ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ
ಕಲಬುರಗಿ: ವೈದ್ಯಕೀಯ ಪ್ರವೇಶ ಪರೀಕ್ಷೆಯ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಸೇಂಟ್ ಮೇರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ವಿದ್ಯಾರ್ಥಿಯೊಬ್ಬರ ಜನಿವಾರ ತೆಗೆಯಿಸಿ ಪರೀಕ್ಷೆಗೆ ಅನುಮತಿಸಿದ್ದಾರೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಬೆಟಬೆಲಕುಂದಾ ಗ್ರಾಮ ಮೂಲದ ಲ, ಕಲಬುರಗಿ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ ಶ್ರೀಪಾದ ಪಾಟೀಲ ಎಂಬುವರ ಜನಿವಾರ ತೆಗೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪರೀಕ್ಷಾ ಕೇಂದ್ರದ ಒಳಗಿನ ಪ್ರವೇಶ ದ್ವಾರದಲ್ಲಿ ಅಧಿಕಾರಿಯೊಬ್ವರು ಶ್ರೀಪಾದಗೆ ಜನಿವಾರ ತೆಗೆದು ಒಳ ಹೋಗುವಂತೆ ಸೂಚಿಸಿದ್ದಾರೆ. ಪರೀಕ್ಷೆ ತಪ್ಪುವ ಆತಂಕದಿಂದ ಜನಿವಾರ ತೆಗೆದ ವಿದ್ಯಾರ್ಥಿ, ಪರೀಕ್ಷಾ ಕೇಂದ್ರದ ಹೊರಗೆ ನಿಂತಿದ್ದ ತಂದೆಯ ಕೈಯಲ್ಲಿ ಜನಿವಾರ ಇರಿಸಿ ಒಳ ಹೋಗಿದ್ದಾನೆ ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ.
ಜನಿವಾರ ತೆಗೆಸಿದ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಬ್ರಾಹ್ಮಣ ಸಮುದಾಯದ ಮುಖಂಡರು ಪರೀಕ್ಷಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು. ಘೋಷಣೆಗಳನ್ನು ಕೂಗುತ್ತಾ ಕೇಂದ್ರದ ಆವರಣವನ್ನು ಪ್ರವೇಶಿಸಿದರು. ಪೊಲೀಸರು ಬಂದು ಪ್ರತಿಭಟನಾಕಾರರನ್ನು ತಡೆದು ಹೊರ ಕಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.