ADVERTISEMENT

ಸಮಾಜ ಕಲ್ಯಾಣ ಇಲಾಖೆಯ ಅರ್ಹ ಅಧಿಕಾರಿಗಳ ಮುಂಬಡ್ತಿಗೆ ಪ್ರಿಯಾಂಕ್ ಖರ್ಗೆ ಪತ್ರ

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಶಾಸಕ ಪ್ರಿಯಾಂಕ್ ಪತ್ರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 15:48 IST
Last Updated 14 ಆಗಸ್ಟ್ 2020, 15:48 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರ್ಗಿ: ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಹುದ್ದೆ ಸೇರಿದಂತೆ ಎಲ್ಲ ಹುದ್ದೆಗಳಿಗೆ ಅರ್ಹ ಅಧಿಕಾರಿಗಳನ್ನು ನೇಮಕಾತಿ ನಿಯಮದಡಿ ಸ್ಥಾನ ಮುಂಬಡ್ತಿ ನೀಡಲು ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಸಮಾಜಕಲ್ಯಾಣ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್, ‘ಇಲಾಖೆ ಉಪನಿರ್ದೇಶಕರ ಹುದ್ದೆಗಳಿಗೆ ಮುಂಬಡ್ತಿ ಹೊಂದಲು ಅರ್ಹ ಅಧಿಕಾರಿಗಳು ಇದ್ದರೂ ಗ್ರೆಡ್ –2 ವೃಂದದ ಸಹಾಯಕ ನಿರ್ದೇಶಕರನ್ನು ಸ್ವಂತ ವೇತನ ಶ್ರೇಣಿ ಮೇರೆಗೆ ಕೆಲ ಜಿಲ್ಲೆಗಳಿಗೆ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲು ಆದೇಶ ಹೊಡಿಸಲಾಗಿದೆ. ಇದರಿಂದಾಗಿ ಜ್ಯೇಷ್ಠತೆಯಲ್ಲಿ ಕಿರಿಯರಾದ ಗ್ರೂಪ್ –2 ವೃಂದದ ಅಧಿಕಾರಿಗಳಡಿ ಅವರಿಗಿಂತ ಜ್ಯೇಷ್ಠತೆಯಲ್ಲಿ ಹಿರಿಯರಾದ ಅಧಿಕಾರಿಗಳು ಅವರ ಆಧೀನದಲ್ಲಿ ಕೆಲಸ ಮಾಡುವಂತಾಗುತ್ತದೆ ಎಂಬ ಆರೋಪಗಳಿವೆ. ಹೀಗಾಗಿ ಈ ನೂನ್ಯತೆ ಸರಿಪಡಿಸಿ ನಿಯಮಾನುಸಾರ ಮುಂಬಡ್ತಿ ನೀಡಿ’ ಎಂದು ಅವರು ತಿಳಿಸಿದ್ದಾರೆ.

‘ಜ್ಯೇಷ್ಠತೆಯಲ್ಲಿ ಕಿರಿಯ ಅಧಿಕಾರಿಗಳಿಗೆ ನಿಯಮ ಬಾಹಿರವಾಗಿ ಉಪನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡಿದ್ದು ಇಲಾಖೆಯಲ್ಲಿ ಅರಾಜಕತೆ ಹಾಗೂ ಭ್ರಷ್ಟಾಚಾರ ಮನೆ ಮಾಡಿರುವುದಕ್ಕೆ ನಿದರ್ಶನವಾಗಿದೆ. ಇದರಿಂದಾಗಿ ಪ್ರಾಮಾಣಿಕ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣ ಇಲಾಖೆಯಲ್ಲಿ‌ ಖಾಲಿ ಇರುವ ಹುದ್ದೆಗಳಿಗೆ ಹಾಲಿ ಚಾಲ್ತಿಯಿರುವ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಅರ್ಹ ಅಧಿಕಾರಿಗಳಿಗೆ ಮುಂಬಡ್ತಿ ನೀಡಲು ಆಯಾ ವೃಂದದ ಅಧಿಕಾರಿಗಳು ಅಲ್ಲಿಯೇ ಕರ್ತವ್ಯ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿರುವ 34 ಉಪನಿರ್ದೇಶಕರ ಹುದ್ದೆಗಳ ಪೈಕಿ 30 ಹುದ್ದೆಗಳಿಗೆ ಚಾಲ್ತಿಯಲ್ಲಿರುವ ವೃಂದ ಹಾಗೂ ನೇಮಕಾತಿ ನಿಯಮಗಳ ಅನ್ವಯ ಐದು ವರ್ಷ ಅರ್ಹತಾ ಸೇವೆ ಸಲ್ಲಿಸಿದ ಸಹಾಯಕ‌ ನಿರ್ದೇಶಕರ ಗ್ರೇಡ್ –1 ಹುದ್ದೆಗಳಿಗೆ ಬಡ್ತಿ ನೀಡಲು ಸಭೆ ಕರೆಯಲಾಗಿತ್ತು.

ಆ ಸಭೆಯಲ್ಲಿ ಕೇವಲ ಜಂಟಿ‌ನಿರ್ದೇಶಕ ವೃಂದದಿಂದ ಹೆಚ್ಚುವರಿ ನಿರ್ದೇಶಕರ ವೃಂದಕ್ಕೆ ಬಡ್ತಿ ನೀಡುವ ವಿಚಾರ ಕುರಿತು ಮಾತ್ರ ಚರ್ಚಿಸಿ ಸಭೆ ಮುಂದೂಡಲಾಗಿದೆ ಎಂಬ ಮಾಹಿತಿ‌ಯಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ’ ಎಂದು ಅವರು ಪತ್ರದಲ್ಲಿ
ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.