ADVERTISEMENT

ಪಿಎಸ್ಐ ಹಗರಣ: ಪ್ರಮುಖ ಆರೋಪಿ ಆರ್‌.ಡಿ ಪಾಟೀಲ ಜೈಲಿನಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 4:36 IST
Last Updated 18 ಡಿಸೆಂಬರ್ 2022, 4:36 IST
 ಆರ್.ಡಿ ಪಾಟೀಲ
ಆರ್.ಡಿ ಪಾಟೀಲ   

ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ ಅವರು ಶನಿವಾರ ತಡರಾತ್ರಿ ಕಲಬುರಗಿಯ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ.

ಕಲಬುರಗಿ ಹೈ ಕೋರ್ಟ್ ಮೂರು ದಿನಗಳ ಹಿಂದೆ ಸಹೋದರರಾದ ಆರ್.ಡಿ.ಪಾಟೀಲ ಮತ್ತು ಮಹಾಂತೇಶ ಪಾಟೀಲ ಅವರಿಗರ ಜಾಮೀನು ಮಂಜೂರು ಮಾಡಿತ್ತು. ಅದರಂತೆ ಮಹಾಂತೇಶ ಎರಡು ದಿನಗಳ ಹಿಂದೆ ಹೊರ ಬಂದಿದ್ದರು.

ಆರ್. ಡಿ .ಪಾಟೀಲ ವಿರುದ್ಧ ಒಂಬತ್ತು ಪ್ರಕರಣ ದಾಖಲಾಗಿ ಇರುವುದರಿಂದ ಅವುಗಳಲ್ಲಿ ಕೆಳ ನ್ಯಾಯಾಲಯದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆ ಮತ್ತು ಸೆನ್ ಠಾಣೆಯಲ್ಲಿನ ಪ್ರಕರಣ ಸಂಬಂಧ ವಾರೆಂಟ್ ಇದ್ದವು. ಈ ಕಾರಣಕ್ಕೆ ಆರ್.ಡಿ.ಬಿಡುಗಡೆ ಆಗಿರಲಿಲ್ಲ.

ADVERTISEMENT

ಹೈಕೋರ್ಟ್ ಜಾಮೀನು ನೀಡಿದ ಆದೇಶದ ಪ್ರತಿಯೊಂದಿಗೆ ಅವರ ಪರ ವಕೀಲರಾದ ಅಶೋಕ ಮೂಲಗೆ ಅವರು ವಾರೆಂಟ್ ರಿ ಕಾಲ್ ಮಾಡಲು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಕೋರಿಕೊಂಡು ಆ ಪ್ರಕ್ರಿಯೆ ಮುಗಿಸಿದರು. ಬಳಿಕ ಜಾಮೀನು ನೀಡುವುದು ಇತ್ಯಾದಿ ಕಾರ್ಯ ಮುಗಿದ ನಂತರ ಶನಿವಾರ ತಡರಾತ್ರಿ ಜೈಲಿನಿಂದ ಆರ್‌ ಡಿ ಪಾಟೀಲ ಹೊರ ಬಂದಿದ್ದಾರೆ.

ಮಹಾಂತೇಶ ಪಾಟೀಲ ಬಿಡುಗಡೆಯಾದ ಹೊತ್ತಿನಲ್ಲಿ ಸಂಭ್ರಮಿಸಿದ್ದು ವಿವಾದ ಆಗಿತ್ತು. ಇದು ಹಾಗೆ ಆಗಬಾರದು ಎಂಬ ಕಾರಣಕ್ಕೆ ಯಾರಿಗೂ ಮಾಹಿತಿ ನೀಡದೆ ಜೈಲಿನಿಂದ ನೇರವಾಗಿ ತಮ್ಮ ಆಪ್ತರೊಂದಿಗೆ ಮನೆಗೆ ತೆರಳಿದ್ದಾರೆ.

ಜೈಲಿನಿಂದ ಬಿಡುಗಡೆಯಾಗಿದ್ದು ತನ್ನನ್ನ ಕಾಣಲು ಮನೆ ಕಚೇರಿಗೆ ಯಾರು ಬರಬೇಡಿ ಎಂದು ಆರ್ ಡಿಪಿ ಸಂದೇಶ ರವಾನಿಸಿ, ಫೇಸ್‌ಬುಕ್‌ ಖಾತೆ ಇತರೆ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ಹಾಕಿದ್ದರು. 'ನನ್ನ ಅಭಿಮಾನಿಗಳು, ಹಿತೈಷಿಗಳು ನನ್ನನ್ನು ಕಾಣಲು ಕಾತುರದಿಂದ ಕಾಯುತ್ತಿದ್ದಿರಿ. ನನ್ನನ್ನು ವಿಜೃಂಭಣೆಯಿಂದ ಸ್ವಾಗತಿಸಲು ಖರ್ಚು ವೆಚ್ಚ ಮಾಡಿಕೊಂಡಿದ್ದಿರಿ. ಆದರೆ, ವೈಯಕ್ತಿಕ ಕೆಲಸದಿಂದ ಕಲಬುರಗಿಯಿಂದ ಹೊರಗಡೆ ಹೋಗಿದ್ದೇನೆ. ಒಂದು ವಾರದಲ್ಲಿ ಅಫಜಲಪುರಕ್ಕೆ ಬಂದು ನಿಮ್ಮ ಸೇವೆಯಲ್ಲಿ ತೋಡಗಿಕೊಳ್ಳುವುದಾಗಿ' ಸಂದೇಶ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.