ಕಲಬುರಗಿ: ‘ಹಣಕಾಸಿನ ಗುರಿ ಮುಟ್ಟಲು ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆಯು ಲಾಭದಾಯಕ ಮತ್ತು ಸುರಕ್ಷಿತವಾಗಿದೆ. 25ನೇ ವರ್ಷದಲ್ಲಿ ದುಡಿಮೆ ಆರಂಭಿಸಿ ಮಾಸಿಕ ₹1,000 ಹೂಡಿಕೆ ಮಾಡಿದರೆ ವಾರ್ಷಿಕ ಶೇ 8ರಷ್ಟು ಲಾಭಾಂಶ ಸಿಕ್ಕರೂ 60 ವರ್ಷದ ವೇಳೆಗೆ ₹24 ಲಕ್ಷದಷ್ಟು ಹಣ ಕೈಸೇರಲಿದೆ’ ಎಂದು ಹಣಕಾಸು ಯೋಜನೆ ಸಲಹೆಗಾರ ಅವಿಜಿತ್ ಮಜುಂದರ್ ಹೇಳಿದರು.
ನಗರದ ರೋಟರಿ ಕ್ಲಬ್ ಆಫ್ ಗುಲಬರ್ಗಾದಲ್ಲಿ ಮಂಗಳವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ಭಾರತ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ (ಎಎಂಎಫ್‌ಐ) ಸಹಯೋಗದಲ್ಲಿ ಆಯೋಜಿಸಿದ್ದ ‘ಹೂಡಿಕೆಗಳು ಮತ್ತು ನೀವು’ ವಿಷಯ ಕುರಿತು ಹೂಡಿಕೆದಾರರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬರಿಗೂ ದುಡಿದ ಹಣವನ್ನು ಸರಿಯಾಗಿ ವಿನಿಯೋಗ ಮಾಡಿ, ಮನೆ ಕಟ್ಟಿಸಿ, ಕಾರು ಖರೀದಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉತ್ತಮ ಜೀವನ ಮಟ್ಟ ಅನುಭವಿಸಬೇಕು ಎಂಬ ಆಸೆ ಇರುತ್ತದೆ. ಇಂತಹ ಆಸೆ ಇರುವವರು ಮತ್ತು ಹಣಕಾಸಿನ ಗುರಿ ಮುಟ್ಟಲು ಬಯಸುವವರು ಹಣ ಹೂಡಿಕೆಗೆ ಮ್ಯೂಚುವಲ್ ಫಂಡ್ಸ್ ಆಯ್ದುಕೊಳ್ಳುವುದು ಉತ್ತಮ. ತಮ್ಮಲ್ಲಿನ ಶಕ್ತಾನುಸಾರ ಹಣವನ್ನು ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳೂ ಇವೆ’ ಎಂದರು.
‘ನಿಮ್ಮ ಹೂಡಿಕೆಯ ಉದ್ದೇಶ ದೀರ್ಘಾವಧಿ ಹೂಡಿಕೆಯೋ, ನಿರ್ದಿಷ್ಟ ಅವಧಿಗೆ ಆದಾಯ ಗಳಿಸುವುದೋ, ಆದಾಯ ವೃದ್ಧಿಯೋ, ಬಂಡವಾಳದ ಸುರಕ್ಷತೆ ಕಾಯ್ದುಕೊಳ್ಳುವುದೋ ಎನ್ನುವುದನ್ನು ಆಧರಿಸಿ ಮ್ಯೂಚುನಲ್ ಫಂಡ್ಸ್ ಆಯ್ಕೆ ಮಾಡಿಕೊಳ್ಳಬಹುದು. ಮ್ಯೂಚುವಲ್ ಫಂಡ್ಸ್ ಹೂಡಿಕೆಯ ಚಟುವಟಿಕೆಗಳನ್ನು ಮಾರುಕಟ್ಟೆಯ ಪರಿಣಿತರು ನಿರ್ವಹಣೆ ಮಾಡುತ್ತಾರೆ. ಕಡಿಮೆ ಖರ್ಚಿನಲ್ಲಿಯೇ ನೂರಾರು ರೂಪಾಯಿ ಹೂಡಿಕೆ ಮಾಡಿ, ಯಾವುದೇ ಸಮಯದಲ್ಲಿ ಫಂಡ್ಸ್ ಮೌಲ್ಯವೂ ತಗ್ಗದೆ ಅವುಗಳನ್ನು ಮಾರಾಟ ಮಾಡಬಹುದು. ದೀರ್ಘ, ಮಧ್ಯಮ ಅವಧಿಯ ರಿಸ್ಕ್‌ಗಳನ್ನು ವಿಂಗಡಣೆ ಮಾಡಿದ್ದು, ವ್ಯವಹಾರದಲ್ಲಿ ಪಾರದರ್ಶಕತೆಯೂ ಕಾಪಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ‘ಸೆಬಿ’ಯ ಕಣ್ಗಾವಲಿದೆ’ ಎಂದು ಹೇಳಿದರು.
ಹೂಡಿಕೆಗೆ ಇರುವ ಅವಕಾಶಗಳು: ‘ಇಕ್ವಿಟಿ ಫಂಡ್ಸ್, ಡೆಬ್ಟ್ ಫಂಡ್ಸ್, ಹೈಬ್ರಿಡ್ ಫಂಡ್ಸ್, ನಿವೃತ್ತಿ ಮತ್ತು ಮಕ್ಕಳಿಗಾಗಿ ಪರಿಹಾರ ಆಧಾರಿತ ಫಂಡ್ಸ್, ಇಂಡೆಕ್ಸ್ ಫಂಡ್ಸ್, ಓಪನ್ ಎಂಡೆಡ್ ಫಂಡ್ಸ್, ಕ್ಲೋಸ್ ಎಂಡೆಡ್ ಫಂಡ್ಸ್, ಆ್ಯಕ್ಟಿವ್ ಫಂಡ್ಸ್, ಗ್ರೋತ್ ಫಂಡ್ಸ್, ಇನ್‌ಕಮ್ ಫಂಡ್ಸ್, ಗೋಲ್ಡ್ ಇಟಿಎಫ್, ಇಎಲ್‌ಎಸ್‌ಎಸ್, ಪಿಂಚಣಿ ಸ್ಕೀಮ್, ಸಾಗರೋತ್ತರದಂತಹ ಹಲವು ಫಂಡ್ಸ್‌ಗಳಲ್ಲಿ ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳಿವೆ’ ಎಂದು ಅವಿಜಿತ್ ಮಜುಂದರ್ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಿಂದ ಮ್ಯೂಚುವಲ್ ಫಂಡ್ಸ್ ಬಗ್ಗೆ ಸಾಕಷ್ಟು ವಿಷಯಗಳು ತಿಳಿದವು. ಮಾಸಿಕ ವೇತನದಾರರು ಪ್ರತಿ ತಿಂಗಳು ₹5 ಸಾವಿರ ಹೂಡಿಕೆ ಮಾಡಿದರೆ 60ರ ಅಂಚಿನ ವೇಳೆಗೆ ದೊಡ್ಡ ಮೊತ್ತವನ್ನೇ ಪಡೆಯಬಹುದುಮಂಜುನಾಥ ಜೇವರ್ಗಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ
ಜಾಗೃತಿ ಕಾರ್ಯಕ್ರಮವು ಮಾಹಿತಿ ಪೂರ್ಣವಾಗಿತ್ತು. ಸರಿಯಾದ ಮಾರ್ಗದರ್ಶನ ತೆಗೆದುಕೊಂಡು ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯ ಲಾಭಾಂಶ ಪಡೆಯಬಹುದುಆನಂದ ಜೇವೂರ್ ಬಿ.ಇಡಿ ವಿದ್ಯಾರ್ಥಿ
ಬಿಕಾಂ ವಿದ್ಯಾರ್ಥಿ ಆಗಿದ್ದರಿಂದ ಮ್ಯೂಚುವಲ್ ಫಂಡ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಹೂಡಿಕೆಯಲ್ಲಿನ ಹೇರಳ ಅವಕಾಶಗಳ ಬಗ್ಗೆ ತಿಳಿಯಿತುಕಾವ್ಯಾ ವಿಶ್ವಕರ್ಮ ಗುರುಕುಲ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ
ಮ್ಯೂಚುವಲ್ ಪಂಡ್ಸ್‌ನಲ್ಲಿ ಹೂಡಿಕೆ ಮಾಡಲು ಸಾಕಷ್ಟು ಆಸಕ್ತಿ ಇದ್ದರೂ ತಿಳವಳಿಕೆ ಕೊರತೆ ನಷ್ಟ ಭೀತಿಯಿಂದ ಹಲವರು ಹಿಂಜರಿಯುತ್ತಾರೆ. ಇಂತಹ ಕಾರ್ಯಕ್ರಮಗಳು ಹೂಡಿಕೆದಾರರಲ್ಲಿನ ಭೀತಿಯನ್ನು ದೂರ ಮಾಡುತ್ತವೆಹರ್ಷಿತಾ ಗಿಲ್ಡಾ ಗುರುಕುಲ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ
‘ಹಣಕಾಸಿನ ಸದೃಢತೆಗಾಗಿ ಹಣವನ್ನೇ ದುಡಿಸಿ’
‘ಹಣಕಾಸಿನ ಗುರಿ ಮುಟ್ಟಲು ಮತ್ತು ಆರ್ಥಿಕ ಸದೃಢತೆಗಾಗಿ ಹಣವನ್ನೇ ದುಡಿಸಬೇಕು. ವಾರನ್ ಬಫೆಟ್ ಹೇಳುವಂತೆ ಬರೀ ಒಂದೇ ಆದಾಯದ ಮೇಲೆ ಅವಲಂಬನೆ ಆಗಬೇಡಿ. ಖರ್ಚು ಮಾಡಿ ಬಳಿಕ ಅದರಲ್ಲಿ ಉಳಿದದ್ದನ್ನು ಉಳಿತಾಯ ಮಾಡುವ ಬದಲು ಸಂಪತ್ತಿನ ಒಂದು ಪಾಲನ್ನು ಉಳಿಸಿ’ ಎಂದು ಅವಿಜಿತ್ ಮಜುಂದರ್ ಸಲಹೆ ನೀಡಿದರು. ‘ನಮ್ಮಲ್ಲಿ ಸಾಮಾನ್ಯವಾಗಿ ಹಣವನ್ನು ಬ್ಯಾಂಕ್‌ಗಳ ಉಳಿತಾಯ ಖಾತೆ ಚಿನ್ನ ಖರೀದಿ ವಿಮೆ ಅಂಚೆ ಆಸ್ತಿ ಖರೀದಿಯಲ್ಲಿ ವಿನಿಯೋಗಿಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಶೇ 6ರಷ್ಟು ಹಣದುಬ್ಬರವಿದೆ. ಇದರ ಜತೆಗೆ ಸಾಮಾನ್ಯ ಪದ್ಧತಿಗಳ ಮೇಲೆ ಹೂಡಿಕೆಯಿಂದ ಸಿಗುವ ಲಾಭದ ಬೆಳವಣಿಗೆಯೂ ಕಡಿಮೆ ಇದೆ. ಆಪತ್ತಿನ ಕಾಲಕ್ಕೆ ಒಪ್ಪಂದ ಮಾಡಿಕೊಳ್ಳದೆ ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆಯೇ ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ಲಾಭದಾಯಕ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.