ADVERTISEMENT

ಕಲಬುರಗಿ: ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಪ್ರತಿಯಾಗಿ ಸಂವಿಧಾನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 7:16 IST
Last Updated 15 ನವೆಂಬರ್ 2025, 7:16 IST
ಕಲಬುರಗಿಯ ಐವಾನ್–ಎ–ಶಾಹಿ ಅತಿಥಿ ಗೃಹದಲ್ಲಿ ಶುಕ್ರವಾರ ಸಭೆ ಸೇರಿ ಚರ್ಚಿಸಿದ ಬಳಿಕ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು
ಕಲಬುರಗಿಯ ಐವಾನ್–ಎ–ಶಾಹಿ ಅತಿಥಿ ಗೃಹದಲ್ಲಿ ಶುಕ್ರವಾರ ಸಭೆ ಸೇರಿ ಚರ್ಚಿಸಿದ ಬಳಿಕ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು   

ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ನ.16ರಂದು ಆರ್‌ಎಸ್‌ಎಸ್ ನಡೆಸಲಿರುವ ಪಥಸಂಚಲನ‌ಕ್ಕೆ ಪರ್ಯಾಯವಾಗಿ ನ.26ರಂದು ‘ಸಂವಿಧಾನ ಸಮಾವೇಶ’ ನಡೆಸಲು ಭೀಮ್‌ ಆರ್ಮಿ, ಭಾರತೀಯ ದಲಿತ ಪ್ಯಾಂಥರ್‌, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನಿರ್ಧರಿಸಿದೆ.

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ದೊರೆತ ಬೆನ್ನಲ್ಲೇ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ನಗರದ ಐವಾನ್–ಎ–ಶಾಹಿ ಅತಿಥಿ ಗೃಹದಲ್ಲಿ ಶುಕ್ರವಾರ ಸಭೆ ಸೇರಿ ಚರ್ಚಿಸಿದರು.

ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಂಘಟನೆಗಳು ಮುಖಂಡರು, ‘ಚಿತ್ತಾಪುರದಲ್ಲಿ ನ.16ರಂದು ಪಥಸಂಚಲನ ನಡೆಸಲು ಹೈಕೋರ್ಟ್‌ ಸಮ್ಮುಖದಲ್ಲಿ ಆರ್‌ಎಸ್‌ಎಸ್‌ಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ನಾವೂ ಅದೇ ದಿನ ಮೆರವಣಿಗೆ ಅಥವಾ ಜಾಥಾ ನಡೆಸಲು ಮೊದಲಿಗೆ ತೀರ್ಮಾನಿಸಿದ್ದೆವು. ಆದರೆ, ಈಗ ಆರ್‌ಎಸ್‌ಎಸ್ ಪಥಸಂಚಲನ‌ಕ್ಕೆ ಪರ್ಯಾಯವಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ದೇಶಕ್ಕೆ ಸಂವಿಧಾನ ಸಮರ್ಪಿಸಿದ ಸ್ಮರಣಾರ್ಥ ಚಿತ್ತಾಪುರದಲ್ಲಿ ನವೆಂಬರ್ 26ರಂದು ಸಂವಿಧಾನ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ’ ಎಂದು ಪ್ರಕಟಿಸಿದರು.

ADVERTISEMENT

ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಪ್ಪ‌ ಹೊಸಮನಿ ಮಾತನಾಡಿ, ‘ಚಿತ್ತಾಪುರದಲ್ಲಿ ಮೆರವಣಿಗೆ ನಡೆಸಲು ನಾವು ಬಹುತೇಕ ಒಂದು ತಿಂಗಳಿನಿಂದ ಕಾಯುತ್ತಿದ್ದೇವೆ. ಆದರೆ, ಪಥಸಂಚಲನ ನಡೆಸಲು ಆರ್‌ಎಸ್‌ಎಸ್‌ ಹೈಕೋರ್ಟ್‌ ಅಂಗಳದಲ್ಲಿ ಜಿಲ್ಲಾಡಳಿತದಿಂದ ಅನುಮತಿ ಪಡೆದಿದೆ. ಮೂಲತಃ ನಾವು ಕಾನೂನು ಗೌರವಿಸುವ ಜನ. ಹೀಗಾಗಿ ಆರ್‌ಎಸ್‌ಎಸ್‌ ಪಥಸಂಚಲನದ ದಿನವೇ ಮೆರವಣಿಗೆ ನಡೆಸದೇ ದೇಶಕ್ಕೆ ಸಂವಿಧಾನ ಸಮರ್ಪಿಸಿದ ನ.26ರಂದು ಚಿತ್ತಾಪುರದಲ್ಲಿ ಸಾವಿರಾರು ಜನರೊಂದಿಗೆ ಸಂವಿಧಾನ ಸಮಾವೇಶ ನಡೆಸಲಾಗುವುದು’ ಎಂದರು.

ಭೀಮ್‌ ಆರ್ಮಿ ರಾಜ್ಯ ಯುವ ಘಟಕದ ಅಧ್ಯಕ್ಷ ಸಂತೋಷ ಪಾಳಾ, ‘ಆರ್‌ಎಸ್‌ಎಸ್‌ ಪಥಸಂಚಲನದ ದಿನವೇ ಮೆರವಣಿಗೆ ನಡೆಸುವ ನಿರ್ಧಾರವನ್ನು ಕೈಬಿಡಲಾಗಿದ್ದು, ಅದರ ಬದಲು ನ.26ರಂದು ಸಂವಿಧಾನ ಸಮರ್ಪಣೆ ದಿನ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ದಿನೇಶ ದೊಡಮನಿ, ‘ಆರ್‌ಎಸ್‌ಎಸ್‌ ತಾನೊಂದು ದೊಡ್ಡ ಸಂಘಟನೆ. ತಾನು ಹೇಳಿದ್ದೇ ನಡೆಯುತ್ತದೆ, ಮಾಡಿದ್ದೇ ಸರಿ ಎಂಬ ಭ್ರಮೆಯಲ್ಲಿತ್ತು. ಅಧಿಕೃತ ಅನುಮತಿ ಪಡೆದೇ ನೀವು ಪಥಸಂಚಲನ ನಡೆಸಬೇಕು ಎಂಬ ಪಾಠವನ್ನು ಆ ಸಂಘಟನೆಗೆ ಚಿತ್ತಾಪುರದ ಜನ ಕಲಿಸಿದ್ದಾರೆ. ಚಿತ್ತಾಪುರ ಪಥಸಂಚಲನ ವಿವಾದದಲ್ಲಿ ಕಾನೂನು ಮೇಲುಗೈ ಸಾಧಿಸಿದೆ’ ಎಂದು ಹೇಳಿದರು.

‘ಚಿತ್ತಾಪುರದಲ್ಲಿ ಅಶಾಂತಿ ಸೃಷ್ಟಿಗೆ ಅವಕಾಶ ನೀಡಲ್ಲ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ನಿಲುವಿನಿಂದ ಆರ್‌ಎಸ್‌ಎಸ್‌ ರಾಷ್ಟ್ರಮಟ್ಟದಲ್ಲಿ ಕಾನೂನಿಗೆ ತಲೆಬಾಗಿದಂತಾಗಿದೆ. ಆರ್‌ಎಸ್‌ಎಸ್‌ ನಿಜವಾಗಿಯೂ ಈ ದೇಶದ ಕಾನೂನು ಗೌರವಿಸುವುದಾದರೆ, ಮೊದಲು ನೀವು ಸಂಘವನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ನೀವು ಮತ್ತೆ–ಮತ್ತೆ ಕೋರ್ಟ್‌ನಲ್ಲಿ ನಿಲ್ಲಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಮಕ್ಕಳಿಗೆ ಲಾಠಿ ಬದಲು ಪೆನ್ನು ನೀಡಲಿ’ ಎಂದು ಕಿವಿಮಾತು ಹೇಳಿದರು.

ಮುಖಂಡರಾದ ಸಂತೋಷ ಮೇಲ್ಮನಿ, ಉದಯ್ ಸಾಗರ್, ಮಲ್ಲಿಕಾರ್ಜುನ್ ಮೂಡಬುಲಕರ್, ಭರತ್ ಧನ್ನಾ, ಸೂರ್ಯಕಾಂತ್ ರದ್ದೇವಾಡಿ, ಗುರುಪಾದ ದೊಡ್ಡಮನಿ, ದೇವೇಂದ್ರ ಸಿರನೂರ, ರಾಹುಲ್‌ ಉಪ್ಪಾರ, ಗುಂಡಪ್ಪ ಲಂಡನಕರ, ಸಿದ್ಧಾರ್ಥ ದಿಕ್ಸಂಗಿ, ಸತೀಶ್ ಮಾಲೆ ಸೇರಿದಂತೆ ಹಲವರು ಹಾಜರಿದ್ದರು.

ಪೈಪೋಟಿ ಒಡ್ಡಿದ ಸಂಘಟನೆಗಳು

ಅಕ್ಟೋಬರ್‌ 19ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ನಿರ್ಧರಿಸಿದ್ದ ಆರ್‌ಎಸ್‌ಎಸ್‌ ಅನುಮತಿ ಕೋರಿ ಮನವಿ ಸಲ್ಲಿಸಿತ್ತು. ಅದೇ ದಿನವೇ ತಮಗೂ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಕೋರಿ ಭಾರತೀಯ ದಲಿತ ಪ್ಯಾಂಥರ್ಸ್ ಹಾಗೂ ಭೀಮ್ ಆರ್ಮಿ ಸಂಘಟನೆಗಳು ಪೈಪೋಟಿಗೆ ಬಿದ್ದಂತೆ ಅರ್ಜಿ ಸಲ್ಲಿಸಿದ್ದವು. ಬಳಿಕ ‘ಪಥಸಂಚಲನ’ ಹಲವು ತಿರುವು ಪಡೆದಿದ್ದು ಸ್ಮರಣೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.