ADVERTISEMENT

ಜೇವರ್ಗಿ| ಕಲುಷಿತ ನೀರು ಕುಡಿದು ವೃದ್ಧ ಸಾವು

ಅಸ್ವಸ್ಥಗೊಂಡ 46 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 18:28 IST
Last Updated 10 ಸೆಪ್ಟೆಂಬರ್ 2022, 18:28 IST
   

ಜೇವರ್ಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮಂದೇವಾಲ ಗ್ರಾಮ ದಲ್ಲಿ ಕಲುಷಿತ ನೀರು ಕುಡಿದು ತಾಯಪ್ಪ ಯಂಕಪ್ಪ ಬೇಲೂರ (80) ಎಂಬುವರು ಮೃತಪಟ್ಟು, ವಾಂತಿ–ಭೇದಿಯಿಂದ ಅಸ್ವಸ್ಥಗೊಂಡಿರುವ 46 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಅಸ್ವಸ್ಥರು ಮಂದೇವಾಲದ ಪ್ರಾಥಮಿಕ ಆರೋಗ್ಯ ಕೇಂದ್ರ, ಜೇವರ್ಗಿಯ ತಾಲ್ಲೂಕು ಆಸ್ಪತ್ರೆ ಮತ್ತು ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ)
ಡಾ. ಶರಣಬಸಪ್ಪ ಕ್ಯಾತನಾಳ ತಿಳಿಸಿದರು.

‘ಗ್ರಾಮದಲ್ಲಿ ಪೂರೈಕೆಯಾಗುವ ಕೊಳವೆಬಾವಿ ನೀರು ಜೊತೆ ಕಲುಷಿತ ನೀರು ಮಿಶ್ರಣಗೊಂಡಿದೆ. ಅದೇ ನೀರನ್ನು ಕುಡಿದ ಗ್ರಾಮಸ್ಥರು ವಾಂತಿ–ಭೇದಿಯಿಂದ ನರಳುತ್ತಿ
ದ್ದಾರೆ‌’ ಎಂದು ಅವರು ತಿಳಿಸಿದರು.

ADVERTISEMENT

‘ಅಸ್ವಸ್ಥರನ್ನು ಭೇಟಿಯಾಗಿ, ಮಾಹಿತಿ ಪಡೆದಿದ್ದೇನೆ. ಕಲುಷಿತ ನೀರು ಹೇಗೆ ಪೂರೈಕೆಯಾಯಿತು ಎಂಬುದರ ಬಗ್ಗೆ ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಾಯಪ್ಪ ಬೇಲೂರ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ಧನದ ಚೆಕ್‌ ನೀಡಿದ್ದೇನೆ’ ಎಂದು ಜೇವರ್ಗಿ ಶಾಸಕ ಡಾ. ಅಜಯ ಸಿಂಗ್ ತಿಳಿಸಿದರು.

‘ಮೂರು ದಿನಗಳ ಹಿಂದೆ ಚಂದಮ್ಮ (90) ಎಂಬುವರು ಮೃತಪಟ್ಟಿದ್ದು, ಅವರ ಸಾವಿಗೆ ಕಲುಷಿತ ನೀರು ಕಾರಣವೇ ಅಥವಾ ಬೇರೆ ಸಮಸ್ಯೆಯಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮೃತ ತಾಯಪ್ಪ ಅವರ ಮನೆಯಿಂದ ನೀರಿನ ಮಾದರಿ ಸಂಗ್ರಹಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಿದ್ದು ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.