ADVERTISEMENT

ಎಡಪಕ್ಷಗಳಿಂದ ಅಖಿಲ ಭಾರತ ಪ್ರತಿಭಟನಾ ದಿನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:52 IST
Last Updated 19 ಡಿಸೆಂಬರ್ 2019, 14:52 IST
ನಿಷೇಧಾಜ್ಞೆ ಉಲ್ಲಂಘಿಸಿ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾದ ಎಡಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು
ನಿಷೇಧಾಜ್ಞೆ ಉಲ್ಲಂಘಿಸಿ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾದ ಎಡಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು   

ಕಲಬುರ್ಗಿ: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಸಿಪಿಐ ಹಾಗೂ ಸಿಪಿಐ (ಎಂ) ಪಕ್ಷಗಳು ಜಂಟಿಯಾಗಿ ಕರೆ ನೀಡಿದ್ದ ಪ್ರತಿಭಟನೆಯ ಅಂಗವಾಗಿ ನಗರದಲ್ಲಿ ಎರಡೂ ಪಕ್ಷಗಳ ಮುಖಂಡರು ನಗರದ ಕನ್ನಡ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಎರಡೂ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಹಾಕಿದರು.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸುವ ಮೂಲಕ ನಿಷೇಧಾಜ್ಞೆ ಉಲ್ಲಂಘಿಸಿದ ಕಾರಣಕ್ಕಾಗಿ ಪೊಲೀಸರು ಎರಡೂ ಪಕ್ಷಗಳ ಮುಖಂಡರನ್ನು ವಶಕ್ಕೆ ಪಡೆದು ಪೊಲೀಸ್‌ ಠಾಣೆಗೆ ಕರೆದೊಯ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಹಾಗೂ ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ‘ಸಂಸತ್ತಿನ ಎರಡೂ ಸದನಗಳಲ್ಲಿ ಪೌರತ್ವ ಮಸೂದೆಯನ್ನು ಅಂಗೀಕರಿಸಿ ಕಾಯ್ದೆಯನ್ನಾಗಿ ಜಾರಿಗೆ ತರಲಾಗಿದೆ. ಇದು ಭಾರತೀಯ ಸಂವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ. ಭಾರತೀಯ ಗಣತಂತ್ರದ ಪ್ರಜಾಪ್ರಭುತ್ವದ ಬುನಾದಿಯನ್ನು ನಾಶಪಡಿಸುವುದೇ ಈ ಕಾಯ್ದೆಯ ಉದ್ದೇಶವಾಗಿದೆ. ಇದು ಪೌರತ್ವವನ್ನು ಒಬ್ಬ ವ್ಯಕ್ತಿಯ ಧಾರ್ಮಿಕ ನೆಲೆಯೊಂದಿಗೆ ಜೋಡಿಸುತ್ತದೆ. ಇದು ದೇಶದ ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ತದ್ವಿರುದ್ಧವಾಗಿದೆ. ದೇಶದಲ್ಲಿ ಕೋಮು ವಿಭಜನೆ ಮತ್ತು ಸಾಮಾಜಿಕ ಧ್ರುವೀಕರಣವನ್ನು ಇನ್ನಷ್ಟು ತೀಕ್ಷಣಗೊಳಿಸುವುದು ಈ ಇದರ ಪ್ರಮುಖ ಗುರಿಯಾಗಿದೆ’ ಎಂದು ಹರಿಹಾಯ್ದರು.

ADVERTISEMENT

‘ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಗಳ ಮೂಲಕ ಪ್ರಜಾಪ್ರಭುತ್ವದ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಆರ್‌ಎಸ್‌ಎಸ್‌ನ ರಾಜಕೀಯ ಕಾರ್ಯಸೂಚಿಯಾಗಿದೆ. ಇದು ಜಾರಿಯಾದರೆ ದೇಶದ ಮೂಲನಿವಾಸಿಗಳಾದ ಆದಿವಾಸಿ ಸಮುದಾಯವೇ ತಮ್ಮ ಪೌರತ್ವವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇವರ ಬಳಿ ಈ ದೇಶದ ನಾಗರಿಕರೆಂದು ಹೇಳಿಕೊಳ್ಳಲು ಯಾವ ದಾಖಲೆಗಳು ಇರುವುದಿಲ್ಲ. ಈ ಕರಾಳ ಕಾಯ್ದೆಯನ್ನು ದೇಶದ ಬಹುಸಂಖ್ಯಾತರಿಗೆ ಮುಸ್ಲಿಂ ವಿರೋಧಿಯೆಂಬ ಭ್ರಮೆಯನ್ನು ಹುಟ್ಟಿಸಿ ದೇಶವನ್ನು ಮತೀಯವಾಗಿ ವಿಭಜಿಸುವ ಹುನ್ನಾರದ ಭಾಗವಾಗಿ ತರಲಾಗಿದೆ’ ಎಂದು ಟೀಕಿಸಿದರು.

ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ನಾಯಕರಾದ ರಾಮಪ್ರಸಾದ್‌ ಬಿಸ್ಮಿಲ್‌ ಹಾಗೂ ಅಷ್ಪಾಖುಲ್ಲಾ ಖಾನ್‌ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರ ನೆನಪಿನಲ್ಲಿ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿವೆ ಎಂದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಕೆ.ನೀಲಾ, ಸಿಪಿಐನ ಜಿಲ್ಲಾ ಕಾರ್ಯದರ್ಶಿಗಳಾದ ಮಹೇಶಕುಮಾರ ರಾಠೋಡ, ಪ್ರಭುದೇವ ಯಳಸಂಗಿ, ನಗರ ಕಾರ್ಯದರ್ಶಿಗಳಾದ ಶರಣಬಸಪ್ಪ ಗಣಜಲಖೇಡ, ಎಚ್‌.ಎಸ್‌.ಪತಕಿ, ಸಿಪಿಐ (ಎಂ) ಮುಖಂಡರಾದ ಶ್ರೀಮಂತ ಬಿರಾದಾರ, ಅಶೋಕ ಮ್ಯಾಗೇರಿ, ಮೇಘರಾಜ ಕಠಾರೆ, ಪಾಂಡುರಂಗ ಮಾವಿನಕರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.