ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ಶುಕ್ರವಾರ ನಡೆದ ಪದವಿ 2, 4 ಮತ್ತು 6ನೇ ಸೆಮಿಸ್ಟರ್‌ನ ಸಸ್ಯಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗಳು ಬದಲಾಗಿದ್ದು ವಿಶ್ವವಿದ್ಯಾಲಯದ ಯಡವಟ್ಟು, ನಿರ್ಲಕ್ಷ್ಯ ಮತ್ತೊಮ್ಮೆ ಬಯಲಾಗಿದೆ.
ಜು.11 (ಶುಕ್ರವಾರ)ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಪದವಿ ರಾಜ್ಯ ಪಠ್ಯಕ್ರಮದ ಸಸ್ಯಶಾಸ್ತ್ರ ಪರೀಕ್ಷೆ ನಡೆದಿವೆ. ಆದರೆ ಈ ವಿಷಯದ ಬದಲಾಗಿ ಆಗಸ್ಟ್ 6ರಂದು ನಡೆಯಬೇಕಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಗಣಿತಶಾಸ್ತ್ರ ವಿಷಯದ ಪ್ರಶ್ನೆ ಪ್ರತಿಕೆಗಳನ್ನು ವಿವಿ ಕಳಿಸಿಕೊಟ್ಟಿದೆ.
ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಸಸ್ಯಶಾಸ್ತ್ರ ವಿಷಯ ಇರುವ ಎಲ್ಲ ಕಾಲೇಜುಗಳಲ್ಲೂ ಇದೇ ರೀತಿ ಪ್ರಶ್ನೆ ಪತ್ರಿಕೆಗಳು ಬದಲಾಗಿವೆ.
‘ಬಂಡಲ್ ಮೇಲೆ ಸಸ್ಯಶಾಸ್ತ್ರ ಎಂದೇ ಇತ್ತು, ಒಡೆದು ನೋಡಿದರೆ ಗಣಿತಶಾಸ್ತ್ರದ ಪ್ರಶ್ನೆ ಪತ್ರಿಗಳು ಇದ್ದವು’ ಎಂದು ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಶ್ನೆಪತ್ರಿಗಳು ಬದಲಾಗಿದ್ದು ತಿಳಿಯುತ್ತಿದ್ದಂತೆ ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಿ ಅಲ್ಲಿಂದ ಇ–ಮೇಲ್ ಮೂಲಕ ಶುಕ್ರವಾರ ಪರೀಕ್ಷೆ ಇದ್ದ ವಿಷಯದ ಪ್ರಶ್ನೆ ಪತ್ರಿಕೆಯನ್ನು ತರಿಸಿ ಝರಾಕ್ಸ್ ಮಾಡಿಸಿ ಹಂಚಲಾಯಿತು. ಇದರಿಂದ ಅರ್ಧ ಗಂಟೆ ವಿಳಂಬವಾಗಿ ಪರೀಕ್ಷೆ ಆರಂಭವಾಯಿತು.
‘ಹಿಂದೆ ನಡೆದ ಯಾವುದೋ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಾಗಿದ್ದರೆ ಉಳಿದ ಒಂದೆರೆಡು ಬಂಡಲ್‌ಗಳನ್ನು ಕಳಿಸಿದ್ದಾರೆ ಎಂದು ಸಮರ್ಥಿಸಿಕೊಳ್ಳಬಹುದಿತ್ತು. ಮುಂದಿನ ತಿಂಗಳು ಇರುವ, ಅದೂ ಬೇರೆ ಪಠ್ಯಕ್ರಮದ, ಬೇರೆ ವಿಷಯದ ಪ್ರಶ್ನೆ ಪತ್ರಿಕೆ ಹೇಗೆ ಈ ಪ್ಯಾಕೆಟ್‌ನಲ್ಲಿ ಇದ್ದವು ಎನ್ನುವುದು ಗೊತ್ತಾಗುತ್ತಿಲ್ಲ. ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಈಗಾಗಲೇ ಬಹುತೇಕ ಕಾಲೇಜುಗಳಿಗೆ ಸರಬರಾಜು ಆಗಿರುವುದರಿಂದ ಪ್ರಶ್ನೆ ಪತ್ರಿಕೆಯನ್ನು ಬದಲಿಸಬೇಕು. ವಿಶ್ವವಿದ್ಯಾಲಯ ನಿರ್ಲಕ್ಷ್ಯದ ಸುದ್ದಿ ಬಹಿರಂಗವಾಗದಿದ್ದರೆ ಅದೇ ಪತ್ರಿಕೆಯನ್ನು ಹಂಚುತ್ತಿದ್ದರು’ ಎಂದು ವಿವಿ ಆಡಳಿತ, ನಂಬಿಕೆ ಬಗ್ಗೆ ಉಪನ್ಯಾಸಕರು, ಪಾಲಕರ ವಲಯದಲ್ಲಿ ಅನುಮಾನ ವ್ಯಕ್ತವಾಗುತ್ತಿದೆ.
‘ನಾನು ಆಯ್ಕೆ ಮಾಡಿಕೊಂಡಿದ್ದ ಸಸ್ಯಶಾಸ್ತ್ರ ವಿಷಯದ ತಯಾರಿ ಮಾಡಿಕೊಂಡು ಬಂದಿದ್ದೆ. ಆರಂಭದಲ್ಲೇ ಗೊಂದಲ ಆಗಿದ್ದರಿಂದ ಪರೀಕ್ಷೆ ಸರಿಯಾಗಲಿಲ್ಲ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುವುದನ್ನು ಬಿಡಬೇಕು’ ಎಂದು ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡರು.
ಪ್ರಶ್ನೆಪತ್ರಿಕೆ ಬದಲಾದ ಬಗ್ಗೆ ಗುಲಬರ್ಗಾ ವಿವಿಯ ಮೌಲ್ಯಮಾಪನ ಕುಲಸಚಿವರಿಗೆ ಕರೆ ಮಾಡಿದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಕುಲಪತಿ ಕರೆ ಸ್ವೀಕರಿಸಲಿಲ್ಲ, ಸಂದೇಶಕ್ಕೂ ಪ್ರತಿಕ್ರಿಯಿಸಿಲ್ಲ.
ಪ್ರಶ್ನೆ ಪತ್ರಿಕೆ ಬದಲಾಗಿರುವ ಬಗ್ಗೆ ವಿಚಾರಿಸಿ ಮುಂದೆ ಹೀಗಾಗದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕುಲಪತಿ ಮೌಲ್ಯಮಾಪನ ಕುಲಸಚಿವರಿಗೆ ಒತ್ತಾಯಿಸುತ್ತೇವೆಸಿದ್ದಪ್ಪ ಮೂಲಗೆ ಗುವಿವಿ ಸಿಂಡಿಕೇಟ್ ಸದಸ್ಯ
ಒಳಗೆ ನಡೆಯುವುದು ಹೊರಗೆ ಗೊತ್ತಾಗಬಾರದು:
ಆಯಾ ಕಾಲೇಜಿನ ಪ್ರಾಂಶುಪಾಲರು ಪರೀಕ್ಷೆ ನಡೆಯುವ ಆಂತರಿಕ ಮೇಲ್ವಿಚಾರಕರಾಗಿರುತ್ತಾರೆ. ಪಕ್ಷಪಾತ ಮಾಡಬಾರದು ಎನ್ನುವ ಕಾರಣಕ್ಕೆ ಬೇರೆ ಒಬ್ಬರನ್ನು ಬಾಹ್ಯ ಮೇಲ್ಚಿಚಾರಕನ್ನಾಗಿ ನೇಮಿಸುತ್ತಾರೆ. ಆದರೆ ವಿಶ್ವವಿದ್ಯಾಲಯ ಹಿರಿಯ ಬಾಹ್ಯ ಮೇಲ್ವಿಚಾರಕರ ನೇಮಕವನ್ನೇ ಮಾಡಿಲ್ಲ. ಜುಲೈ 7ರಂದು ವಿಚಕ್ಷಣ ದಳ (ಸ್ಕ್ವಾಡ್)ವನ್ನು ನೇಮಿಸಲಾಗಿತ್ತು ಅದನ್ನು ರದ್ದು ಮಾಡಲಾಗಿದೆ. ಇದರಿಂದ ಕಾಲೇಜಿನಲ್ಲಿ ಏನು ನಡೆಯುತ್ತದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಅಕ್ರಮ ನಡೆಯಲು ವಿಶ್ವವಿದ್ಯಾಲಯವೇ ಅನುಮತಿ ನೀಡಿದಂತಾಗುತ್ತದೆ ಎನ್ನುವುದು ನಿವೃತ್ತ ಶಿಕ್ಷಕರೊಬ್ಬರ ಅನುಮಾನ. ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗುವಿವಿ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ‘ಸ್ಕ್ವಾಡ್ ತಂಡ ರದ್ದು ಮಾಡಿದ್ದು ಸಿಂಡಿಕೇಟ್ ಗಮನಕ್ಕೆ ಬಂದಿಲ್ಲ. ಸೋಮವಾರ ವಿಶೇಷ ಸಿಂಡಿಕೇಟ್ ಕರೆದು ಈ ಬಗ್ಗೆ ಚರ್ಚಿಸುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.