ADVERTISEMENT

ಜಿಎಸ್‌ಟಿ ಪರಿಹಾರ ಖೋತಾ; ಪ್ರಿಯಾಂಕ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 11:19 IST
Last Updated 31 ಜುಲೈ 2020, 11:19 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರ್ಗಿ: ‘ರಾಜ್ಯದ ಪಾಲಿನ ಜಿಎಸ್‌ಟಿ ಪರಿಹಾರ‌ದ ಎರಡನೇ ಕಂತು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಸಂಸದರಿಗೆ ಈ ಕುರಿತು ಪ್ರಶ್ನೆ ಮಾಡಲು ಧೈರ್ಯ ಇಲ್ಲವೇ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

‘ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ. ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ನೀಡಲು ನಿರಾಕರಿಸಿದೆ’ ಎಂದು ಅವರು ಶುಕ್ರವಾರ ಸರಣಿ ಟ್ವೀಟ್‌ ಮಾಡಿದ್ದಾರೆ.

‘ಜಿಎಸ್‌ಟಿ ಪರಿಹಾರ ಮಾತ್ರವಲ್ಲದೇ, 15ನೇ ಹಣಕಾಸು ಆಯೋಗದಿಂದ ರಾಜ್ಯದ ತೆರಿಗೆ ಪಾಲಿನಲ್ಲಿ ₹9ಸಾವಿರ ಕೋಟಿ ಖೋತಾ‌ ಮಾಡಿದೆ. ತನ್ನ ಪ್ರಾಯೋಜಿತ ರಾಜ್ಯ ಯೋಜನೆಗಳಿಗೂ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಇದು ರಾಜ್ಯದ ಅಭಿವೃದ್ದಿಗೆ ಮಾರಕವಾಗಿದೆ. ಇದನ್ನು ಪ್ರಶ್ನಿಸಬೇಕಿರುವ ಬಿಜೆಪಿಯವರು ಸುಮ್ಮನಿರುವುದೇಕೆ? ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಯಾವೊಬ್ಬ ಸಂಸದರಿಗೆ ಇಲ್ಲವೇ?’ ಎಂದಿದ್ದಾರೆ.

ADVERTISEMENT

‘ತಮ್ಮ ಸ್ಥಾನ ಉಳಿಸಿಕೊಳ್ಳಲು ದೆಹಲಿ ಪೆರೇಡ್‌ ಮಾಡುವ ಬಿಜೆಪಿ ನಾಯಕರಿಗೆ ರಾಜ್ಯದ ಹಕ್ಕಿಗಾಗಿ ಹೋರಾಡಲು ಸಮಯ ಇಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಪಾಲನ್ನು ಪಡೆದುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಈ ವಿಷಯದಲ್ಲಿ ಮೌನ ವಹಿಸುವ ಮೂಲಕ ಬಿಜೆಪಿ ನಾಯಕರು ಜನರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಜರಿದಿದ್ದಾರೆ.

ಪ್ರಧಾನಿ ಮೋದಿಯರ ಆತ್ಮನಿರ್ಭರ ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ ಅವರು ‘ನಮಗೆ ಸಲ್ಲಬೇಕಾದ ಹಣ ನೀಡದೇ, ರಾಜ್ಯವನ್ನು ಬೀದಿಯಲ್ಲಿ ಬಿಡುವುದೇ ಆತ್ಮನಿರ್ಭರತೆಯೇ’ ಎಂದು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.