ADVERTISEMENT

ಪ್ರವಾಹ ಲೆಕ್ಕಿಸದ ಜನ; ಅಪಾಯಕ್ಕೆ ಆಹ್ವಾನ

ಕಾಗಿಣಾ ನದಿಗಿಳಿದು ನೀರು ತರುತ್ತಿರುವ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 3:13 IST
Last Updated 18 ಸೆಪ್ಟೆಂಬರ್ 2020, 3:13 IST
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮಸ್ಥರು ಗುರುವಾರ ತುಂಬಿ ಹರಿಯುತ್ತಿರುವ ಕಾಗಿಣಾ ನದಿಗೆ ಇಳಿದು ನೀರು ತರುತ್ತಿದ್ದಾರೆ
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಗ್ರಾಮಸ್ಥರು ಗುರುವಾರ ತುಂಬಿ ಹರಿಯುತ್ತಿರುವ ಕಾಗಿಣಾ ನದಿಗೆ ಇಳಿದು ನೀರು ತರುತ್ತಿದ್ದಾರೆ   

ಚಿತ್ತಾಪುರ: ತಾಲ್ಲೂಕಿನ ಜೀವನದಿ ಕಾಗಿಣಾ ಮಂಗಳವಾರದಿಂದ ರೌದ್ರಾವತಾರ ತಾಳಿ ಭೋರ್ಗರೆಯುತ್ತಾ ಹರಿಯುತ್ತಿದೆ.

ತಾಲ್ಲೂಕಿನ ಭಾಗೋಡಿ ಗ್ರಾಮಸ್ಥರು ಪ್ರವಾಹ ಲೆಕ್ಕಿಸದೆ ನದಿಗಿಳಿದು ನೀರು ತೆಗೆದುಕೊಳ್ಳುತ್ತಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡು ಕಾಗಿಣಾ ನದಿ ಹರಿಯುತ್ತಿದೆ. ನದಿಗೆ ಕಟ್ಟಿರುವ ಸೇತುವೆ ಪಕ್ಕದಲ್ಲಿ ನಿರ್ಮಿಸಿದ ಮೆಟ್ಟಿಲುಗಳ ಮೂಲಕ ಮಹಿಳೆಯರು, ಯುವಕರು, ಚಿಕ್ಕ ಮಕ್ಕಳು ಕೊಡ ಹಿಡಿದುಕೊಂಡು ನದಿಗಿಳಿದು ಹರಿಯುವ ಪ್ರವಾಹದ ನೀರು ಪಡೆಯುವುದು ಮತ್ತು ಬಟ್ಟೆ ತೊಳೆಯುವುದು ಸಾಮಾನ್ಯವಾಗಿದೆ.

ಸ್ವಲ್ಪ ಎಚ್ಚರ, ಜಾಗ್ರತೆ ತಪ್ಪಿದರೆ ಕಾಲು ಜಾರಿ ಬಿದ್ದರೆ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿದೆ. ಸೇತುವೆ ಕೆಳ ಭಾಗದಲ್ಲಿ ಇಳಿಜಾರು ರಸ್ತೆಯಲ್ಲಿ ಎತ್ತುಗಳು ಮತ್ತು ದನಕರುಗಳನ್ನು ತೆಗೆದುಕೊಂಡು ಬಂದು ನದಿಗಿಳಿದು ಮೈ ತೊಳೆಯುತ್ತಿರುವುದು, ಪ್ರವಾಹದ ಸಮೀಪ ಆಡು, ಕುರಿಗಳನ್ನು ಕೂಡಿಸಿರುವುದು ಗುರುವಾರ ಕಂಡು ಬಂತು.

ADVERTISEMENT

ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ತುಂಬಿ ಹರಿಯುತ್ತಿರುವ ಕಾಗಿಣಾ ನದಿ ಪ್ರವಾಹದಲ್ಲಿ ಸೇತುವೆ ಮುಳುಗಡೆಯಾಗಿದೆ. ಪ್ರವಾಹದ ಅಪಾಯವನ್ನು ಲೆಕ್ಕಿಸದೆ ಪ್ರವಾಹದ ನೀರಿಗಿಳಿದು ಜನರು ಬೈಕ್, ಸೈಕಲ್, ವಾಹನ ಹಾಗೂ ಎತ್ತುಗಳನ್ನು ತೊಳೆಯುವುದು ಮಾಡುತ್ತಿದ್ದಾರೆ.

ಚಿತ್ತಾಪುರ ಮತ್ತು ಮಾಡಬೂಳ ಪೊಲೀಸ್ ಠಾಣೆಗಳ ಅಧಿಕಾರಿಗಳು ನದಿ ದಂಡೆಯ ಗ್ರಾಮಗಳತ್ತ ಗಮನ ಹರಿಸಬೇಕು. ಜನರು ಮತ್ತು ಜಾನುವಾರುಗಳು ನದಿಯತ್ತ ಹೋಗದಂತೆ ಎಚ್ಚರ ವಹಿಸಬೇಕು. ಆದರೆ, ಬೀಟ್ ಪೊಲೀಸ್ ಸಹ ಸ್ಥಳದಲ್ಲಿ ಇರಲಿಲ್ಲ ಎಂದು ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಂದಾರು ಸೇತುವೆ ಇರುವ ನದಿ ದಂಡೆಯ ಗ್ರಾಮಗಳು ಜನರು ಗುಂಪು ಗುಂಪಾಗಿ ಮುಳುಗಡೆಯಾದ ಸೇತುವೆ ಮತ್ತು ಉಕ್ಕೇರಿ ಹರಿಯುತ್ತಿರುವ ಪ್ರವಾಹ ನೋಡಲು ಹೋಗುತ್ತಿದ್ದಾರೆ. ಜನರು ನದಿಯ ಸಮೀಪ ಹೋಗದಂತೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.