
ಕಲಬುರಗಿ: ‘ಸರ್ವಜ್ಞ ಕೇವಲ ಕನ್ನಡ ನಾಡಿನ ಕವಿಯಲ್ಲ. ಆತ ಈ ಮಣ್ಣಿನ ಸಾಂಸ್ಕೃತಿಕ ಅನನ್ಯತೆಯ ಪ್ರತಿರೂಪ’ ಎಂದು ಅಧ್ಯಾಪಕ ರವಿಂದ್ರ ಕುಂಬಾರ ಅಭಿಪ್ರಾಯಪಟ್ಟರು.
ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಯ ಸಹಯೋಗದಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸರ್ವಜ್ಞ 16ನೇ ಶತಮಾನದಲ್ಲೇ ಜಾತಿ ಪದ್ಧತಿ ಕಟುವಾಗಿ ಟೀಕಿಸಿದ್ದರು. ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ? ಎಂದು ಪ್ರಶ್ನಿಸುವ ಮೂಲಕ, ಜ್ಞಾನಕ್ಕೆ ಜಾತಿಯ ಹಂಗಿಲ್ಲ ಎಂಬ ಮಹಾನ್ ಸತ್ಯವನ್ನು ಸಾರಿದ ಕ್ರಾಂತಿಕಾರಿ. ಸರ್ವಜ್ಞನ ವಚನಗಳಲ್ಲಿ ಕೇವಲ ಸಾಹಿತ್ಯವಲ್ಲದೆ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ ಮತ್ತು ವೈದ್ಯಕೀಯ ವಿಚಾರಗಳ ಬಗ್ಗೆ ಆಳವಾದ ಜ್ಞಾನವಿದೆ. ಪ್ರತಿಯೊಂದು ವಿಷಯದ ಮೇಲೂ ಅವರ ಹಿಡಿತ ಅದ್ಭುತವಾಗಿತ್ತು’ ಎಂದರು.
‘ರಾಜಕೀಯ ಶಕ್ತಿಗಿಂತ ಸಾಂಸ್ಕೃತಿಕ, ಸಾಮಾಜಿಕ ಪ್ರಜ್ಞೆ ಮುಖ್ಯ. ಸಮಾಜದವರು ವರ್ಷಕ್ಕೊಮ್ಮೆಯಾದರೂ ಸಂಘಟಿತರಾಗಿ ತಮ್ಮ ಅಸ್ತಿತ್ವ ಪ್ರದರ್ಶಿಸಬೇಕು. ಆಗ ಮಾತ್ರ ರಾಜಕೀಯ ವ್ಯಕ್ತಿಗಳು ಸಮಾಜದ ಬಾಗಿಲಿಗೆ ಬರುತ್ತಾರೆ. ಅಸೂಯೆ ಮತ್ತು ಒಳ ಜಗಳಗಳನ್ನು ಬಿಟ್ಟು ಸಮಾಜ ಪ್ರಜ್ಞಾವಂತಿಕೆಯಿಂದ ಒಗ್ಗೂಡಬೇಕಾದ ಅನಿವಾರ್ಯತೆ ಇದೆ’ ಎಂದು ಹೇಳಿದರು.
‘ನಿಜಶರಣ ಅಂಬಿಗರ ಚೌಡಯ್ಯ ಮತ್ತು ಸರ್ವಜ್ಞ ಮಹಾಕವಿಗಳು ಕನ್ನಡ ನಾಡಿನ ಅತ್ಯಂತ ಪ್ರಭಾವಶಾಲಿ ಚಿಂತಕರು. ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕ’ ಎಂದರು.
ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಎಲ್.ಕುಂಬಾರ ಮಾತನಾಡಿ, ‘ಕುಂಬಾರ ಸಮಾಜ ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು’ ಎಂದು ಹೇಳಿದರು.
‘ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಅಂದಿನ ಕಾಲದಲ್ಲೇ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದರು. ಅವರ ಕ್ರಾಂತಿಕಾರಿ ವಿಚಾರಗಳು ಒಂದು ಕಾಲಕ್ಕೆ ಸೀಮಿತವಲ್ಲ. ಅವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ’ ಎಂದರು
ಜಿಲ್ಲಾಧಿಕಾರಿ ಕಚೇರಿ ಸಹಾಯಕ ಶಿವಪ್ರಭು ಹಿರೇಮಠ, ಲೋಕೋಪಯೋಗಿ ಇಲಾಖೆ ಅಧಿಕಾರಿ ಹರೀಶ ಕುಂಬಾರ, ಸಮಾಜದ ಮುಖಂಡರಾದ ವಿಠ್ಠಲ್ ಕುಂಬಾರ, ಸದಾನಂದ ಕುಂಬಾರ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.