ADVERTISEMENT

ಬಿಜೆಪಿಯವರು ರಾಜ್ಯವನ್ನು ಯುಪಿ, ಬಿಹಾರ ಮಾಡಲು ಹೊರಟಿದ್ದಾರೆಯೇ?: ಪ್ರಿಯಾಂಕ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 0:01 IST
Last Updated 16 ಸೆಪ್ಟೆಂಬರ್ 2025, 0:01 IST
<div class="paragraphs"><p>ಸಚಿವ ಪ್ರಿಯಾಂಕ್‌ ಖರ್ಗೆ</p></div>

ಸಚಿವ ಪ್ರಿಯಾಂಕ್‌ ಖರ್ಗೆ

   

ಕಲಬುರಗಿ: ‘ನಾಲ್ಕು ದಿನ ಧರ್ಮಸ್ಥಳ ಚಲೋ, ಇನ್ನು 4 ದಿನ ಚಾಮುಂಡೇಶ್ವರಿ ಚಲೋ ಎಂದು ಮೆರವಣಿಗೆ ನಡೆಸುವ ಬಿಜೆಪಿಯವರು ಯುವಜನರನ್ನು ಇನ್ನೊಂದು ಕೋಮಿನವರ ವಿರುದ್ಧ ಹಿಂಸೆಗೆ ಪ್ರಚೋದಿಸಿ, ರಾಜ್ಯವನ್ನು ಉತ್ತರ ಪ್ರದೇಶ, ಬಿಹಾರ ಮಾಡಲು ಹೊರಟಿದ್ದಾರೆಯೇ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಇಲ್ಲಿ ಹರಿಹಾಯ್ದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ಆಗುತ್ತಿದೆ ಎಂದು ಹುಯಿಲೆಬ್ಬಿಸಿ ‘ಧರ್ಮಸ್ಥಳ ಚಲೋ’ ನಡೆಸಿದ ಬಿಜೆಪಿಯವರು, ಮತ್ತೊಂದೆಡೆ ಕೊಲೆಯಾದ ಸೌಜನ್ಯಾ ಕುಟುಂಬ ಸದಸ್ಯರನ್ನೂ ಭೇಟಿ ಮಾಡಿದರು. ಯಾವುದೇ ಒಂದು ವಿಚಾರವನ್ನು ಅವರು ಕೊನೆ ಮುಟ್ಟಿಸಿದ್ದಾರೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಪಹಲ್ಗಾಮ್‌ ದಾಳಿಯಲ್ಲಿ ಭಾರತೀಯರನ್ನು ಕೊಲ್ಲಲಾಗಿತ್ತು. ಆದರೂ, ಭಾರತ ತಂಡ ಪಾಕ್‌ ಜೊತೆಗೆ ಕ್ರಿಕೆಟ್ ಆಡುವ ಮೂಲಕ ಮೋದಿ ಅವರದು ಎಂಥಾ ದೇಶಭಕ್ತಿ ಎಂದು ಗೊತ್ತಾಗಿದೆ.  ದೇಶದ ಸ್ವಾಭಿಮಾನದ ಮುಂದೆ ಕ್ರಿಕೆಟ್ ಹಿತಾಸಕ್ತಿ ಮುಖ್ಯವಾಯಿತೇ? ಮೋಟಾಭಾಯಿಗೆ (ಅಮಿತ್ ಶಾ) ಕರೆ ಮಾಡಿ, ಅವರ ಪುತ್ರ, ಐಸಿಸಿ ಅಧ್ಯಕ್ಷ ಜಯ್ ಷಾಗೆ ಬುದ್ಧಿ ಹೇಳಿಸಿ ಮ್ಯಾಚ್ ನಿಲ್ಲಿಸಬಹುದಿತ್ತಲ್ಲವೇ?’ ಎಂದರು.

‘ದಸರಾ ಉದ್ಘಾಟನೆ ಕುರಿತು ಮಾಜಿ ಸಂಸದ ಪ್ರತಾಪ ಸಿಂಹ ಅವರ ಅರ್ಜಿ ವಜಾ ಮಾಡಿ, ಹೈಕೋರ್ಟ್ ಜಾತ್ಯತೀತ ಪರಂಪರೆ ಎತ್ತಿ ಹಿಡಿದಿದೆ. ಈಗಲಾದರೂ ಬಿಜೆಪಿಯವರು ಇಂತಹ ವಿಚಾರ ಬದಿಗಿಟ್ಟು ಜಿಎಸ್‌ಟಿಯಲ್ಲಿ ಆದ ಅನ್ಯಾಯಕ್ಕಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲು ದೆಹಲಿ ಚಲೋ ನಡೆಸಲಿ’ ಎಂದು ‍ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.