ADVERTISEMENT

ಕಲಬುರ್ಗಿ: ಪ್ಲಾಸ್ಟಿಕ್‌ ತಂತ್ರಜ್ಞಾನ ಕೋರ್ಸ್‌; ಪ್ರವೇಶಾವಕಾಶ

ಮೈಸೂರಿನ ಕೇಂದ್ರೀಯ ಪೆಟ್ರೊಕೆಮಿಕಲ್ಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿವೆ ವಿವಿಧ ಕೋರ್ಸ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 13:46 IST
Last Updated 2 ಆಗಸ್ಟ್ 2021, 13:46 IST
ಆರ್.ಟಿ.ನಾಗರಳ್ಳಿ
ಆರ್.ಟಿ.ನಾಗರಳ್ಳಿ   

ಕಲಬುರ್ಗಿ: ‘ಮೈಸೂರಿನ ಕೇಂದ್ರೀಯ ಪೆಟ್ರೊಕೆಮಿಕಲ್ಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್‌)ಯಲ್ಲಿ ಪ್ಲಾಸ್ಟಿಕ್‌ ತಂತ್ರಜ್ಞಾನ ಕುರಿತು ವಿವಿಧ ಡಿಪ್ಲೊಮಾ ಹಾಗೂ ಪಿಜಿ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೂ ಅಲ್ಲಿ ಪ್ರವೇಶ ಅವಕಾಶಗಳಿವೆ’ ಎಂದು ಸಂಸ್ಥೆಯ ಮುಖ್ಯಸ್ಥ ಆರ್.ಟಿ.ನಾಗರಳ್ಳಿ ತಿಳಿಸಿದರು.

‘ಪ್ಲಾಸ್ಟಿಕ್‌ ವಸ್ತುಗಳು ಈಗ ಮಾನವ ಜೀವನದ ಅನಿವಾರ್ಯ ವಸ್ತುಗಳಾಗಿ ಮಾರ್ಪಟ್ಟಿವೆ. ಇವುಗಳನ್ನು ಕ್ರಮಬದ್ಧವಾಗಿ ಬಳಸುವುದು ಹೇಗೆ? ಇದರಲ್ಲಿರುವ ವಿನೂತನ ತಾಂತ್ರಿಕ ಸಾಧ್ಯತೆಗಳು, ಕೌಶಲ ಸೇರಿದಂತೆ ಹಲವಾರು ವಿಷಯಗಳ ಕುರಿತ ಡಿಪ್ಲೊಮಾ ಕೋರ್ಸ್‌ಗಳನ್ನು ಅಲ್ಲಿ ಆರಂಭಿಸಲಾಗಿದೆ. ಈ ಭಾಗದ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ, ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ ಕೋರ್ಸ್‍ಗೆ ಹಾಗೂ ಬಿಎಸ್ಸಿ ಪದವಿ ಪಡೆದವರಿಗೆ ಪಿಜಿ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಪ್ರೊಸೆಸಿಂಗ್‌ ಮತ್ತು ಟೆಸ್ಟಿಂಗ್ ಎಂಜಿನಿಯರಿಂಗ್ ಕೋರ್ಸ್‍ಗೆ ಪ್ರವೇಶ ಪಡೆದುಕೊಳ್ಳಬಹುದು.ಪಿಯು ವಿಜ್ಞಾನ ಹಾಗೂ ಐಟಿಐ ಪಾಸಾದವರು ಲ್ಯಾಟ್ರಲ್ ನೇರ ಪ್ರವೇಶದ ಮೂಲಕ 2ನೇ ವರ್ಷದ ಡಿಪ್ಲೊಮಾ ಸೇರಿಸಿಕೊಳ್ಳಲು ಅವಕಾಶವಿದೆ’ ಎಂದೂ ಹೇಳಿದರು.

ADVERTISEMENT

‘ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ. ಕೋವಿಡ್‌ ಕಾರಣ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಆಸಕ್ತರು ಮೈಸೂರಿಗೆ ಹೋಗಿ ದಾಖಲಾತಿಗಳನ್ನು ನೀಡಿ ಪ್ರವೇಶ ಪಡೆಯಬಹುದು. ಕೋರ್ಸ್‌ಗಳಿಗೆವಾರ್ಷಿಕ ₹ 40 ಸಾವಿರ ಶುಲ್ಕವಿದೆ. ಪರಿಶಿಷ್ಟ ವಿದ್ಯಾರ್ಥಿಗಳಿಗೆ ಎಲ್ಲ ಶುಲ್ಕವನ್ನೂ ವಿದ್ಯಾರ್ಥಿ ವೇತನ ರೂಪಿದಲ್ಲಿ ಮರುಪಾವತಿ ಮಾಡಲಾಗುವುದು. ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ತಿಗಳಿಗೆ ಶೇ 30ರಷ್ಟು ಶುಲ್ಕ ಮರಳಿ ಬರಲಿದೆ. ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ ಬ್ಯಾಂಕ್‌ ಸಾಲ ನೀಡುವ ಯೋಜನೆಯೂ ಇದೆ’ ಎಂದೂ ಹೇಳಿದರು.

‘ಕೇಂದ್ರ ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯು 1991ರಿಂದಲೂ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪರಿಸರಕ್ಕೆ ಹಾನಿ ಎನ್ನುವಂಥ ಪ್ಲಾಸ್ಟಿಕ್‌ಗಳನ್ನೇ ಹಾನಿಯಾಗದಂತೆ ಹೇಗೆ ಬಳಕೆಗೆ ತರಬೇಕು ಎಂಬುದೂ ಇಲ್ಲಿ ಹೇಳಿಕೊಡುವ ಕೌಶಲಗಳಲ್ಲಿ ಸೇರಿದೆ. ಆಟೊಮೊಬೈಲ್ಸ್‌, ವಾಹನಗಳ ಬಿಡಿಭಾಗ ತಯಾರಿಕೆ, ವಿಪಿವಿ ಪೈಪ್‌ ಹಾಗೂ ಸಲಕರಣೆ ತಯಾರಿಕೆ, ಪ್ಲಾಸಿಕ್ ಉತ್ಪಾದನಾ ಕಂಪನಿ, ಅಗ್ರೊ ಕೆಮಿಕಲ್ಸ್‌, ಆಹಾರೋದ್ಯಮ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್... ಹೀಗೆ ಹಲವು ಕ್ಷೇತ್ರಗಳಲ್ಲಿ ಈ ಕೋರ್ಸ್‍ಗಳು ಸಿಗಲಿವೆ. ಈ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ ನೀಡಲು ಸುಮಾರು 1300 ಕಾರ್ಖಾನೆಗಳಿವೆ’ ಎಂದು ವಿವರಿಸಿದರು.

ಹೆಚ್ಚಿನ ಮಾಹಿತಿಗೆ 9141075968, 9480253024 ಅಥವಾ 9845873498 ಸಂಪರ್ಕಿಸಲು ಅವರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.