ADVERTISEMENT

ಕಲಬುರಗಿ: ಕಲ್ಯಾಣದಲ್ಲಿ ಸಾಂಸ್ಕೃತಿಕ ಟ್ರಸ್ಟ್‌ಗಳಿಗೂ ಬರ!

ರಾಷ್ಟ್ರಮಟ್ಟದ ಸಾಧಕರಿದ್ದರೂ ಅವರ ಹೆಸರಿನ ಟ್ರಸ್ಟ್‌ಗಳಿಲ್ಲ

ಮನೋಜ ಕುಮಾರ್ ಗುದ್ದಿ
Published 3 ಸೆಪ್ಟೆಂಬರ್ 2022, 15:30 IST
Last Updated 3 ಸೆಪ್ಟೆಂಬರ್ 2022, 15:30 IST
ಬಸವರಾಜ ಪಾಟೀಲ, ಡಾ.ಎಚ್.ಟಿ.ಪೋತೆ, ಡಾ.ಜಯದೇವಿ ಜಂಗಮಶೆಟ್ಟಿ
ಬಸವರಾಜ ಪಾಟೀಲ, ಡಾ.ಎಚ್.ಟಿ.ಪೋತೆ, ಡಾ.ಜಯದೇವಿ ಜಂಗಮಶೆಟ್ಟಿ   

ಕಲಬುರಗಿ: ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ, ಸಂಗೀತ, ಚಿತ್ರಕಲೆ, ಸಮಾಜ ಸುಧಾರಣೆ, ಶಿಲ್ಪಕಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ ಖ್ಯಾತನಾಮರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಗಿ ಹೋದರೂ ಇನ್ನೂ ಅವರ ಹೆಸರಿನಲ್ಲಿ ಟ್ರಸ್ಟ್‌ಗಳ ರಚನೆಯಾಗದಿರುವುದು ಈ ಭಾಗದವರಲ್ಲಿ ನಿರಾಸೆ ಮೂಡಿಸಿದೆ.

ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 21 ಟ್ರಸ್ಟ್‌ಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿತ್ತು. ಆ ಟ್ರಸ್ಟ್‌ಗಳಲ್ಲಿಯೂ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸಾಧಕರು, ತಜ್ಞರನ್ನು ಕಡೆಗಣನೆ ಮಾಡಿದ್ದು ಕಣ್ಣಿಗೆ ರಾಚುವಂತಿತ್ತು.

ಇಲ್ಲಿಯವರೆಗೆ ರಚನೆಯಾದ ಬಹುತೇಕ ಟ್ರಸ್ಟ್‌ಗಳು ಬೆಂಗಳೂರು, ಧಾರವಾಡ, ಬೆಳಗಾವಿ, ಉಡುಪಿ, ಮಂಡ್ಯ, ಚಿಕ್ಕಮಗಳೂರು, ತುಮಕೂರು, ಬಾಗಲಕೋಟೆ, ವಿಜಯಪುರ ಸೇರಿದಂತೆ ಕೆಲವೇ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿವೆ. ಧಾರವಾಡದಲ್ಲಿ ಐದು ಟ್ರಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿರುವ 21 ಟ್ರಸ್ಟ್‌ಗಳಲ್ಲಿ ಒಂದು ಟ್ರಸ್ಟ್‌ ಸಹ ಕಲ್ಯಾಣ ಕರ್ನಾಟಕಕ್ಕೆ ಸೇರಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರುವವರೂ ಇಲ್ಲ. ರಾಜಧಾನಿ ಬೆಂಗಳೂರು ದೂರ ಆಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ತಮ್ಮ ಭಾಗದ ಸಾಧಕರ ಹೆಸರಿನ ಟ್ರಸ್ಟ್‌ ರಚನೆಗೆ ನಿರಂತರ ಒತ್ತಡ ಹೇರುವ ಆಸಕ್ತಿಯೂ ಈ ಭಾಗದಲ್ಲಿ ಇಲ್ಲ ಎಂದು ಕೆಲ ಸಾಹಿತ್ಯಾಸಕ್ತರು ವಿಷಾದಿಸುತ್ತಾರೆ.

ಟ್ರಸ್ಟ್‌ನಿಂದ ಏನು ಪ್ರಯೋಜನ? ಸಾಧಕರ ಹೆಸರಿನಲ್ಲಿ ಟ್ರಸ್ಟ್‌ಗಳು ರಚನೆಯಾದರೆ ಸರ್ಕಾರದಿಂದ ಪ್ರತಿ ವರ್ಷ ನಿರ್ದಿಷ್ಟ ಅನುದಾನ ಬಿಡುಗಡೆಯಾಗುತ್ತದೆ. ಅದಕ್ಕೆ ಅಧ್ಯಕ್ಷರು, ಸದಸ್ಯರು ನೇಮಕವಾಗುತ್ತಾರೆ. ಆಯಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಪ್ರತಿ ವರ್ಷ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿಯನ್ನೂ ನೀಡಬಹುದಾಗಿದೆ. ಜೊತೆಗೆ, ಸಾಧಕರ ಕುರಿತಾದ ಕೃತಿಗಳನ್ನೂ ಬಿಡುಗಡೆ ಮಾಡಬಹುದಾಗಿದೆ.

ಉದಾಹರಣೆಗೆ ಪೌರಾಣಿಕ ಪಾತ್ರಗಳನ್ನು ರಚಿಸುವ ಮೂಲಕ ಮನೆಮಾತಾಗಿದ್ದ ಮಹಾನ್ ಕಲಾವಿದರಾದ ಕಲಬುರಗಿಯ ಎಸ್‌.ಎಂ. ಪಂಡಿತ ಅವರ ಹೆಸರಿನಲ್ಲಿ ಟ್ರಸ್ಟ್ ರಚನೆಯಾದರೆ ಚಿತ್ರಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಬಹುದಾಗಿದೆ. ಜೊತೆಗೆ, ತರಬೇತಿ ಕಾರ್ಯಾಗಾರಗಳನ್ನೂ ಏರ್ಪಡಿಸಹುದಾಗಿದೆ.

ರಾಯಚೂರಿನ ಸಿದ್ದರಾಮ ಜಂಬಲದಿನ್ನಿ ಅವರ ಹೆಸರಿನ ಟ್ರಸ್ಟ್ ರಚನೆಯಾದರೆ, ಧಾರವಾಡದ ಪಂ. ಬಸವರಾಜ ರಾಜಗುರು ಟ್ರಸ್ಟ್ ಮಾಡುವಂತೆ ಪ್ರತಿ ವರ್ಷ ಸಂಗೀತಗಾರರನ್ನು ಕರೆಸಿ ಕಛೇರಿ ಏರ್ಪಡಿಸಬಹುದಾಗಿದೆ. ಯುವ ಸಂಗೀತ ಸಾಧಕರಿಗೆ ಪ್ರಶಸ್ತಿಯನ್ನೂ ಏರ್ಪಡಿಸಬಹುದಾಗಿದೆ.

ಯಾರ ಹೆಸರಿನಲ್ಲಿ ಟ್ರಸ್ಟ್‌ಗಳಾಗಬೇಕು?
ಕಲ್ಯಾಣ ಕರ್ನಾಟಕದ ಅಸ್ಮಿತೆಯನ್ನು ಹೊರನಾಡಿಗೆ ತಿಳಿಸಿಕೊಟ್ಟ ಡಾ.ಎಸ್.ಎಂ. ಪಂಡಿತ್, ಸಿದ್ದರಾಮ ಜಂಬಲದಿನ್ನಿ, ರಾಯಚೂರಿನಲ್ಲಿ ಆಶ್ರಮ ಸ್ಥಾಪಿಸಿ ನಿರ್ಗತಿಕರಿಗೆ ಬೆಳಕಾಗಿದ್ದ ಪಂ. ತಾರಾನಾಥ, ಜೋಳದರಾಶಿ ದೊಡ್ಡನಗೌಡ, ಸಿದ್ದಯ್ಯ ಪುರಾಣಿಕ, ಶಾಂತರಸ ಹೆಂಬೆರಾಳು, ಸುಭದ್ರಮ್ಮ ಮನ್ಸೂರ್, ಚನ್ನಣ್ಣ ವಾಲೀಕಾರ, ಡಾ.ಗೀತಾ ನಾಗಭೂಷಣ ಸೇರಿದಂತೆ ಇನ್ನೂ ಹಲವರ ಹೆಸರಿನಲ್ಲಿ ಟ್ರಸ್ಟ್‌ ರಚನೆಯಾದರೆ ಆ ಮೂಲಕ ಇನ್ನಷ್ಟು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗಲಿದೆ ಎನ್ನುತ್ತಾರೆ ಸಾಹಿತ್ಯಾಸಕ್ತರು.

*

ಸಾಹಿತ್ಯ ಹಾಗೂ ಆಡಳಿತ ಕ್ಷೇತ್ರದಲ್ಲಿ ಹೆಸರು ಮಾಡಿದ ಸಿದ್ದಯ್ಯ ಪುರಾಣಿಕ, ಲೋಕಸೇವಕ ಸಂಘ ಕಟ್ಟಿ ಸಂಸತ್ತಿನಲ್ಲಿ ಮೊದಲ ಬಾರಿಗೆ ಪ್ರತಿನಿಧಿಸಿ ಆಯ್ಕೆಯಾದ ಅಳವಂಡಿ ಶಿವಮೂರ್ತಿಸ್ವಾಮಿ ಅವರ ಹೆಸರಿನಲ್ಲಿ ಟ್ರಸ್ಟ್ ಮಾಡಿದರೆ ಈ ಭಾಗಕ್ಕೆ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ.
-ಬಸವರಾಜ ಪಾಟೀಲ ಸೇಡಂ, ಅಧ್ಯಕ್ಷರು, ಕ.ಕ. ಮಾನವ ಸಂಪನ್ಮೂಲ, ಕೃಷಿ, ಸಾಂಸ್ಕೃತಿಕ ಸಂಘ

*

ಕಲ್ಯಾಣ ಕರ್ನಾಟಕದಲ್ಲಿ ಸಾಕಷ್ಟು ಸಾಹಿತಿಗಳಿದ್ದರೂ ಅವರ ಹೆಸರಿನಲ್ಲಿ ಟ್ರಸ್ಟ್‌ಗಳಿಲ್ಲದಿರುವುದು ಸೋಜಿಗದ ಸಂಗತಿ. ಈಚೆಗೆ ಪ್ರಕಟವಾಗಿದ್ದ ಟ್ರಸ್ಟ್‌ ಅಧ್ಯಕ್ಷರು, ಸದಸ್ಯರು ಪಟ್ಟಿಯಲ್ಲಿಯೂ ಈ ಭಾಗಕ್ಕೆ ಅನ್ಯಾಯವಾಗಿತ್ತು.
-ಪ್ರೊ.ಎಚ್‌.ಟಿ. ಪೋತೆ, ನಿರ್ದೇಶಕರು, ಕನ್ನಡ ಅಧ್ಯಯನ ಸಂಸ್ಥೆ, ಗುವಿವಿ

*

ಶರಣರ ನಾಡಿನ ಕಲ್ಯಾಣ ಕರ್ನಾಟಕವು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದೆ. ಸಾಹಿತ್ಯದಲ್ಲೂ ಹಿಂದುಳಿದಿಲ್ಲ. ಆದ್ದರಿಂದ ಈ ಭಾಗದ ಸಾಂಸ್ಕೃತಿಕ ಅಭಿವೃದ್ಧಿಗೆ ಸಾಧಕರ ಹೆಸರಿನಲ್ಲಿ ಟ್ರಸ್ಟ್‌ಗಳು ರಚನೆಯಾಗಬೇಕು.
-ಡಾ. ಜಯದೇವಿ ಜಂಗಮಶೆಟ್ಟಿ, ಗಾಯಕಿ, ಸಹಾಯಕ ಪ್ರಾಧ್ಯಾಪಕಿ, ಕೇಂದ್ರೀಯ ವಿ.ವಿ.

*

ರಾಯಚೂರು ಮೂಲದ ಕಲಾವಿದರೊಬ್ಬರ ಹೆಸರಿನಲ್ಲಿ ಟ್ರಸ್ಟ್ ರಚಿಸುವ ಬಗ್ಗೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅದನ್ನು ಇಲಾಖೆಯ ಮುಖ್ಯಸ್ಥರಿಗೆ ಕಳಿಸಿಕೊಡಲಿದ್ದೇವೆ. ಉಳಿದಂತೆ ಬೇರೆ ಪ್ರಸ್ತಾವಗಳು ಬಂದಿಲ್ಲ.
-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.