 7ಗಂಟೆಗೆ ಮಹಾಪೂಜೆ ನೆರವೇರಿಸಿದರು. ರಾತ್ರಿ 8ಗಂಟೆಯ ಬಳಿಕ ಗರ್ಭಾ ಮತ್ತು ದಾಂಡಿಯಾ ನೃತ್ಯವನ್ನು ಪ್ರಸ್ತುತಪಡಿಸಿದರು. ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ನೃತ್ಯ, ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.
ಇನ್ನು ಗಣೇಶನಂತೆ ವಿವಿಧೆಡೆ ಬಡಾವಣೆಗಳಲ್ಲೂ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಗತ್ ವೃತ್ತದ ಅಂಚೆ ಕಚೇರಿ ಎದುರಿನ ಭಾಸಗಿ ಬಿಲ್ಡಿಂಗ್‌ನಲ್ಲಿನ ಮೂರ್ತಿ ತಯಾರಿಕರ ಅಂಗಡಿಯಿಂದ ದೇವಿಯ ಪ್ರತಿಮೆಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಸಂಜೆಯಾಗುತ್ತಿದ್ದಂತೆ ಅಂಗಡಿ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಹಿಳೆಯರು ದೇವಿಗೆ ಅಲ್ಲಿಯೇ ಅಲಂಕಾರ ಮಾಡಿ, ವಾಹನದಲ್ಲಿರಿಸಿಕೊಂಡು ಘೋಷಣೆಗಳೊಂದಿಗೆ ತಮ್ಮ ಬಡಾವಣೆಗಳತ್ತ ತೆರಳಿದರು.
ದರ ಕೊಂಚ ದುಬಾರಿ: ಹಬ್ಬದ ಹಿನ್ನೆಲೆಯಲ್ಲಿ ಹೂವಿನ ದರದಲ್ಲಿ ಕೊಂಚ ಏರಿಕೆಯಾಗಿದೆ. ಚೆಂಡು ಹೂ ಕೆಜಿಗೆ ₹80, ಸೇವಂತಿಗೆ ₹400, ಮಲ್ಲಿಗೆ, ಕನಕಾಂಬರ ಮಾರಿಗೆ ₹50, ಕಬ್ಬು 2ಕ್ಕೆ ₹50, ಬಾಳೆಗಿಡ ₹60ರಿಂದ ₹80, ಕುಂಬಳಕಾಯಿ ₹120ರಿಂದ 150ಕ್ಕೆ ಮಾರಾಟವಾಗುತ್ತಿವೆ.
ಏನಿದು ಘಟಸ್ಥಾಪನೆ?
ಘಟಸ್ಥಾಪನೆ ಎಂಬುದು ಶಕ್ತಿದೇವಿಯನ್ನು ಆಹ್ವಾನಿಸುವ ಆಚರಣೆಯಾಗಿದೆ. ನವರಾತ್ರಿಯ ಮೊದಲ ದಿನ ಮಡಕೆಯನ್ನು ಇರಿಸಿ ಅದರೊಳಗೆ ಒಂಬತ್ತು ದಿನಗಳವರೆಗೆ ಬೆಳಗುವ ಅಖಂಡ ಜ್ಯೋತಿಯನ್ನು ಇರಿಸಲಾಗುತ್ತದೆ. ಮಣ್ಣಿನ ಪಾತ್ರೆಯಲ್ಲಿ ನವಧಾನ್ಯಗಳನ್ನು ಹಾಕಿ ನೀರು ನಾಣ್ಯಗಳು ಭಂಡಾರ ಮತ್ತು ತುಂಬಿದ ಕಲಶವನ್ನು ಇರಿಸಲಾಗುತ್ತದೆ. ಐದು ಮಾವಿನ ಎಲೆಗಳು ಮತ್ತು ತೆಂಗಿನಕಾಯಿಯಿಂದ ಕಲಶವನ್ನು ಮುಚ್ಚಿ ಶಕ್ತಿದೇವತೆ ಫೊಟೊ ಇರಿಸಿ ಹೂ ಹಣ್ಣು ನೈವೇದ್ಯ ಇರಿಸಲಾಗುತ್ತದೆ.
ದೇವಿ ಎಚ್ಚರವಿರಿಸಲು ದಾಂಡಿಯಾ ಭಾರತದ ಪ್ರಾಚೀನ ಯುದ್ಧನೀತಿಯಂತೆ ಸೂರ್ಯಾಸ್ತವಾಗುತ್ತಿದ್ದಂತೆ ಯುದ್ಧವಿರಾಮ ನೀಡುವುದು ವಾಡಿಕೆ. ಮರುದಿನ ಸೂರ್ಯೋದಯವಾಗುತ್ತಿದ್ದಂತೆ ಯುದ್ಧ ಆರಂಭವಾಗುತ್ತದೆ. ಮಹಿಷಾಷುರನೊಂದಿಗೆ ಸೆಣಸಾಡುವ ದೇವಿ ಕತ್ತಲಾಗುತ್ತಿದ್ದಂತೆ ದೇಗುಲಕ್ಕೆ ಬಂದು ವಿರಮಿಸುತ್ತಾಳೆ. ಆದರೆ ಮಲಗಿಕೊಂಡರೆ ಮತ್ತೆ ಅವಳನ್ನು ಏಳಿಸುವುದು ಕಷ್ಟ. ಹೀಗಾಗಿ ಸದಾ ಎಚ್ಚರವಾಗಿರಿಸಲು ಭಕ್ತರು ಗರ್ಭಾ ದಾಂಡಿಯಾ ನೃತ್ಯ ಮಾಡುತ್ತಾರೆ. ಅಷ್ಟಮಿ ದಿನ ದೇವಿ ಮಹಿಷಾಷುರನ ರುಂಡ ಚಂಡಾಡುತ್ತಾಳೆ. ನವಮಿಗೆ ಆಯುಧಪೂಜೆ ಮಾಡಿ 10ನೇ ದಿನ ವಿಜಯದಶಮಿ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.