
ಆಳಂದ: ‘ಶಿಕ್ಷಣದ ಅವಕಾಶಗಳಿಂದ ವಂಚಿತರಾದ ಮಹಿಳೆಯರಿಗಾಗಿ ಸ್ವತಂತ್ರ ಪೂರ್ವದಲ್ಲಿ ಶಾಲೆಗಳನ್ನು ತೆರೆದ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳ ಹೋರಾಟದ ಫಲದಿಂದ ಸಮಾಜದಲ್ಲಿ ಪರಿವರ್ತನೆಗೆ ನಾಂದಿಯಾಯಿತು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ತಿಳಿಸಿದರು.
ತಾಲ್ಲೂಕಿನ ಕೊರಳ್ಳಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಆಳಂದ ತಾಲ್ಲೂಕು ದಲಿತ ಸೇನೆ (ಆರ್)ಯಿಂದ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ವಿಜಯಲಕ್ಷ್ಮಿ ಹೋಳ್ಕರ್ ಮಾತನಾಡಿ, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ಧರ್ಮದ ಕಾರಣಕ್ಕೆ ಮಹಿಳೆಯು ಹಲವು ಶೋಷಣೆಗಳಿಗೆ ಒಳಗಾಗುತ್ತಿದ್ದು, ವಿಶೇಷವಾಗಿ ಹೆಣ್ಣುಮಕ್ಕಳು ಶಿಕ್ಷಣದಿಂದ ಮಾತ್ರ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷ ನಾಗೇಂದ್ರ ಕೆ.ಜವಳಿ ಮಾತನಾಡಿದರು. ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ತಾಲ್ಲೂಕು ಅಧ್ಯಕ್ಷ ಧರ್ಮಾ ಬಂಗರಗಾ, ಉಪನ್ಯಾಸಕ ಸಂಜಯ ಪಾಟೀಲ ಅವರು ಸಾವಿತ್ರಿಬಾಯಿ ಪೂಲೆ ಅವರ ಸಾಮಾಜಿಕ ಹೋರಾಟ ಮತ್ತು ಕೊಡುಗೆ ಬಗ್ಗೆ ಮಾತನಾಡಿದರು.
ಮುಖ್ಯಶಿಕ್ಷಕ ಸಂತೋಷ ದೊಡ್ಡಮನಿ ಅಧ್ಯಕ್ಷತೆವಹಿಸಿದರು. ಸಂತೋಷ ಸಿಂಧೆ, ಸುವರ್ಣಾ ವಿಭೂತೆ, ಲಕ್ಷ್ಮಿಬಾಯಿ ರುದ್ರವಾಡಿ, ಪಿಡಿಒ ರಾಮದಾಸ ಪೂಜಾರಿ, ಜೈಭೀಮ ಕಾಂಬಳೆ ಇತರರು ಉಪಸ್ಥಿತರಿದ್ದರು. ಅನೀಲಕುಮಾರ ಹುಮನಾಬಾದ್ ನಿರೂಪಿಸಿದರು. ಸುರೇಖಾ ದೋತ್ರೆ ವಂದಿಸಿದರು.
ಬಿಎಡ್ ಕಾಲೇಜು:
ಪಟ್ಟಣದ ರಾಜಶೇಖರ ಬಿಎಡ್ ಕಾಲೇಜಿನಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಅಶೋಕ ರೆಡ್ಡಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಅಪ್ಪಾಸಾಬ ಬಿರಾದಾರ, ರಾಜಕುಮಾರ ಹರಳ್ಳಯ್ಯ, ಪ್ರದೀಪ ಜಿಡ್ಡೆ, ಪ್ರೀಯಾಂಕ್ ಹಯ್ಯಾಳಕರ್ ಇದ್ದರು.
ಜೆಪಿ ಪ್ರೌಢಶಾಲೆ:
ಪಟ್ಟಣದ ಜೆಪಿ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ಎಲ್.ಎಸ್.ಬೀದಿ, ಶ್ರೀಶೈಲ ಬಂಕಾಪುರೆ, ಶಿವಪುತ್ರ ಅಲ್ದಿ, ಗಂಗಾಂಬಿಕಾ ಮಂಟಗಿ, ಡಿ.ಎಂ.ಪಾಟೀಲ, ರಾಜಕುಮಾರ ಪವಾರ ಇದ್ದರು. ಕಡಗಂಚಿಯ ಸಾಯಿಪ್ರತಾಪ ಪದವಿ ಕಾಲೇಜಿನಲ್ಲಿ ಅಧ್ಯಕ್ಷ ಸುನೀಲಕುಮಾರ ಅವರು ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೋಂಡಿದರು.