
ಕಲಬುರಗಿ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ‘ಸಂವಿಧಾನವೇ ಬೆಳಕು’ ಅಭಿಯಾನದಡಿ ಬುಧವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ವಾಕಥಾನ್ ನೂರಾರು ವಿದ್ಯಾರ್ಥಿಗಳಲ್ಲಿ ‘ಭಾರತೀಯರಿಗೆ ಸಂವಿಧಾನವೇ ಧರ್ಮ ಗ್ರಂಥ’ ಎಂಬ ಅರಿವಿನ ಕಿಡಿ ಹೊತ್ತಿಸುವಲ್ಲಿ ಯಶಸ್ವಿಯಾಯಿತು.
ಮೂಡಣದಿಂದ ಸೂರ್ಯರಶ್ಮಿಗಳು ಭುವಿಯತ್ತ ನುಗ್ಗಿದಂತೆ ನೂರಾರು ಯುವಜನರು ವಿವಿಧೆಡೆಯಿಂದ ಗುಲಬರ್ಗಾ ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಭವನದತ್ತ ಧಾವಿಸಿ ಬಂದರು. ಅತಿಥಿಗಳ ‘ಸಂವಿಧಾನ’ದ ತಿಳಿವಳಿಕೆಯ ನುಡಿಗಳಿಗೆ ಕಿವಿಯಾದರು.
ಬಳಿಕ ನಡೆದ ಮೂರು ಕಿ.ಮೀ ವಾಕಥಾನ್ ನಡೆಯಿತು. ವಿಶ್ವವಿದ್ಯಾಲಯದ ಹಸಿರು ಹೊನ್ನಿನ ಪರಿಸರದಲ್ಲಿ ಸಂವಿಧಾನಕ್ಕಾಗಿ ಹುಮ್ಮಸ್ಸಿನಿಂದ ಹೆಜ್ಜೆಹಾಕಿದರು. ಅತಿಥಿ ಗಣ್ಯರು ಮುಂಚೂಣಿಯಲ್ಲಿ ಸಾಗಿ ‘ಸಂವಿಧಾನ’ ಪ್ರೇಮ ಮೆರೆದರು.
ಅಂಬೇಡ್ಕರ್ ಭವನದಿಂದ ರಾಷ್ಟ್ರಕೂಟರ ಮಹಾದ್ವಾರ, ಚಾಲುಕ್ಯ ಮಹಾದ್ವಾರದ ಮೂಲಕ ಕಾರ್ಯಸೌಧದ ಎದುರಿನಿಂದ ಅಂಬೇಡ್ಕರ್ ಭವನದವರೆಗೆ ಸಾಗಿದ ವಾಕಥಾನ್ ಉದ್ದಕ್ಕೂ ‘ಸಂವಿಧಾನವೇ ಶಕ್ತಿ ಸಂವಿಧಾನವೇ ಬೆಳಕು’, ‘ಸಂವಿಧಾನ ಗೌರವಿಸಿ, ರಾಷ್ಟ್ರ ಬಲಪಡಿಸಿ’, ‘ಎಲ್ಲರಿಗೂ ಹಕ್ಕು, ಎಲ್ಲರಿಗೂ ಕರ್ತವ್ಯ– ಸಂವಿಧಾನದ ಕೊಡುಗೆ’ ಘೋಷಣೆಗಳು ಮೊಳಗಿದವು.
ಇದಕ್ಕೂ ಮುನ್ನ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಕುರಿತು ವಿಚಾರ ಸಂಕಿರಣ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಗುಲಬರ್ಗಾ ವಿವಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ‘ಬ್ರಿಟಿಷರು–ಅರಸೊತ್ತಿಗೆ ವ್ಯವಸ್ಥೆಯಿಂದ ಸ್ವತಂತ್ರಗೊಂಡ ಭಾರತದ ಆಡಳಿತಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿದ ದಿಕ್ಸೂಚಿಯೇ ಸಂವಿಧಾನ’ ಎಂದರು.
‘ಸಮಾನತೆ, ಶಿಕ್ಷಣ, ಆಡಳಿತ ವ್ಯವಸ್ಥೆ ಹಾಗೂ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುವ ಬಲ ಕೊಟ್ಟಿದ್ದೇ ಸಂವಿಧಾನ. ಅಂಥ ಸಂವಿಧಾನ ಬಿಟ್ಟು ನೋಡುವ ಯಾವುದೇ ಚಿಂತನೆಗಳು ಭವ್ಯ ಭಾರತದ ಹಿತಾಸಕ್ತಿಗೆ ಮಾರಕ. ಯುವಪೀಳಿಗೆಗೆ ಹಿಂದೆ, ಇಂದು, ಎಂದೂ ಸಂವಿಧಾನವೇ ಆಶಯ ಹಾಗೂ ಆಶ್ರಯ. ಸಂವಿಧಾನವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ಮುನ್ನಡೆದರೆ ಜಗತ್ತಿನಲ್ಲೇ ಭಾರತ ಅತ್ಯುತ್ತಮ ರಾಷ್ಟ್ರವಾಗಿ ಹೊರಹೊಮ್ಮುವುದು ನಿಸ್ಸಂಶಯ’ ಎಂದು ಪ್ರತಿಪಾದಿಸಿದರು.
ಗುಲಬರ್ಗಾ ವಿವಿ ಕುಲಸಚಿವ ಪ್ರೊ.ರಮೇಶ ಲಂಡನಕರ್, ‘ಸಂವಿಧಾನ ಜಾರಿಯಾಗಿ ಏಳೂವರೆ ದಶಕಗಳಾದರೂ ಇಂದಿಗೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಇದರ ನಡುವೆಯೇ ಸಂವಿಧಾನ ತಿರುಚುವ ಪ್ರಯತ್ನಗಳು ನಡೆಯುತ್ತಿವೆ. ಇಂಥ ಸಂದಿಗ್ಧ ಕಾಲಘಟ್ಟದಲ್ಲಿ ಸಂವಿಧಾನದ ಅರಿವು ವಿಶ್ವವಿದ್ಯಾಲಯ, ವಿದ್ಯಾರ್ಥಿಗಳ ಸಮೂಹ ದಾಟಿ ಜನಮಾನಸ ಮುಟ್ಟಬೇಕಿದೆ’ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಮಾತನಾಡಿ, ‘ದೇಶದ ಪ್ರಜೆಗಳಿಗೆ ಡಾ.ಅಂಬೇಡ್ಕರ್ ಸಂವಿಧಾನದ ಬೆಳಕು ಕೊಟ್ಟಿದ್ದಾರೆ. ಈ ಬೆಳಕು ಬಳಸಿ ನಾವೆಲ್ಲ ಭಾರತವನ್ನು ಮುನ್ನಡೆಸೋಣ’ ಎಂದರು.
‘ಪ್ರಜಾವಾಣಿ’ ಕಲಬುರಗಿ ಬ್ಯುರೊ ಮುಖ್ಯಸ್ಥ ವಿನಾಯಕ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
‘ಜೀವಕ್ಕೆ ರಕ್ತ ಬದುಕಿಗೆ ಸಂವಿಧಾನ ಮುಖ್ಯ’
‘ಸಂವಿಧಾನ ಬರೀ ಹಾಳೆಗಳ ಕಟ್ಟಲ್ಲ; ಭಾರತೀಯರ ಬದುಕಿನ ಭಾಗ. ಜೀವಕ್ಕೆ ರಕ್ತ ಎಷ್ಟು ಮುಖ್ಯವೋ ಬದುಕಿಗೆ ಸಂವಿಧಾನವೂ ಅಷ್ಟೇ ಮುಖ್ಯ’ ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಪ್ರತಿಪಾದಿಸಿದರು.
ನೆರೆದಿದ್ದ ನೂರಾರು ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿ ಪ್ರದರ್ಶಿಸಿದ ಅವರು ತಮ್ಮ ಉಪನ್ಯಾಸದಲ್ಲಿ ‘ಸಂವಿಧಾನ’ದ ಮಹತ್ವವನ್ನು ಅರುಹಿದರು.
‘ಭಾರತದ ಪ್ರಜೆಗಳಾದ ನಾವು...’ ಎಂದು ನಮ್ಮ ಸಂವಿಧಾನದ ಪೀಠಿಕೆ ಶುರುವಾಗುತ್ತದೆ. ಈ ಮೂಲಕ ದೇಶದ ಸಮಸ್ತ ನಾಗರಿಕರನ್ನೂ ಒಳಗೊಳ್ಳುತ್ತದೆ. ಸಂವಿಧಾನವು ಪ್ರತಿಯೊಬ್ಬರ ಭಾರತೀಯರ ಮನೆಯಲ್ಲಿ ಇರಬೇಕಾದ ಗ್ರಂಥ. ದೇಶದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಸಿಖ್ ಪಾರ್ಸಿ ಬೌದ್ಧ ಹೀಗೆ ಎಲ್ಲ ಧರ್ಮಗಳಿಗೂ ಧರ್ಮಗ್ರಂಥಗಳಿವೆ. ಆ ಎಲ್ಲ ಗ್ರಂಥಗಳಿಗೆ ರಕ್ಷಣೆ ಕೊಡುವ ಗ್ರಂಥ ಸಂವಿಧಾನ. ದೇಶದ ಸರ್ವಜನಾಂಗವನ್ನೂ ಮುಷ್ಟಿಯಂತೆ ಒಗ್ಗಟ್ಟಿನಿಂದ ಹಿಡಿದಿಟ್ಟ ಬಲ ಸಂವಿಧಾನ’ ಎಂದು ಅಭಿಪ್ರಾಯಪಟ್ಟರು.
‘ಸಂವಿಧಾನವು ಮಹಿಳೆಯರಿಗೆ ಹಿಂದುಳಿದ ವರ್ಗಗಳಿಗೆ ನಿಮ್ನ ವರ್ಗಗಳಿಗೆ ಅವಕಾಶ ಹಕ್ಕುಗಳನ್ನು ಕೊಟ್ಟಿದೆ. ಸಂವಿಧಾನವೇ ಇಲ್ಲದಿದ್ದರೆ ಇವರ್‍ಯಾರೂ ಉಳಿಯಲ್ಲ. ಆದರೆ ಸಂವಿಧಾನದ ಆಶಯಕ್ಕೆ ಧಕ್ಕೆ ಬಂದಾಗ ಅದನ್ನು ರಚಿಸಿದ ಅಂಬೇಡ್ಕರ್‌ಗೆ ಅಪಮಾನವಾದಾಗ ಬರೀ ದಲಿತ ಧ್ವನಿಗಳಷ್ಟೇ ಮೊಳಗುತ್ತವೆ. ಸಂವಿಧಾನದ ಸಂರಕ್ಷಣೆ ಬರೀ ದಲಿತರ ಹೊಣೆಯಲ್ಲ; ಅದು ಸಮಸ್ತರ ಕರ್ತವ್ಯ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.