ADVERTISEMENT

ಕಲಬುರ್ಗಿ:‌ ಕೋವಿಡ್‌ ವರದಿ ವಿಳಂಬಕ್ಕೆ ಸೋಂಕಿತರ ಆಕ್ರೋಶ, ಆವರಣದಲ್ಲೇ ಧರಣಿ

ನಾಗನಹಳ್ಳಿ ಕೋವಿಡ್ ಕೇರ್‌ ಕೇಂದ್ರದಲ್ಲಿನ 350 ಮಂದಿಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 13:17 IST
Last Updated 16 ಜುಲೈ 2020, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ:‌ ಎರಡನೇ ಬಾರಿಯ ಗಂಟಲು ಮಾದರಿಗಳನ್ನು ಸಂಗ್ರಹಿಸಿ ವಾರ ಕಳೆದರೂ ವರದಿ ನೀಡದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ, ಸಮೀಪದ ನಾಗನಹಳ್ಳಿಯ ಕೋವಿಡ್‌ ಕೇರ್ ಸೇಂಟರ್‌ನ 350ಕ್ಕೂ ಹೆಚ್ಚು ಸೋಂಕಿತರು ಗುರುವಾರ ತೀವ್ರ ಆಕ್ರೋಶ ಹೊರಹಾಕಿದರು.

ನಗರ ಹೊರವಲಯದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿದ ಕಟ್ಟಡದಲ್ಲಿರುವ ಸೋಂಕಿತರು ಜುಲೈ 3ರಂದು ಕೂಡ ಪ್ರತಿಭಟನೆ ಮಾಡಿ, ಆರೋಗ್ಯಾಧಿಕಾರಿಗೆ ಮನವಿ ಪತ್ರ ಬರೆದಿದ್ದರು. ಈಗ ಮತ್ತೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಕ್ರೋಶ– ಅಸಹಾಯಕತೆ ಹೊರಹಾಕಿದ್ದಾರೆ. ಎಲ್ಲರೂ ಕೇಂದ್ರದ ಆವರಣದಲ್ಲೇ ಬೀಡುಬಿಟ್ಟು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಧಿಕ್ಕಾರ ಕೂಗಿದರು. ಯುವಕರು, ವೃದ್ಧರು, ಮಹಿಳೆಯರು ಕೂಡ ಮೊಬೈಲ್‌ ಮೂಲಕ ವಿಡಿಯೊ ಮಾಡಿ ತಮ್ಮ ಅಳಲು ತೋಡಿಕೊಂಡರು.

‘ನಮ್ಮ ಕುಟುಂಬದ 12 ಮಂದಿಯನ್ನು ಇಲ್ಲಿ ಇಟ್ಟಿದ್ದಾರೆ. ಮೊದಲ ಬಾರಿ ನೀಡಿದ ಗಂಟಲು ಮಾದರಿ ಪಾಸಿಟಿವ್ ರಿಪೋರ್ಟ್‌ ಬಂದು ವಾರ ಮುಗಿದಿದೆ. ಮತ್ತೆ ಮಾದರಿ ಸಂಗ್ರಹಿಸಿ ಎಂಟು ದಿನವಾಗಿದ್ದರೂ ವರದಿ ನೀಡುತ್ತಿಲ್ಲ. ನಾವು ಗುಣಮುಖರಾಗಿದ್ದೇವೋ, ಇಲ್ಲವೋ ಹೇಗೆ ಗೊತ್ತಾಗಬೇಕು? ದಿನೇದಿನೇ ಹೊರ ರೋಗಿಗಳನ್ನು ತಂದು ಹಾಕುತ್ತಿದ್ದಾರೆ. ಇದರಿಂದ ಗುಣಮುಖರಾದವರಿಗೂ ಕಷ್ಟವಾಗುತ್ತದೆ. ಇಡೀ ಕುಟುಂಬವನ್ನು ಇಲ್ಲಿ ಕೂಡಿ ಹಾಕಿದ್ದಾರೆ. ಊರಿನಲ್ಲಿ ಸಾಕಷ್ಟು ಮಳೆ ಆಗಿದ್ದು, ಹೊಲ– ಮನೆಗೆ ಸಾಕಷ್ಟು ಹಾನಿ ಆಗುತ್ತಿದೆ. ಹೀಗಾದರೆ ನಮ್ಮ ಬದುಕು ಹೇಗೆ?’ ಎಂದೂ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಇಲ್ಲಿ ಐದಾರು ದಿನಕ್ಕೆ ವೈದ್ಯರು ಬಂದು ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ ಹೋಗುತ್ತಾರೆ. ಬೇರೇನೂ ವೈದ್ಯಕೀಯ ಸೌಕರ್ಯವಿಲ್ಲ. ಊಟ ಕೂಡ ಗುಣಮಟ್ಟದಿಂದ ಕೂಡಿಲ್ಲ. ಬೆಳಿಗ್ಗೆ ಮಾಡಿದ್ದನ್ನೇ ರಾತ್ರಿಗೆ ಕೊಡುತ್ತಾರೆ. ಶೌಚಾಲಯಗಳನ್ನು ಸ್ವಚ್ಛ ಮಾಡುವವರೇ ಇಲ್ಲ. ಸ್ನಾನಕ್ಕೆ ಬಿಸಿನೀರು ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಒಮ್ಮೆಯೂ ಕೊಟ್ಟಿಲ್ಲ. ಕನಿಷ್ಠ ಒಂದು ಬಕೀಟ್‌ ಕೂಡ ಬಾತ್‌ರೂಮ್‌ಗಳಲ್ಲಿ ಇಲ್ಲ. ಪಾಸಿಟಿವ್‌ ಬಂದವರಲ್ಲಿ ಬಾಣಂತಿಯರು, ಪುಟ್ಟ ಮಕ್ಕಳೂ ಇದ್ದಾರೆ. ದಿನವೂ ತನ್ನೀರು ಸ್ನಾನ ಮಾಡಿದರೆ ಅವರ ಆರೋಗ್ಯದ ಗತಿ ಏನು?’ ಎಂದೂ ಕೋಪ ಹೊರಹಾಕಿದ್ದಾರೆ.

ಕೇಂದ್ರಕ್ಕೆ ಬರುವ ಆರೋಗ್ಯ ಇಲಾಖೆ ಸಿಬ್ಬಂದಿ ಪಿಪಿಇ ಕಿಟ್‌, ಮಾಸ್ಕ್‌, ಹ್ಯಾಂಡ್‌ಗ್ಲೌಸ್‌, ಔಷಧ ಬಾಟಲಿ ಸೇರಿದಂತೆ ಎಲ್ಲ ಕೋವಿಡ್‌ ತ್ಯಾಜ್ಯವನ್ನು ಈ ಕಟ್ಟಡದ ಆವರಣದಲ್ಲೇ ಹಾಕಿ ಹೋಗಿದ್ದಾರೆ. ಇದರಿಂದ ಬೇರೆಬೇರೆ ರೋಗಗಳು ಬರುವ ಸಾಧ್ಯತೆ ಇದೆ’ ಎಂದೂ ದೂರಿದ್ದಾರೆ.

ರಾಜ್ಯದ ಎಲ್ಲ ಕಡೆಯೂ ಈ ಸಮಸ್ಯೆ ಇದೆ: ಡಿಎಚ್‌ಒ

‘ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅತಿ ಹೆಚ್ಚು ಗಂಟಲು ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಆದರೆ, ಜಿಮ್ಸ್‌ನ ಪ್ರಯೋಗಾಲಯದಲ್ಲಿ ದಿನಕ್ಕೆ ಇಂತಿಷ್ಟು ತಪಾಸಣೆ ಮಾಡಲು ಮಾತ್ರ ಸಾಧ್ಯ. ಹಾಗಾಗಿ, ಕೆಲವರು ಮಾದರಿ ಫಲಿತಾಂಶ ವಿಳಂಬವಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ. ಜಬ್ಬಾರ್‌ ಪ್ರತಿಕ್ರಿಯಿಸಿದರು.

‘ಈ ಸಮಸ್ಯೆ ಕಲಬುರ್ಗಿ ಮಾತ್ರವಲ್ಲ; ರಾಜ್ಯದ ಎಲ್ಲ ಕಡೆಯೂ ತಲೆದೋರಿದೆ. ಹಗಲು– ರಾತ್ರಿ ಕೆಲಸ ಮಾಡಿದರೂ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇಲ್ಲಿ ಒತ್ತಡ ಹೆಚ್ಚಿದ್ದರಿಂದ ಹಲವರ ಮಾದರಿಗಳನ್ನು ನಾವು ಬೆಂಗಳೂರಿಗೂ ಕಳಿಸಿದ್ದೇವೆ. ಅಲ್ಲಿಯೂ ಒತ್ತಡ ಹೆಚ್ಚಾಗಿದೆ. ಜತೆಗೆ, ಕೊರೊನಾ ಪ‍ತ್ತೆ ಲ್ಯಾಬ್‌ನ ಯಂತ್ರಗಳನ್ನು ಶುದ್ಧೀಕರಣ ಮಾಡಲು ಮೂರು ದಿನ ತೆಗೆದುಕೊಂಡರು. ಹೀಗಾಗಿ, ಕೆಲವರ ರಿಪೋರ್ಟ್‌ ಒಂದು ವಾರ, ಕೆಲವರರದು 15 ದಿನ ತಡವಾಗಿದೆ’ ಎಂದರು.

‘ಊಟ, ಉಪಚಾರ ಹಾಗೂ ಕೋವಿಡ್‌ ತ್ಯಾಜ್ಯ ಕುರಿತು ಗುರುವಾರ ನಾನೇ ಖುದ್ದು ಪರಿಶೀಲಿಸಿ, ಬಗೆಹರಿಸಿದ್ದೇನೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.