ADVERTISEMENT

ಶಕ್ತಿ ಆರಾಧನೆ ಮರೆತ ಹಿಂದೂಗಳು: ರವೀಂದ್ರ ಅಭಿಮತ

ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯ ರವೀಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:44 IST
Last Updated 13 ಅಕ್ಟೋಬರ್ 2025, 5:44 IST
ಕಲಬುರಗಿಯ ಶರಣಬಸವೇಶ್ವರ ಮೈದಾನದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಆರ್‌ಎಸ್ಎಸ್‌ ಕರ್ನಾಟಕ ಉತ್ತರ ಕ್ಷೇತ್ರದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಮಾತನಾಡಿದರು             ಪ್ರಜಾವಾಣಿ ಚಿತ್ರ
ಕಲಬುರಗಿಯ ಶರಣಬಸವೇಶ್ವರ ಮೈದಾನದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಆರ್‌ಎಸ್ಎಸ್‌ ಕರ್ನಾಟಕ ಉತ್ತರ ಕ್ಷೇತ್ರದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಮಾತನಾಡಿದರು             ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಬಹುತೇಕ ಎಲ್ಲ ಹಿಂದೂ ದೇವತೆಗಳ ಕೈಯಲ್ಲೂ ಆಯುಧಗಳಿದ್ದು, ಶಕ್ತಿ ಪ್ರದರ್ಶನ ಮಾಡುತ್ತಿವೆ. ಆದರೂ, ನಾವೆಲ್ಲ ಶಕ್ತಿ ಆರಾಧನೆ ಮರೆತಿದ್ದೇವೆ. ಹೀಗಾದರೆ ಸೋಲು ಎದುರಾಗದೇ ಮತ್ತೇನು’ ಎಂದು ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯ ರವೀಂದ್ರ ಪ್ರಶ್ನಿಸಿದರು.

ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಆರ್‌ಎಸ್‌ಎಸ್‌ ಕಲಬುರಗಿ ಘಟಕದಿಂದ ವಿಜಯದಶಮಿ ಉತ್ಸವದ ಅಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ವಿಷ್ಣು, ಶಿವ, ಸೂರ್ಯ, ಗಣಪತಿ ಮತ್ತು ಪಾರ್ವತಿ ಎಂಬ ಐವರು ದೇವರುಗಳು. ಐದರಲ್ಲಿ ಪಾರ್ವತಿ ದುಷ್ಟರ ಸಂಹಾರ ಮಾಡಿ ಶಕ್ತಿಯ ಸಂದೇಶ ಕೊಡುತ್ತಿದ್ದಾಳೆ. ಆದರೆ, ಆಯುಧ ಪೂಜೆ ದಿನವೂ ನಾವೆಲ್ಲ ಆಯುಧಗಳನ್ನು ಬಿಟ್ಟು, ಉಪಕರಣಗಳಿಗೆ ಪೂಜೆ ಮಾಡುತ್ತಿದ್ದೇವೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಶಿವನ ಕೈಯಲ್ಲಿ ತ್ರಿಶೂಲ, ಷಣ್ಮುಗ ಸ್ವಾಮಿ ಕೈಯಲ್ಲಿ ಶೂಲ, ಕೃಷ್ಣನ ಕೈಯಲ್ಲಿ ಚಕ್ರವಿದೆ. ನಮಗೆ ಸೀತಾರಾಮನೇ ಪ್ರಿಯ. ಕೋದಂಡರಾಮನನ್ನು ನೆನಪಾಗೋದೇ ಕಡಿಮೆ. ಕೃಷ್ಣ ಕೊರಳು ಬಿಟ್ಟು ಚಕ್ರ ಹಿಡಿದರೂ, ನಮಗೆ ಚಕ್ರಧಾರಿಗಿಂತಲೂ ಮುರುಳೀಧರನೇ ಹೆಚ್ಚು ಪ್ರಿಯ. ಅದಕ್ಕೆ ಒದೆ ತಿನ್ನುತ್ತಿದ್ದೇವೆ’ ಎಂದರು.

‘ಹಿಂದೂ ಸಮಾಜ ಅರ್ಧಕ್ಕಿಂತಲೂ ಹೆಚ್ಚು ಭೂಮಿ ಕಳೆದುಕೊಂಡಿದೆ. ಆದರೂ, ಪಾಕ್‌ನ ಸಿಂಧ್‌ ಪ್ರಾಂತ್ಯ ಹಾಗೂ ಗುಜರಾತ್‌ ನಡುವಣ 93 ಕಿ.ಮೀ. ಸರ್‌ ಕ್ರೀಕ್‌ ವಿವಾದ ನಮಗೆಲ್ಲ ಆದ್ಯತೆ ವಿಷಯ ಆಗುತ್ತಿಲ್ಲ. ಈಗಲೂ ಬೆಳಗಾವಿ, ಕಾಸರಗೋಡು, ಕೃಷ್ಣೆ, ಕಾವೇರಿ, ಮಹಾದಾಯಿ ಗಲಾಟೆಯಲ್ಲೆ ಮುಳುಗಿದ್ದೇವೆ. ಪಾಕ್‌, ಚೀನಾ, ಅಮೆರಿಕ, ಇಂಗ್ಲೆಂಡ್‌ದವರನ್ನು ಮೊದಲು ತಡೆದು ಬಳಿಕ ರಾಜ್ಯಗಳ ವಿಚಾರ ನೋಡಿಕೊಳ್ಳಬೇಕು. ಆದರೆ, ಮನೆಯ ಬಾಗಿಲೇ ಹಾಕದೇ ಜಗಳಕ್ಕೆ ನಿಂತರೆ, ಕಳ್ಳರಿಂದ ಹಾನಿ ತಪ್ಪಿದ್ದಲ್ಲ’ ಎಂದು ಎಚ್ಚರಿಸಿದರು.

‘ಶಕ್ತಿಗಳಲ್ಲಿ ಮೂರು ಬಗೆ. ಒಂದು ಆಯುಧ–ಶಸ್ತ್ರ ಶಕ್ತಿ. 2ನೆಯದ್ದು ರಾಜ ಶಕ್ತಿ. 3ನೆಯದ್ದು ಲೋಕ ಶಕ್ತಿ. 2014ಕ್ಕೂ ಮುನ್ನ ಯಾವ ಸೈನಿಕರು–ಶಸ್ತ್ರಾಸ್ತ್ರಗಳು ಇದ್ದವೋ 2014ರ ನಂತರವೂ ಅವೇ ಇವೆ. ಆದರೂ, ಮೊದಲೆಲ್ಲ ಏರ್‌ಸ್ಟ್ರೈಕ್‌, ಸರ್ಜಿಕಲ್‌ ಸ್ಟ್ರೈಕ್‌, ಪಿಸಿಷನ್‌ ಸ್ಟ್ರೈಕ್‌ ಯಾಕೆ ನಡೆಯಲಿಲ್ಲ? ಲೋಕಶಕ್ತಿಯಲ್ಲಿ ಜಾಗೃತಿ ಬಂದು ರಾಜ ಶಕ್ತಿ ಬದಲಾದ ಬಳಿಕ ಇವೆಲ್ಲವೂ ಸಾಧ್ಯವಾಯಿತು. ಹಳಿ ತಪ್ಪಿದ್ದ ಆರ್ಥಿಕತೆಯಿಂದ ಹೊರಬಂದು ವಿಶ್ವದ ಅಗ್ರ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆಯಲು ಸಾಧ್ಯವಾಯಿತು’ ಎಂದರು.

‘ಅಧಿಕಾರದಲ್ಲಿ ಯಾವ ಪಕ್ಷ ಇರುತ್ತೆ, ಯಾರು ಪ್ರಧಾನಿ ಆಗುತ್ತಿದ್ದಾರೆ ಎಂಬುದಕ್ಕೂ ಆರ್‌ಎಸ್‌ಎಸ್‌ಗೆ ಸಂಬಂಧವಿಲ್ಲ. ಯಾರೇ ಅಧಿಕಾರದಲ್ಲಿದ್ದರೂ, ಹಿಂದುತ್ವಕ್ಕೆ, ಈ ದೇಶಕ್ಕೆ ಅನುಕೂಲವಾಗಿ ನಡೆಯಬೇಕು ಎಂಬುದು ಆರ್‌ಎಸ್‌ಎಸ್ ಅಪೇಕ್ಷೆ. ಹೀಗಾಗಿ ಆರ್‌ಎಸ್‌ಎಸ್‌ ಲೋಕ ಶಕ್ತಿಯ ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ. ಹಿಂದುತ್ವದ ಆಧಾರದಲ್ಲಿ ಸಂಘಟನೆಯ ಮೂಲಕ ಶಕ್ತಿ ನಿರ್ಮಾಣವನ್ನು ಆರ್‌ಎಸ್ಎಸ್‌ ಮಾಡುತ್ತಿದೆ’ ಎಂದರು.

‘ಇದೀಗ ಆರ್‌ಎಸ್‌ಎಸ್‌ಗೆ 100 ವರ್ಷಗಳು ತುಂಬಿವೆ. ಬ್ರ್ಯಾಂಡ್‌ ಆಗಿಸುವುದು, ಶಕ್ತಿ ಪ್ರದರ್ಶನ ಆರ್‌ಎಸ್‌ಎಸ್‌ ಕೆಲಸವಲ್ಲ. ಶಕ್ತಿಯ ದರ್ಶನ ನಮ್ಮ ಉದ್ದೇಶ. ಶತಾಬ್ದಿ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಸ್ವದೇಶಿ ಜೀವನ ಶೈಲಿ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರ –ಈ ಪಂಚ ಪರಿವರ್ತನೆಯನ್ನು ಆರ್‌ಎಸ್‌ಎಸ್‌ ನಿರೀಕ್ಷಿಸುತ್ತಿದೆ’ ಎಂದರು.

ಬಸವಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದ ಪೀಠಾಧಿಪತಿ ಮರೆಪ್ಪ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಚನ್ನಬಸಪ್ಪ ಮೆಕಾಲೆ ಮಾತನಾಡಿದರು. ಆರ್‌ಎಸ್‌ಎಸ್‌ ಜಿಲ್ಲಾ ಸಂಘ ಸಂಚಾಲಕ ಅಶೋಕ ಪಾಟೀಲ, ಗಿರೀಶ ಹೆಬ್ಬಾರ ವೇದಿಕೆಯಲ್ಲಿದ್ದರು.

ವಿಜಯದಶಮಿ ಉತ್ಸವ ಅಂಗವಾಗಿ ಕಲಬುರಗಿ ನಗರದಲ್ಲಿ ಭಾನುವಾರ ಆರ್‌ಎಸ್‌ಎಸ್‌ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಆಕರ್ಷಕ ಪಥಸಂಚಲನ

ವಿಜಯ‌ದಶಮಿ‌ ಉತ್ಸವ‌ ಅಂಗವಾಗಿ ನಗರದಲ್ಲಿ ಭಾನುವಾರ ಸಾವಿರಾರು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ನಗರದ ನೆಹರೂ ಗಂಜ್ ಎಪಿಎಂಸಿಯಲ್ಲಿ‌ ಮಧ್ಯಾಹ್ನ 3.30 ಹೊತ್ತಿಗೆ ಜಮಾಯಿಸಿದ ಗಣವೇಷಧಾರಿಗಳು ಮ.3.45ಕ್ಕೆ ಪಥಸಂಚಲನ‌ ಆರಂಭಿಸಿದರು. ಗಂಜ್‌ನಿಂದ ಹೊರಟ‌ ಪಥಸಂಚಲನ‌ ಮೆರವಣಿಗೆ ಚಡ್ಡಿ ಹೋಟೆಲ್ ಮಿಜಗುರಿ ಡಂಕಾ ಕ್ರಾಸ್ ಹಿಂಗುಲಾಂಬಿಕಾ ಮಂದಿರ ಗಣೇಶ ಮಂದಿರ ಸರಾಫ್ ಬಜಾರ್ ಕಪಡಾ ಬಜಾರ್ ಚೌಕ ಜನತಾ ವೃತ್ತ ಕಲಬುರಗಿ ತಹಶೀಲ್ದಾರ್ ಕಚೇರಿ ಎದುರಿನಿಂದ ಜಗತ್ ವೃತ್ತ ಯಲ್ಲಮ್ಮ ದೇವಸ್ಥಾನದ ಎದುರಿನಿಂದ ಶರಣಬಸವೇಶ್ವರ ಜಾತ್ರಾ‌ ಮೈದಾನ‌ ತಲುಪಿತು. ಶಿಸ್ತಿನಿಂದ‌ ಹೆಜ್ಜೆ ಹಾಕುತ್ತಿದ್ದ ಗಣವೇಷಧಾರಿಗಳ ಮೇಲೆ ಮೆರವಣಿಗೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದವರು ಪುಷ್ಪವೃಷ್ಟಿಗೈದರು. ಸಾವಿರಾರು ಮಂದಿ ಭಾಗಿ ಪಥ ಸಂಚಲನದಲ್ಲಿ ಶಾಸಕ ಬಸವರಾಜ ಮತ್ತಿಮಡು ವಿಧಾನ ಪರಿಷತ್‌ ಸದಸ್ಯರಾದ ಶಶೀಲ್ ನಮೋಶಿ ಬಿ.ಜಿ.ಪಾಟೀಲ ಬಿಜೆಪಿ ಮಹಾನಗರ ಅಧ್ಯಕ್ಷ ಚಂದು ಪಾಟೀಲ್ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅಮರನಾಥ್ ಪಾಟೀಲ್ ಲಿಂಗರಾಜಪ್ಪ ಅಪ್ಪ ಸಿದ್ದಾಜಿ ಪಾಟೀಲ್ ಸಚಿನ್ ಕಡಗಂಚಿ ಅಂಬಾರಾಯ ಅಷ್ಟಗಿ ಅಪ್ಪು ಕಣಕಿ ರಾಜು ವಾಡೇಕರ್ ಸೇರಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೂರು ಕಿ.ಮೀಟರ್‌ನಷ್ಟು ಸಾಲು ಕಂಡು ಬಂತು. ಕೆ.ಬಿ.ಹೆಗಡೇವಾರ್‌ ಎಂ.ಎಸ್‌.ಗೋಳ್ವಾಲಕರ್‌ ಹಾಗೂ ಭಾರತ ಮಾತೆಯ ಚಿತ್ರಗಳ ಮೆರವಣಿಗೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.