ಕಮಲಾಪುರ (ಕಲಬುರಗಿ ಜಿಲ್ಲೆ): ಸಂಬಂಧಿಕರ ಹೆಸರಲ್ಲಿ ಚೆಕ್ ಮೂಲಕ ಸರ್ಕಾರದ ಹಣ ತೆಗೆದುಕೊಂಡು ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿದ್ದರಿಂದ ಕಲಬುರಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮ ಪಂಚಾಯಿತಿಯ ಆರು ಜನ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.
ಪಂಚಾಯಿತಿ ಸದಸ್ಯರಾದ ಪ್ರಿಯಾ ಪೀರಪ್ಪ, ನಾಗೇಂದ್ರ ಶಿವಕುಮಾರ, ಚಂದ್ರಕಲಾ ಸಂತೋಷಕುಮಾರ, ಕಲ್ಲಮ್ಮ ಶರಣಬಸಪ್ಪ, ಪ್ರೇಮಾ ಅಂಬಾರಾಯ, ದಶವಂತಿ ಶರಣಬಸಪ್ಪ ಇವರು ತಮ್ಮ ಸಂಬಂಧಿಕರ ಹೆಸರಿಗೆ ಚೆಕ್ ಮೂಲಕ ಹಣ ತೆಗೆದುಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಆರು ಜನರ ಸದಸ್ಯತ್ವ ಅನರ್ಹಗೊಳಿಸಲಾಗಿದೆ.
ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬೇಕಿದ್ದ ಹಣವನ್ನು ಈ ಸದಸ್ಯರು ತಮ್ಮ ಪುತ್ರ, ಪತಿ, ಚಿಕ್ಕಪ್ಪನ ಮಗನ ಹೆಸರಿನಲ್ಲಿ ವಿವಿಧ ವರ್ಷಗಳಲ್ಲಿ ₹ 1500ರಿಂದ ₹ 64 ಸಾವಿರದವರೆಗೆ ಚೆಕ್ ಮೂಲಕ ಹಣವನ್ನು ತೆಗೆದುಕೊಂಡು ದುರ್ಬಳಕೆ ಮಾಡಿಕೊಂಡಿದ್ದರು.
ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದ ರಾಜಕುಮಾರ ಶಾಂತಪ್ಪ ಅವರು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆದಿತ್ತು. ತನಿಖಾ ವರದಿಯನ್ನು ಆಧರಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಪಟೇಲ್ ಅವರು ಸದಸ್ಯತ್ವ ರದ್ದುಗೊಳಿಸಿದ್ದು, ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.