ಕಲಬುರಗಿ: ‘ರೆಡ್ಡಿ ಸಮಾಜ ಎಲ್ಲರಿಗೂ ಆಶ್ರಯ ನೀಡುತ್ತದೆ. ಅದು ಎಲ್ಲ ಸಮಾಜಗಳಿಗೂ ಆಲದ ಮರವಿದ್ದಂತೆ’ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಶನಿವಾರ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಲ್ಲಮ್ಮನವರು ಮಹಾಶರಣೆಯಾಗಿದ್ದರು. ಮಾನವ ಕುಲದಲ್ಲಿಯೇ ಸಮಾಜದ ಏಳಿಗೆ ಬಯಸಿದ ಮೊದಲಿಗರು’ ಎಂದರು.
‘ಮಲ್ಲಮ್ಮನವರು ಹೆಣ್ಣು ಕುಲಕ್ಕೆ ಮಾದರಿಯಾಗಿದ್ದರು. ಅವರ ತತ್ವಾದರ್ಶಗಳನ್ನು ತಿಳಿದುಕೊಳ್ಳಬೇಕು. ಅವರ ಬದುಕು ನಮಗೆ ದಾರಿದೀಪವಾಗಬೇಕು. ರಡ್ಡಿ ಸಮಾಜ ಶಕ್ತಿಯುತವಾದ ಸಮಾಜವಾಗಿದೆ. ಸಮಾಜದವರು ಒಗ್ಗಟ್ಟಾಗಿ ಹಕ್ಕು, ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಮಹನೀಯರನ್ನು ಸ್ಮರಿಸಲು ಜಯಂತಿಗಳನ್ನು ಆಚರಿಸಲಾಗುತ್ತದೆ. ಮಹನೀಯರ ವಿಚಾರ ಹಾಗೂ ಅವರ ಬದುಕನ್ನು ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶವೂ ಜಯಂತಿ ಆಚರಣೆಯ ಕಾರಣಗಳಲ್ಲಿ ಒಂದಾಗಿದೆ’ ಎಂದರು.
‘ಮಲ್ಲಮ್ಮನವರ ಬದುಕು ಸಂಘರ್ಷದಿಂದ ಕೂಡಿತ್ತು. ಅವರು ಕಷ್ಟ ಕೊಟ್ಟವರಿಗೂ ಒಳ್ಳೆಯದನ್ನೇ ಬಯಸಿದರು. ಅದಕ್ಕಾಗಿಯೇ ಶ್ರೀಶೈಲದ ಮಲ್ಲಿಕಾರ್ಜುನ ದೇವರ ಸಾಕ್ಷಾತ್ಕಾರವಾಯಿತು. ದೇವರ ಎದುರಿಗೂ ಅವರು ಸಮಾಜಕ್ಕೆ ಒಳಿತಾಗುವ ವರವನ್ನೇ ಕೇಳಿದರು. ಅವರ ವಿಚಾರಗಳ ದಾರಿಯಲ್ಲಿಯೇ ಸಾಗಬೇಕು’ ಎಂದು ಹೇಳಿದರು.
‘ದುಶ್ಚಟಗಳಿಗೆ ಬಲಿಯಾದ ತನ್ನ ಮೈದುನ ಮೇಮನನ್ನು ಪರಿವರ್ತಿಸಿ ತತ್ವಜ್ಞಾನಿಯನ್ನಾಗಿ ಮಾಡಿದ ಕೀರ್ತಿ ಮಲ್ಲಮ್ಮನವರಿಗೆ ಸಲ್ಲುತ್ತದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ,‘ಮಲ್ಲಮ್ಮನವರ ದಾನದ ಗುಣ ಮಾದರಿಯಾಗಬೇಕು. ಅವರ ದಾನದ ಪರಂಪರೆಯನ್ನು ಮುಂದುವರಿಸಬೇಕು. ಸಮಾಜದ ಏಳಿಗೆ ಎಲ್ಲರ ಜವಾಬ್ದಾರಿಯಾಗಬೇಕು. ಸಮಾಜವನ್ನು ಬೆಳೆಸಬೇಕು’ ಎಂದು ಹೇಳಿದರು.
ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಡಾ.ಶರಣಬಸಪ್ಪ ಬಿ.ಕಾಮರಡ್ಡಿ ಮಾತನಾಡಿ, ‘ಮಲ್ಲಮ್ಮ ಎಲ್ಲ ಸಮಾಜಕ್ಕೂ ಮಾದರಿಯಾಗಿದ್ದಾರೆ. ಅವರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು. ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಅಖಿಲ ಕರ್ನಾಟಕ ಹೇಮರಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಕರಡ್ಡಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದ ಶರಣರೆಡ್ಡಿ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಲೋಕೋಪಯೋಗಿ ಇಲಾಖೆಯ ಎಇಇ ವಿ.ಎಸ್.ಸೂಗರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಹಿರಿಯರಾದ ಭಾಗನಗೌಡ ಸಂಕನೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸೇರಿ ಹಲವರು ಹಾಜರಿದ್ದರು.
ಜಿ.ಜಿ.ವಣಿಕ್ಯಾಳ ನಿರೂಪಿಸಿದರು. ಶೇಖರ್ ನಾಲವಾರ ಸ್ವಾಗತಿಸಿದರು. ಮುಖಂಡ ಮಹೇಶರೆಡ್ಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.