ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದ ರಚನಾ ಬಂಧನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 13:37 IST
Last Updated 27 ಆಗಸ್ಟ್ 2022, 13:37 IST
ರಚನಾ ಹನುಮಂತ
ರಚನಾ ಹನುಮಂತ   

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಒಎಂಆರ್ ಉತ್ತರ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿಸಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿದ್ದ ರಚನಾ ಹನುಮಂತ (25) ಎಂಬುವವರನ್ನು ಸಿಐಡಿ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಕಳೆದ ಮೂರುವರೆ ತಿಂಗಳಿಂದ ಪೊಲೀಸರ ಕಣ್ಣುತಪ್ಪಿಸಿ ತಿರುಗಾಡುತ್ತಿದ್ದ ರಚನಾ ಒಂದೆಡೆ ನೆಲೆ ನಿಲ್ಲದೇ ಹಲವು ಕಡೆ ವಾಸ್ತವ್ಯ ಬದಲಾಯಿಸಿದ್ದರು. ಬೆಂಗಳೂರು, ಕಲಬುರಗಿ ಸಿಐಡಿ ಅಧಿಕಾರಿಗಳು ನಿರಂತರವಾಗಿ ಹುಡುಕಾಟ ನಡೆಸಿದ್ದರು. ಮಹಾರಾಷ್ಟ್ರ ಗಡಿಯಲ್ಲಿರುವ ಜಿಲ್ಲೆಯ ಆಳಂದ ತಾಲ್ಲೂಕಿನ ಹಿರೋಳ್ಳಿ ಚೆಕ್‌ಪೋಸ್ಟ್ ಬಳಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಗೂ ಸಿಐಡಿ ಡಿಟೆಕ್ಟಿವ್ ಸಬ್‌ ಇನ್‌ಸ್ಪೆಕ್ಟರ್ ಮಂಜುನಾಥ್ನೇತೃತ್ವದ ತಂಡವು ರಚನಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಶನಿವಾರ ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದಸ್ತಗೀರಸಾಬ್ ಮುಲ್ಲಾ ಅವರ ಎದುರು ಆರೋಪಿಯನ್ನು ಹಾಜರುಪಡಿಸಲಾಯಿತು.

ರಚನಾ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲಾಗಿದ್ದರಿಂದ ಟ್ರಾನ್ಸಿಟ್ ವಾರೆಂಟ್ ಪಡೆದ ಸಿಐಡಿ ಅಧಿಕಾರಿಗಳು ಶನಿವಾರ ಸಂಜೆ ಬೆಂಗಳೂರಿಗೆ ಕರೆದೊಯ್ದರು.

ADVERTISEMENT

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ರಚನಾ ಪಿಎಸ್‌ಐ ಅಕ್ರಮ ನಡೆದ ಆರೋಪ ಕೇಳಿ ಬಂದಾಗ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಕ್ರಮ ಖಂಡಿಸಿ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ತನ್ನ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.