ADVERTISEMENT

ಎಂಎಸ್‌ಪಿಗೆ ಕಾನೂನು ಬೆಂಬಲ ಸಿಗುವವರೆಗೂ ಹೋರಾಟ: ಬಿ.ಆರ್. ಪಾಟೀಲ

ಕೃಷಿ ಕಾಯ್ದೆ ಹಿಂಪಡೆದ ಕೇಂದ್ರ; ಮುಖಂಡ ಬಿ.ಆರ್. ಪಾಟೀಲ ನೇತೃತ್ವದಲ್ಲಿ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 10:29 IST
Last Updated 19 ನವೆಂಬರ್ 2021, 10:29 IST
ಕೃಷಿ ಸಂಬಂಧಿ ಮೂರು ಕಾಯ್ದೆಗಳನ್ನು ಕೇಂದ್ರವು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಕಲಬುರಗಿಯ ಜಗತ್‌ ವೃತ್ತದಲ್ಲಿ ಶುಕ್ರವಾರ ಬಿ.ಆರ್. ಪಾಟೀಲ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು
ಕೃಷಿ ಸಂಬಂಧಿ ಮೂರು ಕಾಯ್ದೆಗಳನ್ನು ಕೇಂದ್ರವು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಕಲಬುರಗಿಯ ಜಗತ್‌ ವೃತ್ತದಲ್ಲಿ ಶುಕ್ರವಾರ ಬಿ.ಆರ್. ಪಾಟೀಲ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು   

ಕಲಬುರಗಿ: ‘ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪ‍ಡೆದಿದೆ ಎಂದು ಹೇಳಿದ ತಕ್ಷಣ ನಾವು ಹೋರಾಟ ನಿಲ್ಲಿಸುವುದಿಲ್ಲ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಬೆಂಬಲ ನೀಡುವವರೆಗೂ ದೇಶದಾದ್ಯಂತ ಹೋರಾಟ ಮುಂದುವರಿಯುತ್ತದೆ’ ಎಂದು ರೈತ ಚಳವಳಿಯಲ್ಲಿ ಪಾಲ್ಗೊಂಡ, ಕಾಂಗ್ರೆಸ್‌ ಮುಖಂಡ ಬಿ.ಆರ್. ಪಾಟೀಲ ಹೇಳಿದರು.

ಕೃಷಿ ಸಂಬಂಧಿ ಮೂರು ಕಾಯ್ದೆಗಳನ್ನು ಕೇಂದ್ರವು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ನಗರದ ಜಗತ್‌ ವೃತ್ತದಲ್ಲಿ ಶುಕ್ರವಾರ ನಡೆದ ರೈತರ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ತನ್ನ ಬದ್ಧತೆಯಿಂದಾಗಲೀ, ರೈತರ ಮೇಲಿನ ಕಾಳಜಿಯಿಂದಾಗಲೀ ಕೃಷಿ ಕಾಯ್ದೆಗಳನ್ನು ಹಿಂಪಡೆದಿಲ್ಲ. ಮುಂಬರುವ ಪಂಜಾಬ, ಉತ್ತರ ಪ್ರದೇಶದ ಚುನಾವಣೆಗಳಲ್ಲಿ ರೈತರು ಬಿಜೆಪಿ ತಿರಸ್ಕರಿಸುತ್ತಾರೆ ಎಂಬ ಭಯದಿಂದ ಹಿಂದಕ್ಕೆ ಪಡೆದಿದ್ದಾರೆ. ಇಲ್ಲಿಂದ ‍ಪ್ರಧಾನಿ ಮೋದಿ ಅವರ ದರ್ಪ‍ದ ಆಡಳಿತ ನಾಶವಾಗುತ್ತ ಸಾಗುತ್ತದೆ’ ಎಂದೂ ಕಿಡಿ ಕಾರಿದರು.

ADVERTISEMENT

‘2014ರಲ್ಲಿ ಮೋದಿ ಪ್ರಧಾನಿ ಆದ ಬಳಿಕ ‘ಸ್ವಾಮಿನಾಥನ್‌ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗುವುದು, ಅದರಲ್ಲಿ ಎಂಎಸ್‌ಪಿಗೆ ಕಾನೂನು ಬೆಂಬಲ ನೀಡಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ, ಇದೂವರೆಗೂ ಆ ಮಾತನ್ನು ನಡೆಸಿಕೊಟ್ಟಿಲ್ಲ. ಸದ್ಯ ರೈತರು ಕನಿಷ್ಠ ಬೆಂಬಲ ಬೆಲೆಗೆ ಪ್ರತಿ ವರ್ಷವೂ ಹೋರಾಡುವ ಅನಿವಾರ್ಯ ಇದೆ. ಎಲ್ಲಿಯವರೆಗೆ ಇದಕ್ಕೆ ಕಾನೂನು ಬೆಂಬಲ ಸಿಗುವುದಿಲ್ಲವೋ ಅಲ್ಲಿಯವರೆಗೂ ರೈತರ ಶೋಷಣೆ ನಿಲ್ಲುವುದಿಲ್ಲ. ಆದ್ದರಿಂದ ದೆಹಲಿ ಕೇಂದ್ರವಾಗಿಸಿಕೊಂಡು, ರೈತರ ಹೋರಾಟ ಇನ್ನೂ ಮುಂದುವರಿಯಲಿದೆ’ ಎಂದೂ ಅವರು ಹೇಳಿದರು.

‘ಒಂದು ವರ್ಷದವರೆಗೆ ನಿರಂತರವಾಗಿ ಇಷ್ಟು ದೊಡ್ಡಮಟ್ಟದ ಹೋರಾಟ ಹಿಂದೆ ನಡೆದೇ ಇಲ್ಲ. ದೇಶದ 500ಕ್ಕೂ ಹೆಚ್ಚು ಸಂಘಟನೆಗಳು ಒಂದಾಗಿ ಸಂಯುಕ್ತ ಕಿಸಾನ್‌ ಮೋರ್ಚಾ ಕಟ್ಟಿಕೊಂಡು ಮಾಡಿದ ಈ ಹೋರಾಟ ಐತಿಹಾಸಿಕ ಜಯ ಕಂಡಿದೆ. ಹೋರಾಟದಲ್ಲಿ 806 ರೈತರು ಹುತಾತ್ಮರಾಗಿದ್ದಾರೆ. ಈ ಜಯದ ಮೂಲಕ ಅವರೆಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಮೃತಪಟ್ಟ ಎಲ್ಲರ ಕುಟುಂಬಗಳಿಗೂ ಪರಿಹಾರ ನೀಡುವವರೆಗೆ ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ’ ಎಂದೂ ಎಚ್ಚರಿಸಿದರು.

‘ಈ ಕರಾಳ ಕಾಯ್ದೆಗಳನ್ನು ಯಾವ ರೈತರೂ ಕೇಳಿರಲಿಲ್ಲ, ಯಾವ ರಾಜಕಾರಣಿಯೂ ಕೇಳಿರಲಿಲ್ಲ. ಆದರೂ ಮೋದಿ ಸರ್ಕಾರ ವಾಮಮಾರ್ಗದಿಂದ ಕಾಯ್ದೆಗಳನ್ನು ಜಾರಿ ಮಾಡಿ ರೈತರನ್ನು ಹೈರಾಣು ಮಾಡಿತು. ದೊಡ್ಡ ಸಂಖ್ಯೆಯ ರೈತರನ್ನು ಸರ್ಕಾರವೇ ಕೊಲೆ ಮಾಡಿದಂತಾಗಿದೆ. ಈ ಬಗ್ಗೆ ಕಾನೂನು ಹೋರಾಟ ಕೂಡ ಮಾಡುವುದು ಮುಖ್ಯವಾಗಿದೆ. ಸಂಯುಕ್ತ ಕಿಸಾನ್‌ ಮೋರ್ಚಾದ ಮುಂದಿನ ಕೋರ್‌ ಕಮಿಟಿ ಸಭೆಯಲ್ಲಿ ಈ ಬಗ್ಗೆಯೂ ಚರ್ಚಿಸುತ್ತೇನೆ’ ಎಂದರು.

‘ಪೌರತ್ವ ತಿದ್ದುಪಡಿಗೆ ಸಂಬಂಧಿಸಿದ ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆಗಳು ಬಿಜೆಪಿಯ ಕೋಮುವಾದ ಅಜೆಂಡಾಗೆ ಸಂಬಂಧಿಸಿದವು. ಹಾಗಾಗಿ, ರೈತರ ವಿಚಾರದಲ್ಲಿ ತಳೆದ ನಿರ್ಧಾರವನ್ನು ಪೌರತ್ವ ತಿದ್ದುಪಡಿ ಕಾಯ್ದೆಗಳ ವಿಚಾರದಲ್ಲಿ ತಳೆಯುವುದಿಲ್ಲ. ಕೋಮುದ್ವೇಷವನ್ನು ಜೀವಂತವಾಗಿ ಇಡುವುದು ಅವರ ಎಂದಿನ ಗುರಿ’ ಎಂದೂ ಬಿ.ಆರ್. ಪಾಟೀಲ ದೂರಿದರು.

ವಿವಿಧ ಸಂಘಟನೆಗಳ ಮುಖಂಡರೂ ವಿಜಯೋತ್ಸವದಲ್ಲಿ ಪಾಲ್ಗೊಂಡರು. ಸಂಯುಕ್ತ ಕಿಸಾನ್‌ ಮೋರ್ಚಾಗೆ ಜಯವಾಗಲಿ. ಜೈ ಜವಾನ್‌, ಜೈ ಕಿಸಾನ್‌ ಘೋಷಣೆ ಮೊಳಗಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರವನ್ನೂ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.