ಚಿತ್ತಾಪುರ: ತಾಲ್ಲೂಕಿನ ಭಾಗೋಡಿ, ಇವಣಿ, ಮುಡಬೂಳ, ದಂಡೋತಿ ವ್ಯಾಪ್ತಿಯಲ್ಲಿನ ಕಾಗಿಣಾ ನದಿಯಲ್ಲಿ ಮತ್ತು ಖಾಸಗಿ ಪಟ್ಟಾ ಜಮೀನಿನಲ್ಲಿ ಹಗಲಿರುಳು ನಡೆಯುತ್ತಿರುವ ಮರಳು ಗಣಿಗಾರಿಕೆ ದಂಧೆಯಿಂದ ಅನೇಕ ರಸ್ತೆಗಳು ಹಾಳಾಗಿವೆ. ಜೀವ ಕೈಯಲ್ಲಿ ಹಿಡಿದು ಪ್ರಾಣ ಭೀತಿಯಿಂದ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.
ಭಾಗೋಡಿ ಗ್ರಾಮದಿಂದ ಗುಂಡಗುರ್ತಿ ಹತ್ತಿರ ಸೇಡಂ-ಕಲಬುರಗಿ ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆಯೂ ಸಹ ರಾಜ್ಯ ಹೆದ್ದಾರಿಯಾಗಿದೆ. ಆದರೆ, ಅಧಿಕ ಭಾರದ ಮರಳು ತುಂಬಿದ ಟಿಪ್ಪರ್ ಓಡಾಟದಿಂದ ರಸ್ತೆ ಕಿತ್ತು ಹೋಗಿದೆ. ತಗ್ಗು ಗುಂಡಿಗಳ ರಸ್ತೆಯಲ್ಲಿ ಬೈಕ್ ಸಂಚಾರ ಮಾಡುವುದಕ್ಕೆ ಸವಾರರು ಜೀವಹಾನಿಯ ಆತಂಕದಲ್ಲಿ ಸಾಗಬೇಕಿದೆ. ಮರಳು ದಂಧೆಕೋರರು ಜನರನ್ನು ಹೆದರಿಸಿ ಬೆದರಿಸುವ ಹಂತಕ್ಕೆ ತಲುಪಿದ್ದಾರೆ. ಅಧಿಕಾರಿಗಳಿಗೆ ದೂರು ನೀಡಲು ಜನರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಸಾರ್ವಜನಿಕರ ದೂರುಗಳು ವ್ಯಾಪಕವಾಗಿವೆ.
ಭಾಗೋಡಿ-ಚಿತ್ತಾಪುರ ರಸ್ತೆಯೂ ಹಾಳಾಗಿದೆ. ಸಂಚಾರಕ್ಕೆ ಅಗುತ್ತಿದ್ದ ಸಮಸ್ಯೆ ಗಮನಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುರುಮ್ ಹಾಕಿಸಿ ತಾತ್ಕಾಲಿಕ ದುರಸ್ತಿ ಕೆಲಸ ಕೈಗೊಂಡಿದ್ದಾರೆ. ಭಾಗೋಡಿ-ಮುಡಬೂಳ ರಸ್ತೆಯು ಚಿತ್ತಾಪುರ, ಮುಡಬೂಳ, ಭಾಗೋಡಿ, ಕದ್ದರಗಿ, ಮುತ್ತಗಿ, ಭಂಕೂರು ಮತ್ತು ಶಹಾಬಾದ್ ನಗರ ಹಾಗೂ ಬೆಳಗುಂಪಾ, ಪೇಠಶಿರೂರ, ಮುಗುಳನಾಗಾಂವ, ನಂದೂರು ಮಾರ್ಗದಿಂದ ಕಲಬುರಗಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಮರಳು ತುಂಬಿದ ಟಿಪ್ಪರ್, ಟ್ರ್ಯಾಕ್ಟರ್ ಓಡಾಟದಿಂದ ಇಡೀ ಡಾಂಬರ್ ರಸ್ತೆ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ತಗ್ಗು ಗುಂಡಿಯಲ್ಲಿ ಸಂಚಾರ ಮಾಡಲು ಹರಸಾಹಸ ಪಡಬೇಕು ಎಂದು ಬೈಕ್, ಜೀಪು, ಕಾರು, ಟಂಟಂ, ಆಟೊ, ವಾಹನ ಚಾಲಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ದಂಡೋತಿ-ಇವಣಿ ರಸ್ತೆಯು ದಂಡೋತಿಯಿಂದ ಇವಣಿ, ಬೆಳಗುಂಪಾ, ಪೇಠಶಿರೂರ, ಮುಗುಳನಾಗಾಂವ, ನಂದೂರು ಬಳಿ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುತ್ತದೆ. ದಂಡೋತಿ ಸಮೀಪದ ಖಾಸಗಿ ಪಟ್ಟಾ ಜಮೀನಿನಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯಿಮದ ಸಾಮರ್ಥ್ಯಕ್ಕಿಂತ ಅಧಿಕ ಭಾರ ಮರಳು ತುಂಬಿದ ಟಿಪ್ಪರ್ ಓಡಾಟದಿಂದ ರಸ್ತೆ ಹಾಳಾಗಿದೆ. ಮರಳಿನಲ್ಲಿನ ನೀರು ಸೋರಿಕೆಯಾಗಿ ರಸ್ತೆಗಳು ಹಳ್ಳ ಹಿಡಿಯುತ್ತಿವೆ. ರಸ್ತೆಗಳು ಹದಗೆಟ್ಟು ಹಾಳಾದರೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಮಾತ್ರ ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಮೂಕ ಪ್ರೇಕ್ಷಕ ನೀತಿಗೆ ಶರಣಾಗಿದ್ದಾರೆ ಎನ್ನುವ ದೂರು ಸಾಮಾನ್ಯವಾಗಿದೆ.
ಖಾಸಗಿ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಮೀನಿಗೆ ರಸ್ತೆಯ ಸಂಪರ್ಕ ಇರದಿದ್ದರೂ ಕಾಲು ದಾರಿ, ಹಣಾದಿ ರಸ್ತೆ ಆಧರಿಸಿಯೆ ಪರವಾನಿಗೆ ನೀಡಿದ್ದಾರೆ. ಹೀಗಾಗಿ, ಪರವಾನಿಗೆ ಪಡೆದವರು ಮರಳು ಸಾಗಾಟಕ್ಕೆ ರೈತರ ಭಾಗೋಡಿ ಸಮೀಪ ಎರಡು ಪ್ರತ್ಯೇಕ ರಸ್ತೆ, ಇವಣಿ ಸಮೀಪ ಒಂದು ರಸ್ತೆ, ದಂಡೋತಿ ಸಮೀಪ ಒಂದು ರಸ್ತೆ ಹೊಲಗಳಲ್ಲಿಯೆ ಕಲ್ಲು ಮಣ್ಣು ಹಾಕಿ ರಸ್ತೆ ನಿರ್ಮಾಣ ಮಾಡಿಕೊಂಡು ಮರಳು ಸಾಗಾಟ ದಂಧೆ ಮಾಡುತ್ತಿದ್ದಾರೆ. ಇದು ಕಂದಾಯ ಕಾನೂನು, ನಿಯಮದ ಉಲ್ಲಂಘನೆ ಅಲ್ಲವೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮರಳು ತುಂಬಿದ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು ಗಮನಿಸಲಾಗಿದೆ. ಇಲಾಖೆಯ ಮೇಲಾಧಿಕಾರಿಗಳಿಗೆ ರಸ್ತೆಯ ಸ್ಥಿತಿಗತಿ ವರದಿ ಸಲ್ಲಿಸಲಾಗಿದೆ. ರಸ್ತೆ ಸುಧಾರಣೆಗೆ ಅನುದಾನ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮಾಹಿತಿ ನೀಡಲಾಗಿದೆ- ಮಹ್ಮದ್ ಸಲೀಂ ಎಇಇ ಲೋಕೋಪಯೋಗಿ ಇಲಾಖೆ
ಖಾಸಗಿ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆಯುವಾಗ ಹಣಾದಿ ರಸ್ತೆ ಪಕ್ಕದಲ್ಲಿನ ಹೊಲಗಳ ಸರ್ವೆ ನಂಬರ್ ನಮೂದಿಸಿ ರೈತರಿಂದ ಒಪ್ಪಿಗೆ ಪಡೆದು ರಸ್ತೆ ನಿರ್ಮಿಸಿಕೊಳ್ಳುವುದಾಗಿ 'ಪರವಾನಿಗೆ ಒಪ್ಪಂದ' ಮಾಡಿಕೊಂಡಿದ್ದರೆ- ನಾಗಯ್ಯ ಹಿರೇಮಠ ತಹಶೀಲ್ದಾರ್
ಖಾಸಗಿ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆಯುವಾಗ ಹಣಾದಿ ರಸ್ತೆ ಪಕ್ಕದಲ್ಲಿನ ಹೊಲಗಳ ಸರ್ವೆ ನಂಬರ್ ನಮೂದಿಸಿ ರೈತರಿಂದ ಒಪ್ಪಿಗೆ ಪಡೆದು ರಸ್ತೆ ನಿರ್ಮಿಸಿಕೊಳ್ಳುವುದಾಗಿ 'ಪರವಾನಿಗೆ ಒಪ್ಪಂದ' ಮಾಡಿಕೊಂಡಿದ್ದರೆ- ನಾಗಯ್ಯ ಹಿರೇಮಠ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.