ಕಲಬುರಗಿ: ವಾಹನಗಳಿಗೆ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಕೆ ಮಾಡುವುದನ್ನು ಕಡ್ಡಾಯಗೊಳಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ವಾಹನ ಚಾಲಕ–ಮಾಲೀಕ ಸಾಮಾಜಿಕ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ನೂರಾರು ಚಾಲಕರು ಟ್ಯಾಕ್ಸಿ ಓಡಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಬರುವ ಬಾಡಿಗೆಯೂ ಸಾಕಾಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸಾರಿಗೆ ಇಲಾಖೆ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ದುಬಾರಿ ಬೆಲೆಯ ಜಿಪಿಎಸ್, ಪ್ಯಾನಿಕ್ ಬಟನ್ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಸಾಲ ಮಾಡಿ ಅಳವಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು.
ಇಂಧನ ಬೆಲೆ ಏರಿಕೆಯಿಂದಾಗಿ ನಷ್ಟದ ಹಾದಿಯಲ್ಲಿರುವ ವಾಹನ ಚಾಲಕರು ಹಾಗೂ ಮಾಲೀಕರ ಪರಿಸ್ಥಿತಿಯನ್ನು ಅರಿತು ಸರ್ಕಾರ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಬಬಲಾದ, ಜಿಲ್ಲಾಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷೆ ಸುಶೀಲಾ, ಭೀಮರಾಯ, ಮಲ್ಲಿಕಾರ್ಜುನ ಬಿರಾದಾರ, ರಾಹುಲ ಹಿರೇಮಠ, ಜಗದೀಶ ಗುತ್ತೇದಾರ, ಭೀಮಯ್ಯ ಗುತ್ತೇದಾರ, ಮಂಜುನಾಥ, ಅನೀಲ ಪಾಟೀಲ, ಸುಭಾಷ ಪಾಟೀಲ ಸೇರಿದಂತೆ ಚಾಲಕರು, ಮಾಲೀಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.