
ಕಲಬುರಗಿ: ವಿಜ್ಞಾನದ ಸಂಗತಿಗಳನ್ನು ಜನರಿಗೆ ಹತ್ತಿರವಾಗಿಸಿ ಅವರ ಕುತೂಹಲ ತಣಿಸಲು ಕಲ್ಯಾಣ ಕರ್ನಾಟಕದಲ್ಲಿ ವಿಜ್ಞಾನ ಕೇಂದ್ರಗಳು ಹಾಗೂ ವಿಜ್ಞಾನ ಪಾರ್ಕ್‌ನ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 2014ರವರೆಗೂ ಕಲಬುರಗಿಯಲ್ಲಿ ಮಾತ್ರ ವಿಜ್ಞಾನ ಕೇಂದ್ರ ಇತ್ತು. 2014ರಲ್ಲಿ ಬಳ್ಳಾರಿಯಲ್ಲಿ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ ಸ್ಥಾಪಿಸಲಾಯಿತು. ಆದರೆ, ಉಳಿದ ಜಿಲ್ಲೆಗಳ ಶಿಕ್ಷಕರು ಮಕ್ಕಳನ್ನು ದೂರದ ಕಲಬುರಗಿಗೆ ಕರೆದುಕೊಂಡು ಬರಬೇಕಿತ್ತು. ಇದನ್ನು ಮನಗಂಡ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಯಚೂರು, ಯಾದಗಿರಿಯಲ್ಲಿ ವಿಜ್ಞಾನ ಕೇಂದ್ರ, ವಿಜಯನಗರದಲ್ಲಿ ವಿಜ್ಞಾನ ಪಾರ್ಕ್ ಸ್ಥಾಪನೆಗೆ ಮುಂದಾಗಿದೆ.
ನಾಗಾವಿ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ: ಚಿತ್ತಾಪುರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ನಾಗಾವಿಯಲ್ಲಿ ₹ 2.11 ಕೋಟಿ ಅನುದಾನದಲ್ಲಿ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರದ ಕಟ್ಟಡ ನಿರ್ಮಿಸಲಾಗಿದೆ. ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಉದ್ಘಾಟನೆಗೊಳ್ಳಲಿದೆ. ಈ ಕೇಂದ್ರಕ್ಕೆ ರಾಜ್ಯದ ತಾಲ್ಲೂಕೊಂದರಲ್ಲಿ ನಿರ್ಮಿಸಲಾಗುತ್ತಿರುವ ಏಕೈಕ ವಿಜ್ಞಾನ ಕೇಂದ್ರ ಎನ್ನುವ ಹೆಗ್ಗಳಿಕೆ ಇದೆ.
ಈ ಕೇಂದ್ರದಲ್ಲಿ ವಿನೋದ ವಿಜ್ಞಾನ ಗ್ಯಾಲರಿ, ವಿಷಯಾಧಾರಿತ ಗ್ಯಾಲರಿ, ತರಬೇತಿ ಕೊಠಡಿ, ಕಂಪ್ಯೂಟರ್ ಹಾಗೂ ಗ್ರಂಥಾಲಯ, ಹೊರಾಂಗಣ ವಿಜ್ಞಾನ ಪಾರ್ಕ್ ಹಾಗೂ ಚಟುವಟಿಕೆ ಕೊಠಡಿ ಇರಲಿದೆ.
ರಾಯಚೂರಿನಲ್ಲಿ ಕೆಟಗರಿ–2 ವಿಜ್ಞಾನ ಕೇಂದ್ರ: ರಾಯಚೂರಿನಲ್ಲಿ ₹ 22.25 ಕೋಟಿ ವೆಚ್ಚದಲ್ಲಿ (ರಾಜ್ಯ ಸರ್ಕಾರದ ₹ 12.67 ಕೋಟಿ ಹಾಗೂ ಕೇಂದ್ರ ಸರ್ಕಾರದ ₹ 9.58 ಕೋಟಿ) ಅನುದಾನದಲ್ಲಿ ಕೆಟಗರಿ–2 ವಿಜ್ಞಾನ ಕೇಂದ್ರದ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಇದು ತಾತ್ಕಾಲಿಕ ಪ್ರದರ್ಶನ ಪ್ರದೇಶ, ಸಂದರ್ಶಕರ ಚಟುವಟಿಕೆ ಪ್ರದೇಶ, ಪ್ರದರ್ಶನ ಅಭಿವೃದ್ಧಿ ಪ್ರಯೋಗಾಲಯ, ಕಚೇರಿ, ಸಭಾಂಗಣ, ತಾರಾಮಂಡಲ ಹಾಗೂ ಮಕ್ಕಳ ಚಟುವಟಿಕೆ ಪ್ರದೇಶವನ್ನು ಹೊಂದಿರಲಿದೆ.
ಯಾದಗಿರಿಯಲ್ಲಿ ಕೆಟಗರಿ–3 ವಿಜ್ಞಾನ ಕೇಂದ್ರ: ಯಾದಗಿರಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ₹ 6.65 ಕೋಟಿ ಅನುದಾನದಲ್ಲಿ ಕೆಟಗರಿ–3 ವಿಜ್ಞಾನ ಕೇಂದ್ರ ನಿರ್ಮಿಸಲು ಯೋಜಿಸಲಾಗಿದೆ. ಈಗಾಗಲೇ ಜಾಗ ಗುರುತಿಸಲಾಗಿದೆ. ಶೀಘ್ರವೇ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ.
ಕೆಟಗರಿ–3 ವಿಜ್ಞಾನ ಕೇಂದ್ರದಲ್ಲಿ ವಸ್ತು ಪ್ರದರ್ಶನ ಸಭಾಂಗಣ, ತಾತ್ಕಾಲಿಕ ಪ್ರದರ್ಶನ ಸಹಿತ ಬಹುಪಯೋಗಿ ಸಭಾಂಗಣ, ಚಟುವಟಿಕೆ ಪ್ರದೇಶ, ಕಚೇರಿ ಹಾಗೂ ನಾವೀನ್ಯತೆ ಚಟುವಟಿಕೆ ಸಭಾಂಗಣ ಇರಲಿದೆ.