ಕಲಬುರಗಿ: ‘ನ್ಯಾ.ಸದಾಶಿವ ಆಯೋಗದ ವರದಿ ಅಸಮರ್ಪಕವಾಗಿದೆ. ವಾಸ್ತವ ಸ್ಥಿತಿ ಅಧ್ಯಯನ ಮಾಡದೆ ವರದಿ ನೀಡಲಾಗಿದೆ. ನಾವು ಸುಪ್ರೀಂ ಕೋರ್ಟ್ ಆದೇಶ ಒಪ್ಪುವುದಿಲ್ಲ’ ಎಂದು ಶಾಸಕ ಮಾನಪ್ಪ ವಜ್ಜಲ ಹೇಳಿದರು.
ಜಿಲ್ಲಾ ಭೋವಿ (ವಡ್ಡರ) ಸಮಾಜ, ಸಿದ್ಧರಾಮೇಶ್ವರ ಸರ್ಕಾರಿ, ಅರೆ ಸರ್ಕಾರಿ ಮತ್ತು ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ಭೋವಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿಲ್ಲ. ಕಚೇರಿಯಲ್ಲಿ ಕುಳಿತು ವರದಿ ತಯಾರಿಸಲಾಗಿದೆ. ಇದು ಜಾರಿಯಾದರೆ ಭೋವಿ, ಬಂಜಾರ, ಕೊರಚ–ಕೊರಮದಂಥ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಇದರ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲಾಯಿತು. ನಮ್ಮ ಸಮಾಜದವರೂ ಕೈ ಹಿಡಿಯಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಪ್ರತಿಯೊಬ್ಬರಿಗೂ ಸಮುದಾಯ ತಾಯಿ ಇದ್ದಂತೆ. ಸಮಾಜದ ಏಳಿಗೆಗೆ ದುಡಿಯಬೇಕು. ಭೋವಿ ಸಮಾಜ ಹಿಂದುಳಿದಿದೆ. ಜನ ಜಾಗೃತರಾಗಬೇಕಾದ ಅಗತ್ಯ ಇದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಯುವಜನರು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸಮಾಜದಲ್ಲಿ ಮುಂದೆ ಬರಬೇಕು’ ಎಂದು ಕಿವಿಮಾತು ಹೇಳಿದರು.
‘ಭೋವಿ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಒಗ್ಗಟ್ಟಾದರೆ ಮಾತ್ರ ಹಕ್ಕು ಪಡೆದುಕೊಳ್ಳಲು ಸಾಧ್ಯ. ಇತರ ಸಮಾಜಗಳನ್ನು ನೋಡಿ ಕಲಿತುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಜಾಗೃತರಾಗಿರಬೇಕು. ನಿಮ್ಮ ಕುಂದು–ಕೊರತೆಗೆ ಸ್ಪಂದಿಸುವ ವ್ಯಕ್ತಿಗೆ ಮತ ನೀಡಬೇಕು’ ಎಂದರು.
‘ನಾನು ಬಡ ಕುಟುಂಬದಿಂದ ಬಂದವನು. ನಮ್ಮ ತಂದೆ–ತಾಯಿ ನಮ್ಮ ಸಮುದಾಯದ ಕುಲಕಸುಬು ಮಾಡುತ್ತಿದ್ದರು. ಸ್ವ–ಸಾಮರ್ಥ್ಯದಿಂದ ಛಲ ಬಿಡದೆ ನಿರಂತರವಾಗಿ ಪ್ರಯತ್ನಿಸಿದ್ದಕ್ಕೆ ಇಂದು ಜನಪ್ರತಿನಿಧಿಯಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಮತಗಳು ಕೇವಲ 8 ಸಾವಿರ. ಆದರೂ ಗೆದ್ದಿದ್ದೇನೆ. ಒಳ್ಳೆತನಕ್ಕೆ ಬೆಲೆ ಇದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಇತರ ಸಮುದಾಯಗಳ ಜೊತೆ ವಿಶ್ವಾಸದಿಂದ ಇದ್ದು ನಮ್ಮ ಸಮುದಾಯವನ್ನು ಪ್ರೀತಿಸಬೇಕು’ ಎಂದು ಹೇಳಿದರು.
‘ಈ ಹಿಂದೆ ಬಿಜೆಪಿ ಅವಧಿಯಲ್ಲಿ ಶಾಸಕನಾಗಿದ್ದಾಗ ಸಮಾಜದ ಹಲವರಿಗೆ ನೆರವು ನೀಡಿದ್ದೇನೆ. ಅಧಿಕಾರಿಗಳ ಕೆಲಸ ಮಾಡಿಕೊಟ್ಟಿದ್ದೇನೆ. ಸಮಾಜದ ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದೇನೆ. ಇಂದಿಗೂ ನನ್ನನ್ನು ಅವರು ಸ್ಮರಿಸುತ್ತಾರೆ’ ಎಂದರು.
ಸಿದ್ಧರಾಮೇಶ್ವರ ಸರ್ಕಾರಿ ಮತ್ತು ಅರೆ ಸರ್ಕಾರಿ ಮತ್ತು ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಗುಂಡಗುರ್ತಿ ಮಾತನಾಡಿ, ‘ಹಿಂದುಳಿದ ಸಮುದಾಯಗಳನ್ನು ಸಂಘಟಿಸುವುದು ಕಷ್ಟದ ಕೆಲಸ. ಸಂಘದ ಕಚೇರಿ ನಿರ್ಮಾಣಕ್ಕೆ ಜಾಗದ ಅಗತ್ಯ ಇದೆ. ಸಮಾಜದ ಹಿರಿಯರು ನೆರವು ನೀಡಿದರೆ ಅದು ಸಾಧ್ಯವಾಗಲಿದೆ. ಮಾನಪ್ಪ ವಜ್ಜಲ ಅವರ ನೇತೃತ್ವದಲ್ಲಿ ಸಮಾಜದ ಕಲ್ಯಾಣ ಕರ್ನಾಟಕ ವಧು–ವರರ ವೇದಿಕೆ ಮಾಡಬೇಕು’ ಎಂದು ಮನವಿ ಮಾಡಿದರು.
ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ರವೀಂದ್ರ ಕುಂಬಾರ ಉಪನ್ಯಾಸ ನೀಡಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಭೋವಿ (ವಡ್ಡರ) ಸಮಾಜದ ಅಧ್ಯಕ್ಷ ಗುಂಡಪ್ಪ ಸಾಳುಂಕೆ ಅಧ್ಯಕ್ಷತೆ ವಹಿಸಿದ್ದರು. ಶಹಾಬಾದ್ ನಗರಸಭೆ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ, ಮಹಾನಗರ ಪಾಲಿಕೆ ಸದಸ್ಯೆ ಹೊನ್ನಮ್ಮ ಬಾಬು ಹಾಗರಗಾ, ಕೆಪಿಟಿಸಿಎಲ್ ಇಇ ರಾಜೇಶ ಹಿಪ್ಪರಗಿ, ಬಿಬಿಎಂಪಿ ಇಇ ಬಸವರಾಜ ಶಹಾಬಾದಕರ್, ಹಣಮಂತ ಗುತ್ತೇದಾರ, ರಾಮು ನಂದೂರ, ಸಿದ್ರಾಮ ದಂಡಗುಲಕರ್, ಲಿಂಗಣ್ಣ ದೇವಕರ, ತಿಪ್ಪಣ್ಣ ಒಡೆಯರಾಜ ಹಾಗೂ ರಾಜು ಗುತ್ತೇದಾರ ಸೇರಿ ಹಲವರು ಇದ್ದರು.
ಭೋವಿ ಸಮಾಜದವರು ನ್ಯಾ.ಸದಾಶಿವ ಆಯೋಗದ ವರದಿ ಜಾರಿ ವಿರುದ್ಧ ಸಂಘಟಿತರಾಗಬೇಕಾದ ಅಗತ್ಯ ಇದೆ. ಮುಂದೆ ಏನು ಮಾಡಬೇಕು ಎನ್ನುವುದರ ಕುರಿತು ಚಿಂತನೆ ಮಾಡಬೇಕು.–ಮಾನಪ್ಪ ವಜ್ಜಲ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.