ADVERTISEMENT

ಕಲಬುರಗಿ: ನಿರ್ವಹಣೆಯಾಗದ ರೈಲ್ವೆ ಅಂಡರ್‌ ಬ್ರಿಡ್ಜ್‌ಗಳು

ಪಾದಚಾರಿಗಳು, ಬೈಕ್‌ ಸವಾರರು, ಅಟೊ ರಿಕ್ಷಾದವರಿಗೆ ಕಿರಿಕಿರಿ

ಮಲ್ಲಪ್ಪ ಪಾರೇಗಾಂವ
Published 27 ಮೇ 2025, 5:14 IST
Last Updated 27 ಮೇ 2025, 5:14 IST
ಕಲಬುರಗಿ ನಗರದ ರೈಲ್ವೆ ಅಂಡರ್‌ ಬ್ರಿಡ್ಜ್‌ ಕೆಳಗೆ ಮಳೆ ನೀರು ಸಂಗ್ರಹಗೊಂಡಿರುವುದು
ಕಲಬುರಗಿ ನಗರದ ರೈಲ್ವೆ ಅಂಡರ್‌ ಬ್ರಿಡ್ಜ್‌ ಕೆಳಗೆ ಮಳೆ ನೀರು ಸಂಗ್ರಹಗೊಂಡಿರುವುದು   

ಕಲಬುರಗಿ: ನಗರಲ್ಲಿರುವ ರೈಲ್ವೆ ಅಂಡರ್‌ ಬ್ರಿಡ್ಜ್‌ಗಳು ಸೂಕ್ತ ನಿರ್ವಹಣೆಯಿಲ್ಲದೆ ಪಾದಚಾರಿಗಳು, ಬೈಕ್‌ ಸವಾರರು, ಅಟೊ ರಿಕ್ಷಾ ಚಾಲಕರು ಪರದಾಡುವಂತಾಗಿದೆ. ಮಳೆಯಾದರೆ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ಬ್ರಿಡ್ಜ್‌ ದಾಟಲು ದಾರಿ ಇರುವುದಿಲ್ಲ. ಅಲ್ಲದೇ ಅಂಡರ್‌ ಬ್ರಿಡ್ಜ್‌ನ ಕೆಳಗೆ ಕೊಳಕು ನೀರು ತೊಟ್ಟಿಕ್ಕುವುದರಿಂದ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ.

ನಗರದಲ್ಲಿ ಪಿಡಿಎ ಕಾಲೇಜು ಎದುರು, ಹಳೆ ಜೇವರ್ಗಿ ರಸ್ತೆ ಹಾಗೂ ಬಿದ್ದಾಪುರ ಕಾಲೊನಿಯಲ್ಲಿ ರೈಲ್ವೆ ಅಂಡರ್‌ ಬ್ರಿಡ್ಜ್‌ಗಳಿದ್ದು, ವಾಹನ ದಟ್ಟಣೆಯೂ ಇದೆ. ಆದರೆ ಮಳೆಯಾದರೆ ರೈಲ್ವೆ ಅಂಡರ್‌ ಬ್ರಿಡ್ಜ್‌ಗಳಲ್ಲಿ ಮಳೆ ನೀರು ಸಂಗ್ರಹಗೊಂಡು ವಾಹನ ಸವಾರರು ಪರದಾಡಬೇಕಾಗುತ್ತದೆ. ಅಲ್ಲದೆ ವಾಹನಗಳು ಮುಂದೆ ಸಾಗಲು ದಾರಿಯಿಲ್ಲದೆ ವಾಹನ ದಟ್ಟಣೆ ಹೆಚ್ಚುತ್ತದೆ. ಸೂಕ್ತ ನಿರ್ವಹಣೆಯಾಗದೇ ಇದ್ದುದರಿಂದ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಅಲ್ಲದೆ ಚರಂಡಿಯು ಕಸ ಕಡ್ಡಿ, ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ತುಂಬಿಕೊಂಡಿದೆ. ಮಳೆಯಾದರೆ ವಾಹನ ಸವಾರರು ಗಂಟೆಗಟ್ಟಲೇ ಕಾಯಬೇಕಾಗುತ್ತದೆ. ಒಂದು ವೇಳೆ ನೀರಿನಲ್ಲೇ ಸಾಗಿದರೆ, ವಾಹನಗಳ ಸೈಲೆನ್ಸರ್‌ ಪೈಪ್‌ನಲ್ಲಿ ನೀರು ನುಗ್ಗುವ ಮೂಲಕ ಬೈಕ್‌, ಅಟೊ ರಿಕ್ಷಾಗಳು ಕೆಟ್ಟು ಅಲ್ಲೇ ನಿಂತುಬಿಡುತ್ತವೆ. ಇಂತಹ ಸಂಕಷ್ಟಕ್ಕೀಡಾಗಿರುವ ಚಾಲಕರು, ಬೈಕ್‌ ಸವಾರರ ಹಲವು ಉದಾಹರಣೆಗಳಿವೆ.

ಸೋರುತ್ತವೆ: ರೈಲ್ವೆ ಅಂಡರ್‌ ಬ್ರಿಡ್ಜ್‌ಗಳು ರೈಲ್ವೆ ಸ್ವಚ್ಛಗೊಳಿಸುವಾಗ ನೀರು ಹರಿಸಿದರೆ ಅಥವಾ ಮಳೆಯಾದರೆ ಸೋರುತ್ತವೆ. ಇದರಿಂದ ಶುಭ ಸಮಾರಂಭಗಳು, ಮಹತ್ವದ ಕಾರ್ಯಗಳಿಗೆ ಕೊಳಕು ನೀರು ಬೀಳುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಅಲ್ಲದೆ ದುರ್ನಾತ ಬೀರುವುದರಿಂದ ಮತ್ತೆ ಮನೆಗೆ ಹೋಗಿ ಬರುವಂತಹ ಪ್ರಸಂಗಗಳು ನಡೆದಿವೆ.

ADVERTISEMENT

ಮಳೆಯಾದರೆ ರೈಲ್ವೆ ಅಂಡರ್‌ ಬ್ರಿಡ್ಜ್‌ನಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತದೆ. ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ಅಲ್ಲದೆ ಬ್ರಿಡ್ಜ್‌ ಕೆಳಗಿನಿಂದ ತೆರಳವಾಗ ಮೈಮೇಲೆಯೇ ಕೊಳಕು ನೀರು ಬೀಳುತ್ತದೆ. ಬಳಿಕ ಗಬ್ಬುನಾತ ಬೀರುತ್ತದೆ. ಹೀಗಾಗಿ ಸಂಬಂಧಿಸಿದ ಅಧಿಕಾರಗಿಳು ಬ್ರಿಡ್ಜ್‌ ಸೋರುವುದನ್ನು ಹಾಗೂ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಬಹುತೇಕರು ರೈಲ್ವೆ ಅಂಡರ್‌ ಬ್ರಿಡ್ಜ್‌ಗಳನ್ನು ರೈಲ್ವೆ ಇಲಾಖೆಯೇ ನಿರ್ವಹಣೆ ಮಾಡುತ್ತವೆ ಎಂದು ಕೊಂಡಿದ್ದಾರೆ. ಆದರೆ ಅವು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅವುಗಳನ್ನು ಸ್ಥಳೀಯ ಆಡಳಿತಗಳೇ ನಿರ್ವಹಿಸುತ್ತವೆ ಎಂದು ರೈಲ್ವೆ ಎಂಜಿನಿಯರ್‌ ಮಾಹಿತಿ ನೀಡಿದರು.

ಬ್ರಿಡ್ಜ್ ಸೋರುವಿಕೆಗೆ ನಾವೇನೂ ಮಾಡಲು ಸಾಧ್ಯವಿಲ್ಲ. ಆದರೆ ಮಳೆಯಾದರೆ ಬ್ರಿಡ್ಜ್‌ನಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ನೀರು ಬೇಗ ಹರಿದುಹೋಗಲು ಕ್ರಮಕೈಗೊಳ್ಳಲಾಗುವುದು
- ಆರ್‌.ಪಿ. ಜಾಧವ, ಕೆಯುಐಎಫ್‌ಡಿಸಿ ಅಧೀಕ್ಷಕ ಎಂಜಿನಿಯರ್‌
ಕೋರಂಟಿ ಪ್ರದೇಶದಲ್ಲಿ ಮನೆಯಿದ್ದು ಬ್ರಿಡ್ಜ್ ದಾಟುವುದೆಂದರೆ ಕಿರಿಕಿರಿಯೆನಿಸುತ್ತದೆ. ಮಳೆಯಾದರೆ ಬ್ರಿಡ್ಜ್‌ ನೀರಿನಿಂದ ಆವೃತವಾಗಿರುತ್ತದೆ. ಅದೇ ಕೊಳಕು ನೀರಿನಲ್ಲಿ ಹಾಯ್ದು ಮನೆಗೆ ಹೋಗಬೇಕು
ರಾಜಶೇಖರ ಸೂಗುರು, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.