ADVERTISEMENT

ಕಲಬುರಗಿ | ‘ಕಲಿಕೆಯ ಖಾತ್ರಿ’ ನೀಡುವ ಮಕ್ಕಳ ಮೆಚ್ಚಿನ ಶಿಕ್ಷಕ ಸಂಗಪ್ಪ ಯಾಳವಾರ

ಜಗನ್ನಾಥ ಡಿ.ಶೇರಿಕಾರ
Published 5 ಸೆಪ್ಟೆಂಬರ್ 2025, 7:02 IST
Last Updated 5 ಸೆಪ್ಟೆಂಬರ್ 2025, 7:02 IST
ಮಕ್ಕಳ ಜತೆಗೆ ತರಗತಿ ಕೊಠಡಿಯಲ್ಲಿ ಕುಳಿತು ಮಕ್ಕಳಿಗೆ ಚಟುವಟಿಕೆ ಆಧಾರದಲ್ಲಿ ಕಲಿಸುತ್ತಿರುವ ಶಿಕ್ಷಕ ಸಂಗಪ್ಪ ಯಾಳವಾರ
ಮಕ್ಕಳ ಜತೆಗೆ ತರಗತಿ ಕೊಠಡಿಯಲ್ಲಿ ಕುಳಿತು ಮಕ್ಕಳಿಗೆ ಚಟುವಟಿಕೆ ಆಧಾರದಲ್ಲಿ ಕಲಿಸುತ್ತಿರುವ ಶಿಕ್ಷಕ ಸಂಗಪ್ಪ ಯಾಳವಾರ   

ಚಿಂಚೋಳಿ: ಮಕ್ಕಳ ಭವಿಷ್ಯ ರೂಪಿಸಿಲು ಶ್ರಮಿಸುತ್ತಿರುವ ಮಕ್ಕಳ ಮೆಚ್ಚಿನ ಶಿಕ್ಷಕ ಸಂಗಪ್ಪ ಯಾಳವಾರ ಅವರು ತಾಂಡಾ ಮಕ್ಕಳಲ್ಲಿ ಕಲಿಕೆಯ ಖಾತ್ರಿ ನೀಡುವ ಮೂಲಕ ಮಾದರಿ ಶಿಕ್ಷಕರಾಗಿ ಗಮನ ಸೆಳೆಯುತ್ತಿದ್ದಾರೆ.

ತಾಲ್ಲೂಕಿನ ರಾಣಾಪುರ ಕ್ರಾಸ್‌ನಿಂದ 2.5 ಕಿ.ಮೀ ಅಂತರದಲ್ಲಿರುವ ಅಗಸಲಅಣಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಗಪ್ಪ ಯಾಳವಾರ  ಸೇವೆ ಸಲ್ಲಿಸುತ್ತಿದ್ದಾರೆ.

ಏನು ಕೇಳಿದರೂ ಅರಳು ಹುರಿದಂತೆ ಪಟಪಟನೇ ಉತ್ತರ ಹೇಳುವ ಮಕ್ಕಳೇ ಶಿಕ್ಷಕರ ಸೇವೆಗೆ ಕನ್ನಡಿಯಾಗಿದ್ದಾರೆ. ತಾಂಡಾದ ಮಕ್ಕಳಿಗೆ ಕನ್ನಡ ಹೊರಳುವುದಿಲ್ಲ. ಅವರ ಮಾತೃಭಾಷೆ ಬೇರೆಯಾಗಿದೆ. ಅವರಿಗೆ ಕಲಿಸುವುದೇ ನಮಗೆ ಸವಾಲಾಗಿದೆ ಎಂದು ಸಬೂಬು ಹೇಳುವ ಶಿಕ್ಷಕರೇ ತಾಲ್ಲೂಕಿನಲ್ಲಿ ಹೆಚ್ಚಾಗಿದ್ದಾರೆ. ಆದರೆ ಇದಕ್ಕೆ ಸಂಗಪ್ಪ ಯಾಳವಾರ ಅಪವಾದ ಎಂಬಂತಿದ್ದಾರೆ. ಇವರಿಗೆ ಕಲಿಕೆಯ ಭಾಷೆ-ಮಾತೃ ಭಾಷೆ ಬೇರೆಯಾಗಿದ್ದು ಸಮಸ್ಯೆ ಎನಿಸಿಲ್ಲ. ಮಾತೃಭಾಷೆ ಮತ್ತು ಕಲಿಕೆಯ ಭಾಷೆ ಬೇರೆಯಾದರೂ ತಮ್ಮ ಆಕರ್ಷಕ ಬೋಧನೆಯಿಂದ ಮಕ್ಕಳಿಗೆ ಕನ್ನಡ, ಇಂಗ್ಲೀಷ ಮತ್ತು ವಿಜ್ಞಾನ ಹಾಗೂ ಗಣಿತ, ಪರಿಸರ ಅಧ್ಯಯನ ಕಲಿಸಿ ಭದ್ರ ಬುನಾದಿ ಹಾಕಿದ್ದಾರೆ. ಇದರಿಂದ ಇದೊಂದೇ ತಾಂಡಾದ ಸುಮಾರು 120ಕ್ಕೂ ಹೆಚ್ಚು ಮಕ್ಕಳು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಿ.ದೇವರಾಜ ಅರಸು ಇಂಟರ್ ನ್ಯಾಷನಲ್ ಶಾಲೆ ಮತ್ತು ನವೋದಯ ಶಾಲೆಗೂ ಪ್ರವೇಶ ಪಡೆದು ತಮ್ಮ ಶಿಕ್ಷಣ ಮುಂದುವರಿಸಿದ್ದಾರೆ.

ADVERTISEMENT

ಶಿಕ್ಷಕ ಸಂಗಪ್ಪ ಶಾಲೆಯ ಎಲ್ಲಾ ಮಕ್ಕಳ ಫೈಲ್ ತಯಾರಿಸಿ ಪಾಠ ಬೋಧಿಸಿ ಪ್ರಶ್ನೆಗಳನ್ನು ನೀಡುತ್ತಾರೆ. ಪಾಠ ಮುಗಿದ ಮೇಲೆ ಕಡ್ಡಾಯವಾಗಿ ಕಿರು ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಮೌಲ್ಯಮಾಪನ ಮಾಡಿ ಸಾಧನೆಯ ಕಾರ್ಡ್ ಫೈಲಿಗೆ ಸೇರಿಸುತ್ತಾರೆ. ಇದು ವರ್ಷವಿಡೀ ನಡೆಯುತ್ತದೆ.

ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ಸ್ಪರ್ಧೆ ಮತ್ತು ಕಲಿಕಾ ಹಬ್ಬದಲ್ಲಿ ಈ ಶಾಲೆಯ ಮಕ್ಕಳ ಸಾಧನೆಯೂ ಗಣನೀಯವಾಗಿದೆ. ಸಂಗಪ್ಪ ಯಾಳವಾರ ಅವರು 14 ವರ್ಷಗಳಿಂದ ಇದೇ ತಾಂಡಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವರ್ಗಾವಣೆ ಮಾಡಿಕೊಳ್ಳಬೇಕೆಂದರೆ ತಾಂಡಾ ಜನರು ವರ್ಗವಾಗಿ ಹೋಗಬೇಡಿ ಎಂದು ಅಂಗಲಾಚುತ್ತಾರೆ ಹೀಗಾಗಿ ಇವರು ವರ್ಗಾವಣೆಯ ಗೋಜಿಗೆ ಹೋಗುತ್ತಿಲ್ಲ. ಕಲಿಕೆಯಲ್ಲಿ ಯಾರಾದರೂ ಹಿಂದುಳಿಯುತ್ತಿರುವುದು ಕಂಡು ಬಂದರೆ ಅವರಿಗೆ ವಿಶೇಷ ಗಮನ ಕೊಡುತ್ತಾರೆ. ಗುಣಮಟ್ಟದ ಕಲಿಕೆ ಹಾಗೂ ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ಸಹಕಾರವೂ ಚೆನ್ನಾಗಿದೆ. ಕರೆದಾಗ ತಕ್ಷಣ ಬರುವ ಪಾಲಕರು ಇಲ್ಲಿದ್ದಾರೆ. ಟೇಬಲ್, ಅಲಮೇರಾ, ನೀರಿನ ಟಾಕಿ(ಸ್ಟೀಲ್) ಶಾಲೆಗೆ ಸಮುದಾಯದವರೇ ನೀಡಿದ್ದಾರೆ.

ಮೂಲತಃ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಯಾಳವಾರ ಗ್ರಾಮದ ಸಂಗಪ್ಪ ಶಿಕ್ಷಕರಾಗಿ ನೇಮಕಗೊಳ್ಳುವ ಮೊದಲು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದೇ ಅನುಭವ ಶಾಲೆಯಲ್ಲಿ ಮುಂದುವರಿಸಿ ಮಾದರಿಯಾಗಿದ್ದಾರೆ. ಇವರಿಗೆ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ಸೇರಿದತೆ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. 

ನಮ್ಮ ಹಿರಿಯರು ಮಾಡಿದ ಪುಣ್ಯದಿಂದ ನಮಗೆ ಸಂಗಮೇಶ ಯಾಳವಾರ ಅವರಂತಹ ಶಿಕ್ಷಕರು ಲಭಿಸಿದ್ದಾರೆ. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಅವರು ನಮ್ಮ ಮಕ್ಕಳ ಭವಿಷ್ಯ ರೂಪಿಸುವ ಅಮೂಲ್ಯ ರತ್ನವಾಗಿದ್ದಾರೆ.
ಜಗನ್ನಾಥ ಜಾಧವ ಗ್ರಾ.ಪಂ. ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.