ಕಲಬುರಗಿ: ಇಲ್ಲಿನ ಬ್ರಹ್ಮಪುರ ಬಡಾವಣೆಯ ದೇಶಮುಖ ವಾಡಾದಲ್ಲಿ ಆಷಾಢ ಏಕಾದಶಿಯ ಅಂಗವಾಗಿ ಗುರುಪೂರ್ಣಿಮೆ ದಿನವಾದ ಭಾನುವಾರ ರುಕ್ಮಿಣಿ, ಪಾಂಡುರಂಗ ವಿಠ್ಠಲ ರಥೋತ್ಸವ ಅದ್ದೂರಿಯಿಂದ ಜರುಗಿತು.
ದೇಶಮುಖ ವಾಡಾದಲ್ಲಿ ಆಷಾಢ ಶುದ್ಧ ದಶಮಿಯಿಂದ ರುಕ್ಮಿಣಿ ಪಾಂಡುರಂಗ ದೇವರ ಉತ್ಸವ ಆರಂಭವಾಗಿದ್ದು, ಕಳೆದ ಆರು ದಿನಗಳಿಂದ ಪಲ್ಲಕ್ಕಿ ಉತ್ಸವ, ದೇವರ ವಾಹನ, ಪಾಂಡುರಂಗ ವಿಶೇಷ ಪೂಜೆ, ಕೃಷ್ಣಾವತಾರ ಪೂಜೆ, ಸುಧಾಮಂಗಳ ಕಾರ್ಯಕ್ರಮ, ದ್ವಾದಶಿ ವಿಶೇಷ ಪೂಜೆ, ಅಖಂಡ ಭಾಗವತ ಸಪ್ತಾಹ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯಗಳು ನಡೆದವು. ಸೋಮವಾರ ಗೋಪಾಲ ಕಾಲ (ಮಡಿಕೆ ಒಡೆಯುವುದು) ಮತ್ತು ಗಜ ವಾಹನ ಮೆರವಣಿಗೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ಗುರುಪೂರ್ಣಿಮೆ ದಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ರುಕ್ಮಿಣಿ, ಪಾಂಡುರಂಗ ವಿಠ್ಠಲ ರಥೋತ್ಸವ ನಡೆಯಿತು. ನಾನಾ ಬಗೆಯ ಹೂಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ರುಕ್ಮಿಣಿ, ಪಾಂಡುರಂಗ ವಿಠ್ಠಲ ಮೂರ್ತಿಗಳನ್ನು ಇರಿಸಲಾಯಿತು. ಉತ್ತರಾದಿ ಮಠ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಮಂಗಳಾರತಿ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವ ಮಾರ್ಗದಲ್ಲಿ ನಿಂತಿದ್ದ ಸಾವಿರಾರು ಭಕ್ತರು ‘ಪುಂಡಲೀಕ ವರದಾ ವಿಠ್ಠಲ’, ‘ರುಕ್ಮಿಣಿ ಪಾಂಡುರಂಗ ವಿಠ್ಠಲ’ ಎಂದು ಜೈಕಾರ ಹಾಕುತ್ತಾ ರಥವನ್ನು ಎಳೆದರು. ವಾದ್ಯ ಮೇಳಗಳು ಮೊಳಗಿದ್ದು, ಭಜನೆ ಸಹ ಮಾಡಿದರು.
ರಥೋತ್ಸವದ ಬಳಿಕ ದೇಶಮುಖ ವಾಡಾದಲ್ಲಿ ವಾರಕರಿ ಸಮಾಜ ಸೇರಿದಂತೆ ವಿವಿಧ ಮಹಿಳಾ ಮಂಡಳಿಗಳ ಸದಸ್ಯರು ಪಾಂಡುರಂಗ ವಿಠ್ಠಲ ನಾಮಸ್ಮರಣೆಯ ಭಜನೆ ಹಾಡುಗಳನ್ನು ಹಾಡಿದರು. ಸಂಕೀರ್ತನೆ, ಹರಿವಾಣಿ ಸೇವೆ ಜರುಗಿದವು.
ದೇಶಮುಖ ಅವರ ಮನೆಯಂಗಳಲ್ಲಿ ಪ್ರತಿಷ್ಠಾಪಿಸಲಾದ ವಿಠ್ಠಲನ ಮೂರ್ತಿಯ ದರ್ಶನವನ್ನು ಸಾವಿರಾರು ಭಕ್ತರು ಪಡೆದರು. ಪ್ರಮುಖರಾದ ಪಾಂಡುರಂಗ ದೇಶಮುಖ, ಅಭಿಜಿತ್ ದೇಶಮುಖ, ಅಂಬರೇಶ್ ದೇಶಮುಖ ಸೇರಿದಂತೆ ದೇಶಮುಖ ಪರಿವಾರದವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಹಲವರು ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.