
ಆಳಂದ: ತಾಲ್ಲೂಕಿನ ಗಡಿಗ್ರಾಮ ನಿರಗುಡಿಯಲ್ಲಿ ಶ್ರೀ ರೇವಣಸಿದ್ದೇಶ್ವರ ದೇವರ ರಥೋತ್ಸವವು ಸೋಮವಾರ ಸಂಭ್ರಮದಿಂದ ಜರುಗಿತು. ಗಡಿಗ್ರಾಮದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಮಹಾಶಿವರಾತ್ರಿ ನಿಮಿತ್ತ ನಿರಗುಡಿ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಜರುಗಿದ ಜಾತ್ರೆ ಅಂಗವಾಗಿ ಭಾನುವಾರ ಸಂಜೆಯು ಗ್ರಾಮದ ಮುಖ್ಯಬೀದಿಗಳಿಂದ ಪಲ್ಲಕ್ಕಿ ಮೆರವಣಿಗೆಯು ಜರುಗಿತು. ಪುರವಂತರ ಕುಣಿತ, ವಿವಿಧ ಬಾಜಾ ಭಜಂತ್ರಿಗಳ ಸಡಗರ, ಯುವಕರ ಕುಣಿತ, ಕೋಲಾಟ, ಡೊಳ್ಳು ಕುಣಿತವು ಪಲ್ಲಕ್ಕಿ ಉತ್ಸವಕ್ಕೆ ಕಳೆ ಕಟ್ಟಿತು. ರಾತ್ರಿಯಿಡಿ ವಿವಿಧ ಭಜನಾ ಮೇಳಗಳಿಂದ ಭಜನೆ ಜಾಗರಣೆ ಹಮ್ಮಿಕೊಳ್ಳಲಾಯಿತು. ಸೋಮವಾರ ಬೆಳಿಗ್ಗೆ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅಗ್ನಿ ಹಾದು ಭಕ್ತರು ತಮ್ಮ ಹರಕೆ ತೀರಿಸಿದರು.
ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಸಾಮೂಹಿಕವಾಗಿ ಅಗ್ನಿ ಹಾಯ್ದರು. ನಂತರ ಮಲ್ಲಿನಾಥ ಮಹಾರಾಜರೂ ದರ್ಶನ, ಸತ್ಕಾರ ಮಾಡಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದರು. ಗೋಧೂಳಿ ಸಮಯದಲ್ಲಿ ರೇವಣಸಿದ್ದೇಶ್ವರರ ರಥೋತ್ಸವವು ಅದ್ದೂರಿಯಾಗಿ ಸಾಗಿ ಬಂತು. ಭಕ್ತರು ಉತ್ತತ್ತಿ, ಬಾಳೆಹಣ್ಣು, ಫಲಪುಷ್ಪ ಸುರಿದು ತಮ್ಮ ಹರಕೆ ತೀರಿಸಿದರು.
ನಿರಗುಡಿ, ಮಟಕಿ, ಪಡಸಾವಳಿ, ಸರಸಂಬಾ, ಚಿಂಚೋಳಿ. ತೀರ್ಥ, ಸಾಲೇಗಾಂವ, ಕೊರಳ್ಳಿ, ಸಾವಳೇಶ್ವರ ಸೇರಿದಂತೆ ಆಳಂದ, ಕಲಬುರಗಿ, ಬೀದರ್, ಅಕ್ಕಲಕೋಟ, ಉಮರ್ಗಾ, ಸೋಲಾಪುರದಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಶಾಸಕ ಬಿ.ಆರ್.ಪಾಟೀಲ, ಮುಖಂಡ ಶಂಕರರಾವ ದೇಶಮುಖ, ವೈಜುನಾಥ ಝಳಕಿ, ಗೌರಿಶಂಕರ ಗಡಿಶೆಟ್ಟಿ, ಸಿದ್ದಣ್ಣ ದೇಸಾಯಿ, ಶಿವಲಿಂಗಪ್ಪ ಸೀಮಿಕೋರೆ, ಆನಂದ ದೇಶಮುಖ, ರಾಜು ಗಾಡೇಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.