
ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಹೊಸ ವರ್ಷ ‘2026’ ಅನ್ನು ಬುಧವಾರ ರಾತ್ರಿ ಅದ್ದೂರಿಯಾಗಿ ಸ್ವಾಗತಿಸಿದರು.
ಗಡಿಯಾರದ ಮುಳ್ಳು ರಾತ್ರಿ ಸರಿಯಾಗಿ 12 ಗಂಟೆ ಹೊಡೆದಾಗ ಕಗ್ಗತ್ತಲು ಆವರಿಸಿದ್ದ ನಭದಲ್ಲಿ ಬಾಣ ಬಿರುಸಿಗಳ ಚಿತ್ತಾರ ಮೂಡಿತು. ಜನ ‘ಹೋ...’ ಎಂದು ಉದ್ಗರಿಸಿದರು. ‘ಹ್ಯಾಪಿ ನ್ಯೂ ಇಯರ್, ವೆಲ್‌ಕಮ್ ಟು ದಿ 2026’ ಘೋಷಣೆಗಳು ಮೊಳಗಿದವು.
ಈ ಸಂಭ್ರಮಕ್ಕಾಗಿ ಹಲವು ತಾಸುಗಳಿಂದ ಕಾಯುತ್ತಿದ್ದ ಯುವಜನರು ಉಸಿರು ಬಿಗಿ ಹಿಡಿದು ಕೊನೆಯ ಕ್ಷಣಗಳನ್ನು ‘10, 9, 8, 7, 6, 5...’ ಎನಿಸುತ್ತ ಹೋದರು. ‘ಆ’ ಕ್ಷಣ ಸಾಕಾರಗೊಂಡಾಗ ‘ಸಂಭ್ರಮ’ದ ಕಟ್ಟೆಯೊಡೆಯಿತು. ಹರುಷದ ಕೇಕೆ, ಉದ್ಗಾರದ ಹೊನಲು ಹರಿಯಿತು. ಅಬ್ಬರದ ಸಂಗೀತಕ್ಕೆ ಮನೋ ಇಚ್ಛೆ ಕುಣಿದು ಕುಪ್ಪಳಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ನೇಹಿತರು, ಕುಟುಂಬದವರು, ಸಹೋದ್ಯೋಗಿಗಳು ತಂಡಗಳಾಗಿ ತಮ್ಮದೇ ಬಗೆಯಲ್ಲಿ ಹೊಸ ವರ್ಷ ಸ್ವಾಗತಿಸಲು ಭರದ ಸಿದ್ಧತೆ ಮಾಡಿಕೊಂಡಿದ್ದರು.
ನಗರದಲ್ಲಿ ಕ್ಲಬ್‌ಗಳು, ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಹೊಸ ವರ್ಷದ ಸ್ವಾಗತಿಸಲು ಸಂಗೀತ, ನೃತ್ಯ, ತರಹೇವಾರಿ ಊಟದ ‘ಪಾರ್ಟಿ’ಗಳು ಆಯೋಜನೆಗೊಂಡಿದ್ದವು. ಅವುಗಳ ಪ್ರವೇಶಕ್ಕೆ ಪಾಸ್ ಹೊಂದಿದವರು, ಟೋಕನ್ ಪಡೆದವರನ್ನು ಮಾತ್ರವೇ ಒಳಗೆ ಪ್ರವೇಶಿಸಲು ಅನುಮತಿಸಿದ ನೋಟ ಕಂಡು ಬಂತು.
ನಗರದ ಹಲವೆಡೆ ಸ್ನೇಹಿತರೇ ಒಗ್ಗೂಡಿ ಮನೆಗಳ ಟೆರಸ್‌ಗಳಲ್ಲಿ ವಿದ್ಯುತ್ ದೀಪಗಳ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದರು. ಗ್ರಾಮೀಣ ಭಾಗದಲ್ಲಿ ಶಾಲಾ ಮೈದಾನಗಳು, ಕೃಷಿ ಭೂಮಿಗಳಲ್ಲಿ ‘ಹೊಸ ವರ್ಷ’ ಪಾರ್ಟಿಗಳು ಆಯೋಜನೆಯಾಗಿದ್ದು ಕಂಡು ಬಂತು. ಎಲ್ಲರೂ ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ, ಪರಸ್ಪರ ಶುಭ ಕೋರಿ ಹೊಸ ವರ್ಷ ಸ್ವಾಗತಿಸಿದರು.
ಸಂಗೀತ, ನೃತ್ಯ, ಸಂಭ್ರಮ
ಹೊಸ ವರುಷ ಸ್ವಾಗತಿಸಲು ಜನರು ಸಂಜೆಯೇ ಕೇಕ್, ಸಿಹಿ ತಿನಿಸು, ಕುರುಕಲು, ಮದ್ಯ, ತಂಪುಪಾನೀಯಗಳನ್ನು ತಂದು ಇರಿಸಿಕೊಂಡಿದ್ದರು. ರಾತ್ರಿಯಾಗುತ್ತಲೇ ಮದ್ಯಪಾನ ಹಾಗೂ ತಂಪು ಪಾನೀಯಗಳ ಹೀರುತ್ತ, ನೆಚ್ಚಿನ ಸಂಗೀತ ಆಲಿಸುತ್ತ, ಹಳೆಯ ವರ್ಷದ ನೆನಪು ಸ್ಮರಿಸುತ್ತ ನೋವು ಮರೆಯಲು–ಸಂತೋಷ ಸ್ವಾಗತಿಸಲು ರಾತ್ರಿ 12 ಗಂಟೆ ತನಕ ಕಾದರು. ಬಳಿಕ ಆಗಸದಲ್ಲಿ ಪಟಾಕಿ ಹಾರಿಸಿ, ಕೇಕ್ ಕತ್ತರಿಸಿ, ‘ಹೊಸ ವರ್ಷ’ದ ನಿರ್ಣಯಗಳನ್ನು ಮಾಡಿ ಸಂಭ್ರಮಿಸಿದರು.
ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ‘ಹೊಸ ವರ್ಷ’ದ ಅಂಗವಾಗಿ ಬುಧರಾತ್ರಿ ವಿಶೇಷ ಪ್ರಾರ್ಥನೆಗಳು, ಪ್ರವಚನಗಳು ನಡೆದವು.
ಹೊಸ ವರ್ಷದ ಅಂಗವಾಗಿ ವಿಶ್ವ ಶಾಂತಿ ಭ್ರಾತೃತ್ವಕ್ಕಾಗಿ ಚರ್ಚ್‌ನಲ್ಲಿ ವಿಶೇಷ ಪಾರ್ಥನೆ ನಡೆಸಲಾಯಿತು. ಕೇಕ್ ವಿತರಿಸಲಾಯಿತು– ರೆವರೆಂಡ್ ಜೋಸೆಫ್ ಪ್ರವೀಣ್, ದೈವಾನುಗ್ರಹ ಮಾತೆಯ ಪ್ರಧಾನಾಲಯದ ಮುಖ್ಯಗುರು
ಮುಗಿಬಿದ್ದು ಕೇಕ್‌ಗಳ ಖರೀದಿ
ಹೊಸ ವರ್ಷ ಸ್ವಾಗತಿಸಲು ಅಲಿಖಿತವಾಗಿ ಕಡ್ಡಾಯ ಎನಿಸಿರುವ ‘ಕೇಕ್’ಗಳ ಖರೀದಿಗೆ ಯುವಜನರು ಚಿಣ್ಣರು ಬುಧವಾರ ಬೇಕರಿಗಳ ಎದುರು ಮುಗಿಬಿದ್ದಿದ್ದರು. ಪಂತಂಗೆ ಜಸ್ಟ್ ಕೇಕ್ ಏಷಿಯನ್ ಬೇಕರಿ ನ್ಯೂ ಜನತಾ ಬೇಕರಿ ಸೇರಿದಂತೆ ನಗರದ ಬೇಕರಿಗಳಲ್ಲಿ ಜನ ದಟ್ಟಣೆ ಕಂಡು ಬಂತು. ಗ್ರಾಹಕರನ್ನು ಸ್ವಾಗತಿಸಲು ಬೇಕರಿಗಳು ಅಂಗಡಿ ಹೊರಗೆ ಟೇಬಲ್‌ಗಳನ್ನು ಇರಿಸಿ ಶಾಮಿಯಾನ್ ಅಳವಡಿಸಿ ತರಹೇವಾರಿ ಬಣ್ಣ ಆಕಾರ ಗಾತ್ರದ ಕೇಕ್‌ಗಳನ್ನು ಸಿದ್ಧಪಡಿಸಿ ಇಟ್ಟಿದ್ದರು. ಸೂರ್ಯಾಸ್ತದೊಂದಿಗೆ ಆರಂಭವಾದ ಕೇಕ್‌ಗಳ ಮಾರಾಟ ರಾತ್ರಿ 11 ಗಂಟೆ ತನಕವೂ ಸಾಗಿತ್ತು.
‘ಕಳೆದ ವರ್ಷಕ್ಕಿಂತಲೂ ಈ ವರ್ಷ ಉತ್ತಮ ವ್ಯಾಪಾರ ಆಗಿದೆ. ನಿತ್ಯ 30ರಿಂದ 40 ಕೆ.ಜಿಗಳಷ್ಟು ಕೇಕ್ ಮಾರಾಟವಾಗುತ್ತದೆ. ಈ ಸಲ ಹೊಸ ವರ್ಷಕ್ಕಾಗಿ 100 ಕೆ.ಜಿಗೂ ಅಧಿಕ ಕೇಕ್‌ಗಳ ಮುಂಗಡ ಬುಕಿಂಗ್ ಆಗಿತ್ತು. ರಾತ್ರಿ 9 ಗಂಟೆ ತನಕ 600 ಕೆ.ಜಿಗೂ ಅಧಿಕ ಕೇಕ್ ಮಾರಾಟವಾಗಿದೆ’ ಎಂದು ಜಸ್ಟ್ ಕೇಕ್ ಬೇಕರಿಯ ಮಾಲೀಕ ಕಲ್ಯಾಣರಾವ್ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.