ADVERTISEMENT

ಮಗು ಶವ ಇಟ್ಟು ರಾತ್ರಿಯಿಡಿ ಪ್ರತಿಭಟನೆ

ತಾಯಿಯೊಂದಿಗೆ ಜೈಲಿನಲ್ಲಿದ್ದ ಮಗು ಸಾವು; ಲಾಕಪ್‌ಡೆತ್‌ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 3:32 IST
Last Updated 4 ಜನವರಿ 2021, 3:32 IST
ಕಲಬುರ್ಗಿ ಜಿಮ್ಸ್ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಭಾನುವಾರ ರಾತ್ರಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಡಾ. ಅಜಯ್ ಸಿಂಗ್, ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಮೃತ ಮಗುವಿನ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿದರು
ಕಲಬುರ್ಗಿ ಜಿಮ್ಸ್ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಭಾನುವಾರ ರಾತ್ರಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಡಾ. ಅಜಯ್ ಸಿಂಗ್, ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಮೃತ ಮಗುವಿನ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿದರು   

ಕಲಬುರ್ಗಿ: ‘ಗ್ರಾಮ ಪಂಚಾಯಿತಿ ಚುನಾವಣೆ ಘರ್ಷಣೆ ಹಿನ್ನೆಲೆಯಲ್ಲಿ ಜೈಲಿಗೆ ಹಾಕಲಾಗಿದ್ದ ಜೇವರ್ಗಿ ತಾಲ್ಲೂಕು ಜೈನಾಪುರದ ಸಂಗೀತಾ ತಳವಾರ ಅವರ ಮೂರು ವರ್ಷದ ಪುತ್ರಿ ಭಾರತಿ ಸಾವಿಗೀಡಾಗಲು ಕಾರಣರಾದ ಜೇವರ್ಗಿ ಠಾಣೆ ಪಿಎಸ್ಐ ಮಂಜುನಾಥ ಹೂಗಾರ ಅವರನ್ನು ಅಮಾನತುಗೊಳಿಸಬೇಕು’ ಎಂಬ ಬೇಡಿಕೆ ಇಟ್ಟು ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ, ಶಾಸಕ ಡಾ. ಅಜಯ್ ಸಿಂಗ್ ನೇತೃತ್ವದಲ್ಲಿ ಭಾನುವಾರ ಮಧ್ಯಾಹ್ನದಿಂದ ಆರಂಭವಾದ ಪ್ರತಿಭಟನೆಯು ಮಧ್ಯರಾತ್ರಿಯೂ ಮುಂದುವರಿಯಿತು.

ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಹಾಗೂ ಜಿಲ್ಲಾ ‍ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರು ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಯತ್ನಿಸಿದರಾದರೂ ‘ಅಮಾನತು ಮಾಡದ ಹೊರತು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು. ಹೀಗಾಗಿ ಮನವೊಲಿಕೆ ಯತ್ನ ಮುರಿದು ಬಿತ್ತು.

ಮಧ್ಯಾಹ್ನದಿಂದಲೇ ಪ್ರತಿಭಟನೆ: ‘ಉದ್ದೇಶಪೂರ್ವಕವಗಿ ಸಂಗೀತಾ ತಳವಾರ ಕುಟುಂಬದವರನ್ನು ಪೊಲೀಸರು ಹಿಂಸಿಸಿದ್ದಾರೆ. ಎರಡೂ ಕಡೆಯವರು ಪ್ರಕರಣ ದಾಖಲಿಸಿದ್ದರೂ ಉದ್ದೇಶಪೂರ್ವಕವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ಗೆದ್ದ ರಾಜು ಅವರ ದೂರಿನನ್ವಯ ಮಾತ್ರ ಕ್ರಮ ಕೈಗೊಂಡು ಸಂಗೀತಾ ಅವರ ಕುಟುಂಬ ಸದಸ್ಯರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿರುವ ಜೇವರ್ಗಿ ಠಾಣೆ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕುಟುಂಬ ಸದಸ್ಯರು ಹಾಗೂ ಕೋಲಿ ಸಮಾಜದ ಮುಖಂಡರು ಮಧ್ಯಾಹ್ನ 1.30ರ ಸುಮಾರಿಗೆ ಪ್ರತಿಭಟನೆ ನಡೆಸಿದರು.

ADVERTISEMENT

ಮಗುವಿನ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಶವವನ್ನು ಜಿಮ್ಸ್‌ ಆಸ್ಪತ್ರೆ ವೃತ್ತದಲ್ಲಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಶಾಸಕ ಡಾ.ಅಜಯ್ ಸಿಂಗ್ ಅವರು ಪ್ರತಿಭಟನಾಕಾರರ ಜೊತೆ ರಸ್ತೆಯಲ್ಲೇ ಕೂತರು. ಸ್ಥಳಕ್ಕೆ ಬಂದ ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್ ಅವರು ತನಿಖೆ ಇಲ್ಲದೇ ಅಮಾನತುಗೊಳಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರು ಹಾಗೂ ಎಸ್ಪಿ ಮಧ್ಯೆ ಮಾತಿನ ಚಕಮಕಿ ನಡೆಯಿತು.

’ಅತಿವೃಷ್ಟಿ ಆದ ಸಂದರ್ಭದಲ್ಲಿ ನೆಲೋಗಿ ಪಿಎಸ್‌ಐ ಒಬ್ಬರು ನಕಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಕ್ಕೆ ತಕ್ಷಣ ಅಮಾನತು ಮಾಡಿದಿರಿ. ಇದೀಗ ಪಿಎಸ್‌ಐ ಉದ್ದೇಶಪೂರ್ವಕವಾಗಿ ಒಬ್ಬರು ನೀಡಿದ ದೂರನ್ನಷ್ಟೇ ಪರಿಗಣಿಸಿ ಮಗು ಎಂಬುದನ್ನೂ ನೋಡದೇ ಜೈಲಿಗೆ ಕಳಿಸಿದ್ದಾರೆ. ಇದು ಅವರು ಮಾಡಿದ ತಪ್ಪಲ್ಲವೇ’ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಪ್ರತಿಭಟನಾಕಾರರ ಹಲವು ‍ಪ್ರಶ್ನೆಗಳಿಗೆ ಉತ್ತರಿಸದೇ ಎಸ್ಪಿ ತಮ್ಮ ಕಾರು ಏರಿ ಕೂತರು.

ಸಂಜೆ 6ರ ಬಳಿಕ ಪ್ರತಿಭಟನಾ ಸ್ಥಳಕ್ಕೆ ಬರುವವರ ಸಂಖ್ಯೆ ಜಾಸ್ತಿಯಾಯಿತು. ಮೊದಲು ಒಂದು ರಸ್ತೆಯನ್ನು ಮಾತ್ರ ಬಂದ್ ಮಾಡಿದ್ದ ಪ್ರತಿಭಟನಾಕಾರರು ನಂತರ ಸೇಡಂ ಕಡೆಗೆ ತೆರಳುವ ಎರಡೂ ರಸ್ತೆಗಳನ್ನು ಬಂದ್ ಮಾಡಿ ಅಲ್ಲಿ ಪ್ರತಿಭಟನೆ ಮುಂದುವರಿಸಿದರು. ಅಷ್ಟರಲ್ಲಿ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಸ್ಥಳಕ್ಕೆ ಬಂದು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಮಗು ಮೃತಪಟ್ಟು ಎರಡು ದಿನವಾದ್ದರಿಂದ ಕೊಳೆಯುವ ಭೀತಿಯಿಂದಾಗಿ ಫ್ರೀಜರ್ ಇರುವ ಆಂಬುಲೆನ್ಸ್ ತರಿಸಿ ಅದರಲ್ಲಿರಿಸಲಾಯಿತು.

ಮಾಹಿತಿ ಪಡೆದುಕೊಂಡ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ: ಸ್ಥಳದಲ್ಲಿ ಕೂತಿದ್ದ ಪ್ರತಿಭಟನಾಕಾರರಿಗೆ ಕರೆ ಮಾಡಿದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಘಟನೆಯ ಮಾಹಿತಿ ಪಡೆದರು. ಕೆಲ ಹೊತ್ತಿನ ಬಳಿಕ ಮಾಜಿ ಶಾಸಕರಾದ ಡಾ. ಶರಣಪ್ರಕಾಶ ಪಾಟೀಲ, ಬಿ.ಆರ್. ಪಾಟೀಲ ಅವರೂ ಪ್ರತಿಭಟನಾ ಸ್ಥಳಕ್ಕೆ ಬಂದರು.

ಸ್ಥಳದಲ್ಲಿದ್ದವರಿಗೆ ಕಾಂಗ್ರೆಸ್ ಮುಖಂಡ ಶರಣಕುಮಾರ ಮೋದಿ ‍ಪುಲಾವ್ ತರಿಸಿಕೊಟ್ಟರು.

24 ಗಂಟೆ ಸಮಯ ಕೊಡಿ: ಜಿಲ್ಲಾಧಿಕಾರಿ
ಶಾಸಕ ಡಾ. ಅಜಯ್ ಸಿಂಗ್ ಹಾಗೂ ಇತರ ಮುಖಂಡರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಪ್ರಕರಣ ಬಗೆಹರಿಸಲು 24 ಗಂಟೆ ಸಮಯ ಕೊಡಿ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ. ಅಜಯ್ ಸಿಂಗ್, ಕೋಲಿ ಸಮಾಜದ ಮುಖಂಡ ತಿಪ್ಪಣ್ಣಪ್ಪ ಕಮಕನೂರ, ‘24 ಗಂಟೆ ಸಮಯ ತೆಗೆದುಕೊಳ್ಳಿ. ಆದರೆ, ಅಲ್ಲಿಯವರೆಗೆ ನಾವು ಸ್ಥಳ ಬಿಟ್ಟು ಕದಲುವುದಿಲ್ಲ’ ಎಂದರು. ಜಿಲ್ಲಾಧಿಕಾರಿ ನಂತರ ಅದೇ ಸ್ಥಳದಲ್ಲಿ ತಮ್ಮ ಕಾರಿನಲ್ಲಿ ಕೂತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.