
ಸೇಡಂ: ಜನ್ಮದಿನ ಅಂದರೆ ಕೇಕ್, ಭರ್ಜರಿ ಊಟ, ಡಾನ್ಸ್ ಸಾಮಾನ್ಯ. ಆದರೆ, ತಾಲ್ಲೂಕಿನ ನೀಲಹಳ್ಳಿ ಪಿಡಿಒ ನಿಂಗಪ್ಪ ಪೂಜಾರಿ ತಮ್ಮ ಮಗಳು ಶ್ರೀನಿಕಾ ಪೂಜಾರಿ ಜನ್ಮದಿನವನ್ನು ತುಸು ಭಿನ್ನವಾಗಿ ಆಚರಿಸಿದ್ದಾರೆ.
ಶ್ರೀನಿಕಾ ಐದನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ತಾವು ಕೆಲಸ ಮಾಡುವ ಊರಿನ ಸರ್ಕಾರಿ ಪ್ರೌಢಶಾಲೆಗೆ ಸ್ವಂತ ದುಡ್ಡಲ್ಲಿ ‘ಸಾಂಸ್ಕೃತಿಕ ವೇದಿಕೆ’ ನಿರ್ಮಿಸಿಕೊಟ್ಟಿದ್ದಾರೆ.
25 ಅಡಿ ಅಗಲ, 45 ಉದ್ದ ಹಾಗೂ ಮೂರೂವರೆ ಅಡಿಗಳಷ್ಟು ಎತ್ತರದ ಈ ವೇದಿಕೆ ನಿರ್ಮಾಣಕ್ಕೆ ಎರಡು ಟ್ರ್ಯಾಕ್ಟರ್ ಪರ್ಸಿ, 12 ಟ್ರಿಪ್ ಕಲ್ಲು ಹಾಗೂ 20 ಟ್ರಿಪ್ ಮುರುಮ್ ಜೊತೆಗೆ ಸಿಮೆಂಟ್ ಹಾಗೂ ಮರಳು ಬಳಕೆಯಾಗಿದ್ದು, ಅಂದಾಜು ₹1 ಲಕ್ಷ ವೆಚ್ಚವಾಗಿದೆ.
‘ಸಾಂಸ್ಕೃತಿ ವೇದಿಕೆಯು ನಿತ್ಯ ಪ್ರಾರ್ಥನೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಬಳಕೆಯಾಗುತ್ತಿದೆ. ನಮ್ಮಲ್ಲಿ ರಂಗ ಶಿಕ್ಷಕರೂ ಇರುವುದರಿಂದ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡಲೂ ಅನುಕೂಲವಾಗುತ್ತಿದೆ’ ಎನ್ನುತ್ತಾರೆ ಶಾಲಾ ಮುಖ್ಯಶಿಕ್ಷಕಿ ಸುರೇಖಾ ವೆಂಕಟರಾವ ಮತ್ತು ಶಿಕ್ಷಕ ಶಿವಾನಂದ ಇಟಿಕಾರ.
‘ಶಾಲೆಗೆ ಭೇಟಿ ನೀಡಿದಾಗ ಏನಾದರೂ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶವಿತ್ತು. ಕಾನೂನು ಚೌಕಟ್ಟಿನಲ್ಲಿ ಕೆಲವು ಕೆಲಸಗಳನ್ನು ಮಾಡಲು ಸಾಧ್ಯ. ಶಾಲೆಗೆ ಸ್ವಂತ ದುಡ್ಡಲ್ಲ ಸಾಂಸ್ಕೃತಿಕ ವೇದಿಕೆ ನಿರ್ಮಿಸಿಕೊಟ್ಟೆ. ಅದಕ್ಕೆ ನನ್ನ ಮಗಳ ಜನ್ಮದಿನ ನೆಪವಾಯಿತು’ ಎಂದು ಪಿಡಿಒ ನಿಂಗಪ್ಪ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪಿಡಿಒ ನಿಂಗಪ್ಪ ಶಾಲೆಗೆ ಸರ್ಕಾರಿ ಯೋಜನೆಯಡಿ ಗ್ರಂಥಾಲಯಕ್ಕೆ ಪರಿಕರ ನೀಡಿದ್ದಾರೆ. ಸ್ವಂತ ಹಣದಲ್ಲಿ ಸಾಂಸ್ಕೃತಿಕ ವೇದಿಕೆ ನಿರ್ಮಿಸಿಕೊಟ್ಟಿದ್ದಾರೆಸುರೇಖಾ ವೆಂಕಟರಾವ್ ಮುಖ್ಯಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ನೀಲಹಳ್ಳಿ
ನನ್ನ ಮಗಳ ಜನ್ಮದಿನದ ಕೊಡುಗೆಯಾಗಿರಲಿ ಎಂಬ ಸದಾಶಯದಿಂದ ಸರ್ಕಾರಿ ಶಾಲೆಗೆ ಸಾಂಸ್ಕೃತಿಕ ವೇದಿಕೆ ನಿರ್ಮಿಸಲಾಗಿದೆನಿಂಗಪ್ಪ ಪೂಜಾರಿ ನೀಲಹಳ್ಳಿ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.