ADVERTISEMENT

ಶಹಾಬಾದ್: ಹದಗೆಟ್ಟ ರಸ್ತೆಗಳಿಂದ ಮುಕ್ತಿ ಎಂದು?

ಅಭಿವೃದ್ಧಿ ಕಾರ್ಯಗಳ ಆಮೆ ನಡಿಗೆಗೆ‌ ನಿವಾಸಿಗಳ ಬೇಸರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 7:58 IST
Last Updated 20 ಫೆಬ್ರುವರಿ 2021, 7:58 IST
ಶಹಾಬಾದ್‌ನಿಂದ ಜೇವರ್ಗಿಗೆ ತೆರಳುವ ಮುಖ್ಯರಸ್ತೆಯಲ್ಲಿ ಕೆಟ್ಟು ಹೋಗಿರುವ ರಸ್ತೆ       –ಪ್ರಜಾವಾಣಿ ಚಿತ್ರ
ಶಹಾಬಾದ್‌ನಿಂದ ಜೇವರ್ಗಿಗೆ ತೆರಳುವ ಮುಖ್ಯರಸ್ತೆಯಲ್ಲಿ ಕೆಟ್ಟು ಹೋಗಿರುವ ರಸ್ತೆ       –ಪ್ರಜಾವಾಣಿ ಚಿತ್ರ   

ಶಹಾಬಾದ್: ಜಿಲ್ಲಾ ಕೇಂದ್ರ ಕಲಬುರ್ಗಿಯಿಂದ ಸಮೀಪದಲ್ಲೇ ಇರುವ ನೂತನ ತಾಲ್ಲೂಕು ಕೇಂದ್ರವಾದಶಹಾಬಾದ್‌ ನಗರವು ‘ ದೀಪದ ಕೆಳಗೆ ಕತ್ತಲೆ ಎಂಬಂತೆ’ ಅಭಿವೃದ್ಧಿ ಕುರಿತಾಗಿ ತೀವ್ರ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿದೆ.

ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯ ನಂತರ ಅತಿಹೆಚ್ಚು ಅನ್ಯಾಯವಾಗಿದ್ದು ಶಹಾಬಾದ್‌ ಕ್ಷೇತ್ರಕ್ಕೆ ಎಂಬ ಬೇಸರ ಇಲ್ಲಿನ ಜನರಲ್ಲಿ ಮೂಡಿದೆ. ಇದೀಗ ಕ್ಷೇತ್ರದ ಮಾನ್ಯತೆಯನ್ನೂ ಕಳೆದುಕೊಂಡಿದ್ದು, ಕೆಲವು ಗ್ರಾಮಗಳು ಬಿಜೆಪಿಯ ಬಸವರಾಜ ಮತ್ತಿಮೂಡ ಅವರು ಪ್ರತಿನಿಧಿಸುವ ಕಲಬುರ್ಗಿ ಗ್ರಾಮೀಣ ಕ್ಷೇತ್ರಕ್ಕೆ ಬಂದಿದ್ದರೆ, ಇನ್ನು ಕೆಲವು ಗ್ರಾಮಗಳು ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಅವರು ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರಕ್ಕೆ ಸೇರಿವೆ. ಶಹಾಬಾದ್‌ ಈಗ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಸಾಕಷ್ಟು ಹಿಂದೆ ಉಳಿದಿದೆ ಎಂಬ ಆರೋಪಗಳಿವೆ.

ನಗರದ ಹಲವು ಜನಪರ ಸಂಘಟನೆಗಳ ಮುಖಂಡರು ಒಂದಾಗಿ ತಾಲ್ಲೂಕು ಹೋರಾಟ ಸಮಿತಿಯನ್ನು ರಚಿಸಿಕೊಂಡು ಒ‌ತ್ತಡ ಹೇರಿದ ಪರಿಣಾಮ ಶಹಾಬಾದ್‌ ತಾಲ್ಲೂಕು ಕೇಂದ್ರವಾಗಿ ರಚನೆಯಾಗಿದೆ. ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿಗಳು ಕಾರ್ಯಾರಂಭ ಮಾಡಿವೆ. ಆದರೆ, ಪ್ರಮುಖವಾಗಿ ಅಗತ್ಯವಿರುವ ಕೃಷಿ, ತೋಟಗಾರಿಕೆ, ಅಗ್ನಿಶಾಮಕ ಠಾಣೆ, ತಾಲ್ಲೂಕು ಆಸ್ಪತ್ರೆ, ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು, ಸರ್ಕಾರಿ ಐಟಿಐ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳು ಬೇಕು ಎಂಬುದು ಇಲ್ಲಿನ ನಿವಾಸಿಗಳ ಬೇಡಿಕೆ.

ADVERTISEMENT

ಹದಗೆಟ್ಟ ರಸ್ತೆಗಳು: ಶಹಾಬಾದ್‌ನ ಬಸವೇಶ್ವರ ವೃತ್ತದಿಂದ ನಗರಸಭೆಗೆ ತೆರಳುವ ಮುಖ್ಯರಸ್ತೆಯೊಂದನ್ನು ಹೊರತುಪಡಿಸಿದರೆ ಉಳಿದ ರಸ್ತೆಗಳ ಸ್ಥಿತಿ ಹೇಳಿಕೊಳ್ಳುವಂತಿಲ್ಲ. ಭಂಕೂರು ಗ್ರಾಮದಿಂದ ಶಹಾಬಾದ್‌ಗೆ ಬರುವ ಜೇಪಿ ಸಿಮೆಂಟ್ಸ್‌ ಬಳಿಯ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಶಹಾಬಾದ್‌ನಿಂದ ಜೇವರ್ಗಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇತ್ತೀಚೆಗೆ ಚಿತ್ತಾಪುರ ಪಟ್ಟಣದ ವೃದ್ಧೆಯೊಬ್ಬರು ಗಾಡಿಯಲ್ಲಿ ಹೋಗುತ್ತಿರುವಾಗ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ ಇಲ್ಲಿನ ನಿವಾಸಿಗಳು.

ಸುಮಾರು ಒಂದು ವರ್ಷದಿಂದ ಇಲ್ಲಿ ರಸ್ತೆ ಕಾಮಗಾರಿ ಕುಂಟುತ್ತಲೇ ಸಾಗಿದ್ದು, ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ತಗ್ಗು ದಿನ್ನೆಗಳು ರಸ್ತೆಯ ಇಕ್ಕೆಲಗಳಲ್ಲೂ ಇದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿವೆ. ಕೊಂಚ ಎಚ್ಚರ ತಪ್ಪಿದರೂ ತಗ್ಗಿನಲ್ಲಿ ಬಿದ್ದು ಗಾಯ ಮಾಡಿಕೊಳ್ಳುವ ಸಂಭವವೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.