ADVERTISEMENT

ಶೇಂಗಾ ಬೆಳೆಗೆ ರಬ್ಬರ್‌ ಹುಳದ ಬಾಧೆ

ವಾಡಿ ವಲಯದಲ್ಲಿ ಇಳುವರಿ ಕುಸಿಯುವ ಭೀತಿ, ರೈತರಿಗೆ ಆತಂಕ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 19:30 IST
Last Updated 22 ನವೆಂಬರ್ 2019, 19:30 IST
ವಾಡಿ ಸಮೀಪದ ಲಾಡ್ಲಾಪುರ ಗ್ರಾಮದ ಜಮೀನೊಂದರಲ್ಲಿ ಶೇಂಗಾ ಬೆಳೆಗಳಿಗೆ ರಬ್ಬರ್ ಹುಳುಗಳ ಬಾಧೆ ತಗುಲಿದ್ದು, ಎಲೆಗಳಲ್ಲಿ ರಂದ್ರಗಳು ಕಾಣಿಸಿಕೊಳ್ಳುತ್ತಿವೆ.
ವಾಡಿ ಸಮೀಪದ ಲಾಡ್ಲಾಪುರ ಗ್ರಾಮದ ಜಮೀನೊಂದರಲ್ಲಿ ಶೇಂಗಾ ಬೆಳೆಗಳಿಗೆ ರಬ್ಬರ್ ಹುಳುಗಳ ಬಾಧೆ ತಗುಲಿದ್ದು, ಎಲೆಗಳಲ್ಲಿ ರಂದ್ರಗಳು ಕಾಣಿಸಿಕೊಳ್ಳುತ್ತಿವೆ.   

ವಾಡಿ: ಹಿಂಗಾರು ಹಂಗಾಮಿನ ವಾಣಿಜ್ಯ ಬೆಳೆ ಶೇಂಗಾಕ್ಕೆ ಹುಳುಗಳ ಬಾಧೆ ಶುರುವಾಗಿದೆ.

ರೋಗಕ್ಕೆ ಸಿಲುಕಿದ ಶೇಂಗಾ ಬೆಳೆಯ ಎಲೆಯಲ್ಲಿ ರಂದ್ರಗಳು ಕಾಣಿಸುತ್ತಿವೆ. ಇದರಿಂದ ಇಳುವರಿ ಗಣನೀಯವಾಗಿ ಕುಸಿಯುತ್ತದೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.

ನಾಲವಾರ ವಲಯದ ಮಸಾರಿ ಜಮೀನಿನ ರೈತರು ನೀರಾವರಿ ಆಶ್ರಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಶೇಂಗಾ ಬೀಜ ಬಿತ್ತನೆ ಮಾಡಿದ್ದಾರೆ. ಸದ್ಯ 35ರಿಂದ 40 ದಿನಗಳ ಬೆಳೆ ಇದೆ. ರೋಗ ಹತೋಟಿಗೆ ರೈತರು ಕೀಟನಾಶಕಗಳ ಸಿಂಪಡಣೆಗೆ ಮುಂದಾಗಿದ್ದಾರೆ. ಹಗಲು ಹೊತ್ತಿನಲ್ಲಿ ಭೂಮಿಯ ಆಳದಲ್ಲಿ ವಾಸಿಸಿ ರಾತ್ರಿ ವೇಳೆಯಲ್ಲಿ ಗಿಡಗಳ ಮೇಲೆ ದಾಳಿ ಮಾಡಿ ಎಲೆಗಳನ್ನು ಕತ್ತರಿಸಿ ತಿನ್ನುವ ಸ್ವಭಾವವಿದ್ದು ರೈತರ ನಿದ್ದೆ ಕಸಿದುಕೊಂಡಿವೆ. ಜೊತೆಗೆ ಎಲೆ ಚುಕ್ಕಿ ರೋಗ ಸಹ ಕಾಣಿಸಿಕೊಳ್ಳುತ್ತಿದೆ.

ADVERTISEMENT

ಹಲವೆಡೆ ರೈತರು ರಾತ್ರಿ ಹೊತ್ತಿನಲ್ಲಿ ಅಪಾಯವನ್ನು ಲೆಕ್ಕಿಸದೆ ಕೀಟನಾಶಕ ಸಿಂಪಡಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ಒಂದು ತಿಂಗಳ ಬೆಳೆಗೆ ಹೀಗಾಗಲೇ 2–3 ಬಾರಿ ಸಿಂಪಡಣೆ ಮಾಡಿದ ರೈತರು ಕೀಟನಾಶಕದ ಹೆಸರಿನಲ್ಲಿ ಸಾಕಷ್ಟು ಹಣ ಸುರಿದಿದ್ದಾರೆ.

‘ಪ್ರತಿ ಕ್ವಿಂಟಲ್‌ಗೆ ₹11600 ನೀಡಿ ಶೇಂಗಾ ಬೀಜ ಖರೀದಿಸಿದ್ದೇವೆ. ರಸಗೊಬ್ಬರ, ಬಿತ್ತನೆ ಖರ್ಚು ಸೇರಿ ಸಾವಿರಾರು ರೂಪಾಯಿ ಹಣ ಸುರಿದಿದ್ದೇವೆ. ಈಗ ಹುಳುಗಳ ಬಾಧೆ ಶುರುವಾಗಿದೆ' ಎಂದು ರೈತರು ಹಲಬುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.