ADVERTISEMENT

ಕಲಬುರಗಿ: ರುಕ್ಮಿಣಿ – ಪಾಂಡುರಂಗ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:48 IST
Last Updated 11 ಜುಲೈ 2025, 6:48 IST
ಕಲಬುರಗಿಯ ಬ್ರಹ್ಮಪುರದಲ್ಲಿ ಆಷಾಢ ಉತ್ಸವದ ಅಂಗವಾಗಿ ಗುರುವಾರ ರುಕ್ಮಿಣಿ- ಪಾಂಡುರಂಗ ವಿಠ್ಠಲ ರಥೋತ್ಸವ ಅದ್ದೂರಿಯಾಗಿ ಜರುಗಿತು                 ಪ್ರಜಾವಾಣಿ ಚಿತ್ರ
ಕಲಬುರಗಿಯ ಬ್ರಹ್ಮಪುರದಲ್ಲಿ ಆಷಾಢ ಉತ್ಸವದ ಅಂಗವಾಗಿ ಗುರುವಾರ ರುಕ್ಮಿಣಿ- ಪಾಂಡುರಂಗ ವಿಠ್ಠಲ ರಥೋತ್ಸವ ಅದ್ದೂರಿಯಾಗಿ ಜರುಗಿತು                 ಪ್ರಜಾವಾಣಿ ಚಿತ್ರ   

ಕಲಬುರಗಿ: ನಗರದ ಬ್ರಹ್ಮಪುರ ಬಡಾವಣೆಯ ದೇಶಮುಖ ವಾಡಾದಲ್ಲಿ ಆಷಾಢ ಏಕಾದಶಿ ಉತ್ಸವದ ಅಂಗವಾಗಿ ಗುರುಪೂರ್ಣಿಮೆಯ ಗುರುವಾರದಂದು ಭಕ್ತರ ಸಮ್ಮುಖದಲ್ಲಿ ರುಕ್ಮಿಣಿ– ಪಾಂಡುರಂಗ ವಿಠ್ಠಲ ರಥೋತ್ಸವ ಅದ್ದೂರಿಯಿಂದ ಜರುಗಿತು.

ದೇಶಮುಖ ಅವರ ಮನೆಯ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ರುಕ್ಮಿಣಿ– ಪಾಂಡುರಂಗ ವಿಠ್ಠಲ ಮೂರ್ತಿಗಳನ್ನು ಪಲ್ಲಕ್ಕಿ ಮೆರವಣಿಯಲ್ಲಿ ತರಲಾಯಿತು. ಅಲಂಕೃತವಾದ ರಥದಲ್ಲಿ ಮೂರ್ತಿಗಳನ್ನು ಇರಿಸಲಾಯಿತು. 

‘ಪುಂಡಲೀಕ ವರದಾ ವಿಠ್ಠಲ’, ‘ರುಕ್ಮಿಣಿ ಪಾಂಡುರಂಗ ವಿಠ್ಠಲ’ ಎಂಬ ಜಯಘೋಷ, ವಾದ್ಯ ಮೇಳಗಳ ನಾದ, ಭಜನೆಯೊಂದಿಗೆ ಲಾಲಗೇರಿ ಕ್ರಾಸ್‌ನ ಹನುಮಾನ ದೇವಸ್ಥಾನದವರೆಗೆ ರಥವನ್ನು ಎಳೆಯಲಾಯಿತು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾಪಸ್ ಮೂಲ ಸ್ಥಳಕ್ಕೆ ತಂದು ರಥವನ್ನು ನಿಲ್ಲಿಸಲಾಯಿತು.

ADVERTISEMENT

ರಥೋತ್ಸವ ಮಾರ್ಗದಲ್ಲಿ ವಾರಿಕಾರ ಸಮಾಜ ಹಾಗೂ ಲಕ್ಷ್ಮಿ ಮಹಿಳಾ ಮಂಡಳಿಗಳ ಸದಸ್ಯರು ರುಕ್ಮಿಣಿ– ಪಾಂಡುರಂಗ ವಿಠ್ಠಲ ನಾಮಸ್ಮರಣೆಯ ಭಜನೆ ಹಾಡುಗಳನ್ನು ಹಾಡಿದರು. ಸಂಕೀರ್ತನೆ, ಹರಿವಾಣಿ ಸೇವೆಯೂ ಜರುಗಿದವು.

ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌. ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಹಲವರು ದೇವರ ದರ್ಶನ ಪಡೆದರು.

ದೇಶಮುಖ ಅವರ ಮನೆಯಂಗಳದಲ್ಲಿ ಪ್ರತಿಷ್ಠಾಪಿಸಲಾದ ವಿಠ್ಠಲನ ಮೂರ್ತಿಯ ದರ್ಶನವನ್ನು ಸಾವಿರಾರು ಭಕ್ತರು ಮಾಡಿದರು. ಪ್ರಮುಖರಾದ ಪಾಂಡುರಂಗ ದೇಶಮುಖ, ಅಭಿಜಿತ್ ದೇಶಮುಖ, ಅಂಬರೇಶ್ ದೇಶಮುಖ ಸೇರಿದಂತೆ ದೇಶಮುಖ ಪರಿವಾರದವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಗೋಪಾಲ ಕಾಲ: ಜುಲೈ 12ರಂದು ನಡೆಯುವ ಗೋಪಾಲ ಕಾಲ (ಮಡಿಕೆ ಒಡೆಯುವುದು) ಮತ್ತು ಗಜ ವಾಹನ ಮೆರವಣಿಗೆಯೊಂದಿಗೆ ಏಕದಾಶಿ ಉತ್ಸವವು ಸಂಪನ್ನಗೊಳ್ಳಲಿದೆ.

ಕಳೆದ ಆರು ದಿನಗಳಿಂದ ಪಲ್ಲಕ್ಕಿ ಉತ್ಸವ, ಗರುಡ ವಾಹನ, ಗಜ ವಾಹನ ಮೆರವಣಿಗೆ, ಪಾಂಡುರಂಗ ವಿಶೇಷ ಪೂಜೆ, ಕೃಷ್ಣಾವತಾರ ಪೂಜೆ, ಸುಧಾಮಂಗಳ ಕಾರ್ಯಕ್ರಮ, ದ್ವಾದಶಿ ವಿಶೇಷ ಪೂಜೆ, ಅಖಂಡ ಭಾಗವತ ಸಪ್ತಾಹ ಸೇರಿದಂತೆ ನಾನಾ ಧಾರ್ಮಿಕ ಕೈಂಕರ್ಯಗಳು ಜರುಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.