ADVERTISEMENT

ರಾಷ್ಟ್ರಕೂಟ ಉತ್ಸವ ಆಚರಣೆಗೆ ಸ್ಪಂದಿಸುವುದೇ ಸರ್ಕಾರ?

ರಾಜ್ಯ ಬಜೆಟ್‌ನತ್ತ ಜನರ ಚಿತ್ತ: ಸಚಿವ ಡಾ.ಶರಣಪ್ರಕಾಶ ಪಾಟೀಲ ಮೇಲೆ ಹೆಚ್ಚಿದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:40 IST
Last Updated 25 ಫೆಬ್ರುವರಿ 2026, 7:40 IST
ಡಾ.ಶರಣಪ್ರಕಾಶ ಪಾಟೀಲ, ಸಚಿವ
ಡಾ.ಶರಣಪ್ರಕಾಶ ಪಾಟೀಲ, ಸಚಿವ   

ಸೇಡಂ: ಜಿಲ್ಲೆಯಲ್ಲಿ ಸಾಂಸ್ಕೃತಿಕ ನಗರಿ ಸೇಡಂ ಪ್ರಗತಿಯ ಪಥದತ್ತ ಚಲಿಸುತ್ತಿದೆ. ಅಭಿವೃದ್ಧಿಗೆ ತಕ್ಕಂತೆ ಜನರ ನಿರೀಕ್ಷೆಗಳೂ ಹೆಚ್ಚುತ್ತಿವೆ. ಹಂಪಿ ಮಾದರಿಯಂತೆ ರಾಷ್ಟ್ರಕೂಟರ ಉತ್ಸವವನ್ನು ಸರ್ಕಾರವೇ ಆಚರಿಸಬೇಕು ಎಂಬ ಹಲವು ವರ್ಗಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುವ ಆಶಾಭಾವನೆಯ ಕನಸಿನ ಗರಿ ಮೂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಡಾ.ಶರಣಪ್ರಕಾಶ ಪಾಟೀಲರ ಮೇಲೆ ಸೇಡಂ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೆಜ್ ಏನಾದರೂ ಸಿಗಲಿದೆಯೇ ಎಂಬ ಕಾತುರ ಮೂಡಿದೆ. ಕಲಬುರಗಿಯಲ್ಲಿ ಕಳೆದ ವರ್ಷ ನಡೆದ ಸಚಿವ ಸಂಪುಟದಲ್ಲಿ ಕಾಗಿಣಾ ಏತನೀರಾವರಿಗೆ ಹಾಗೂ ಮಳಖೇಡ ಕೋಟೆಯ ಜೀರ್ಣೋದ್ಧಾರಕ್ಕೆ ಅನುದಾನ ಹಾಗೂ ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ನಿರ್ಧಾರವನ್ನು ಸರ್ಕಾರ ಘೋಷಿಸಿದ್ದು, ಕಾರ್ಯ ಪ್ರಗತಿಯಲ್ಲಿವೆ.

ಶ್ರೇಷ್ಠ ರಾಜಮನೆತನಗಳಲ್ಲಿ ಒಂದಾಗಿದ್ದ ರಾಷ್ಟ್ರಕೂಟರ ರಾಜಧಾನಿ ಮಳಖೇಡ ಕೋಟೆ ಜೀರ್ಣೋದ್ಧಾರಗೊಳಿಸಿ, ರಾಷ್ಟ್ರಕೂಟರ ಉತ್ಸವ ಆಚರಿಸಬೇಕು. 2017ರಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ರಾಷ್ಟ್ರಕೂಟರ ಉತ್ಸವ ನಡೆದಿತ್ತು. ಅದಾದ ನಂತರ ಸ್ಥಗಿತಗೊಂಡಿದ್ದು, ಕೆಲ ಖಾಸಗಿ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಲೇ, ರಾಷ್ಟ್ರಕೂಟರ ಉತ್ಸವವನ್ನು ಅನಿವಾರ್ಯವೆಂಬಂತೆ ಆಚರಿಸಿಕೊಂಡು ಬರುತ್ತಿವೆ. ಸರ್ಕಾರವೇ ರಾಷ್ಟ್ರಕೂಟರ ಉತ್ಸವ ಆಚರಿಸಿ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂಬ ಅಭಿಪ್ರಾಯ ಜನರದ್ದಾಗಿದೆ.

ADVERTISEMENT

ಅಲ್ಲದೆ ಮಳಖೇಡ ಕೋಟೆ ಮೂಲ ಸೌಕರ್ಯಗಳಿಂದ ವಂಚಿಕೊಂಡಿದ್ದು, ಕೋಟೆಯನ್ನು ಪ್ರವಾಸಿ ತಾಣವನ್ನಾಗಿಸಬೇಕು ಎಂಬ ಬೇಡಿಕೆ ದಶಕಗಳಿಂದಿದೆ. ಈ ಹಿಂದೆ ಕೋಟೆ ಜೀರ್ಣೋದ್ಧಾರಕ್ಕೆ ₹ 5 ಕೋಟಿ ಅನುದಾನವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ನೀಡಿದ್ದರು. ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ₹ 1 ಕೋಟಿ ನೀಡಿದ್ದರು. ಪುನಃ ಜೀರ್ಣೋದ್ಧಾರಕ್ಕೆ ಕಳೆದ ವರ್ಷ ₹ 30 ಕೋಟಿ ಸಚಿವ ಸಂಪುಟದಲ್ಲಿ ಘೋಷಣೆಯಾಗಿದೆ. ನಿರೀಕ್ಷೆಗೆ ತಕ್ಕಂತೆ ಕೋಟೆ ಜೀರ್ಣೋದ್ಧಾರವಾಗುತ್ತಿಲ್ಲವೆಂಬ ಅಪವಾದವಿದ್ದು, ಕೋಟೆಯ ಜೀರ್ಣೋದ್ಧಾರದ ಸಂದರ್ಭದಲ್ಲಿ ದೊರೆತ ಖಡ್ಗ, ನಾಗಶಿಲ್ಪಿ, ಆನೆ, ತೋಪು ಸೇರಿದಂತೆ ಇನ್ನಿತರ ಅವಶೇಷಗಳನ್ನು ಸಂಗ್ರಹಿಸಿ ವಸ್ತು ಸಂಗ್ರಹಾಲಯ ಮಾಡಬೇಕು. ಜೊತೆಗೆ ಪ್ರವಾಸಿ ತಾಣ ಮಾಡಬೇಕು ಎಂಬುದೇ ಜನರ ಒತ್ತಾಸೆಗೆ ಸರ್ಕಾರ ಸ್ಪಂದಿಸುತ್ತಾ ಎಂಬ ಕಾದು ನೋಡಬೇಕಿದೆ.

ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ

ನಗರದಲ್ಲಿ ಒಳಚರಂಡಿ ಕಾಮಗಾರಿ ವರ್ಷಗಳೇ ಕಳೆದರೂ ಇದುವರೆಗೆ ಪೂರ್ಣಗೊಂಡಿಲ್ಲ. ಎಲ್ಲೆಂದರಲ್ಲಿ ತೆರೆದ ಮ್ಯಾನ್ ಹೋಲ್‌ಗಳು, ಅಗೆದ ರಸ್ತೆಗಳು, ರಸ್ತೆ ಮೇಲೆ ನಿಲ್ಲುವ ಚರಂಡಿ ನೀರು ಗೋಚರಿಸುತ್ತಲೇ ಇದೆ. ಕಾಮಗಾರಿ ಬೇಗ ಪೂರ್ಣಗೊಳಿಸಿದ್ದಲ್ಲಿ ಜನರಿಗೆ ಅನುಕೂಲವಾಗಲಿದೆ. ತಾಲ್ಲೂಕಿನ ಬಿಜನಳ್ಳಿ ಗ್ರಾಮದ ಹರಳಯ್ಯ ದಂಪತಿ ಚರ್ಮಗಳಿಂದ ತಯಾರಿಸಿ ಬಸವಣ್ಣನಿಗೆ ಅರ್ಪಿಸಿದ ಕ್ಷೇತ್ರ ಬಿಜನಳ್ಳಿ, ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಕ್ಷೇತ್ರ, ಮೋತಕಪಲ್ಲಿ ಬಲಭೀಮ ಸೇನ, ಹಂದರಕಿ ಲೋಕೇಶ್ವರ ದೇವಾಲಯ, ಮೇದಕ ಚನ್ನಕೇಶ್ವರ ದೇವಾಲಯ, ಸೇಡಂ ಜೈನ ಬಸದಿ ಸೇರಿದಂತೆ ಹಲವು ಕ್ಷೇತ್ರಗಳನ್ನು ಜೀರ್ಣೋದ್ಧಾರಗೊಳಿಸಲು ಅನುದಾನ ಘೋಷಿಸಬೇಕು ಎಂಬ ಒತ್ತಾಯ ಸ್ಥಳೀಯರದ್ದಾಗಿದೆ.

ಬಾಲರಾಜ್ ಗುತ್ತೇದಾರ
ಅಶೋಕ ಪಿರಂಗಿ
ರಾಜಕುಮಾರ ಪಾಟೀಲ
ಸೇಡಂ ತಾಲ್ಲೂಕಿನ ಮಳಖೇಡ ಕೋಟೆ ಶಿಥಿಲಗೊಂಡಿರುವುದು –ಪ್ರಜಾವಾಣಿ ಚಿತ್ರ

ಈ ವರ್ಷ ಏತನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಜೊತೆಗೆ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ಸ್ಥಾಪನೆ (ಕೆಜಿಟಿಟಿಸಿ) ಹಾಗೂ ರಾಷ್ಟ್ರಕೂಟರ ಉತ್ಸವ ಮಾಡಬೇಕು ಎಂಬ ಪ್ರಸ್ತಾವ ಇದೆ. ಬೇಡಿಕೆಗಳಿಗೆ ಸ್ಪಂದಿಸುತ್ತೇವೆ

–ಡಾ.ಶರಣಪ್ರಕಾಶ ಪಾಟೀಲ ಸಚಿವ

ಸೇಡಂ–ಕಲಬುರಗಿ ರಸ್ತೆಯಲ್ಲಿ ಅಪಘಾತ ಹೆಚ್ಚುತ್ತಿದ್ದು ಚತುಷ್ಪಥ ರಸ್ತೆಯಾಗಬೇಕು. ಸೇಡಂ ಸಿಮೆಂಟ್ ಕಂಪನಿಗಳ ಹೊಗೆಯಿಂದ ಜನ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಉದ್ಯಾನ ಪರಿಸರ ರಕ್ಷಣೆಗೆ ವಿಶೇಷ ಪ್ಯಾಕೇಜ್ ಕಲಬುರಗಿಯ ಇಎಸ್ಐಸಿ ಆಸ್ಪತ್ರೆ ಶಾಖೆಯನ್ನು ಪ್ರಾರಂಭಿಸಬೇಕು

–ಬಾಲರಾಜ್ ಗುತ್ತೇದಾರ ಜೆಡಿಎಸ್ ಜಿಲ್ಲಾಧ್ಯಕ್ಷ

ಮುಧೋಳ ಹೋಬಳಿ ಪ್ರದೇಶ ದಿನಗಳೆದಂತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ವ್ಯಾಪಾರ ವಹಿವಾಟು ದ್ವಿಗುಣಗೊಂಡಿದೆ. ಮುಧೋಳ ಹೋಬಳಿ ಪ್ರದೇಶಕ್ಕೆ 40ಕ್ಕೂ ಅಧಿಕ ಗ್ರಾಮ ಮತ್ತು ತಾಂಡಾ ಜನರು ಆಗಮಿಸುತ್ತಾರೆ. ಮುಧೋಳ ತಾಲ್ಲೂಕನ್ನಾಗಿ ಘೋಷಿಸಬೇಕು

–ಅಶೋಕ ಪಿರಂಗಿ ಅಧ್ಯಕ್ಷ ಮುಧೋಳ ತಾಲ್ಲೂಕು ಹೋರಾಟ ಸಮಿತಿ

ಗ್ಯಾರಂಟಿ ಮಧ್ಯೆಯೂ ಅನುದಾನ!

ಗ್ಯಾರಂಟಿಗಳ ಯೋಜನೆಗಳ ಮಧ್ಯೆಯೂ ಸೇಡಂ ತಾಲ್ಲೂಕಿಗೆ ಹಲವು ನೂತನ ಯೋಜನೆ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿ ಕಾಮಗಾರಿಗಳು ಅಭಿವೃದ್ಧಿಯಲ್ಲಿವೆ. ಸೇಡಂ ಪಟ್ಟಣಕ್ಕೆ ₹ 10 ಕೋಟಿ ಪ್ಯಾರಾಮೆಡಿಕಲ್ ಕಾಲೇಜು ₹ 10 ಕೋಟಿಯ ನರ್ಸಿಂಗ್ ಕಾಲೇಜು ₹ 6 ಕೋಟಿಯ ಈಜುಕೊಳ ₹ 18 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣದಿಂದ ಕೋಡ್ಲಾ ಕ್ರಾಸ್‌ವರೆಗೆ ಚತುಷ್ಪಥ ರಸ್ತೆ 100 ರಿಂದ 150 ಹಾಸಿಗೆ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೆ ಮಳಖೇಡ ಕೋಟೆ ಜೀರ್ಣೋದ್ಧಾರಕ್ಕೆ ₹ 30 ಕೋಟಿ ₹ 73 ಕೋಟಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಕೇಂದ್ರ ₹ 320 ಕೋಟಿ ಕಾಗಿಣಾ ಏತನೀರಾವರಿ ಸೇಡಂ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ.

ಕಲಬುರಗಿ–ರಿಬ್ಬನಪಲ್ಲಿ ಚತುಷ್ಪಥ ರಸ್ತೆ ನಿರ್ಮಿಸಿ

ವಾಗ್ಧರಿ–ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ–10 ಚತುಷ್ಪಥ ರಸ್ತೆಯನ್ನಾಗಿ ಮಾಡಬೇಕು ಎಂಬ ಜನರ ಬೇಡಿಕೆಯನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇಡಂಗೆ ಮುಖ್ಯಮಂತ್ರಿ ಆಗಮಿಸಿದ್ದಾಗ ಗಮನಕ್ಕೆ ತಂದಿದ್ದರು. ಜೊತೆಗೆ ಸೇಡಂ–ಕಲಬುರಗಿ ರಸ್ತೆಯ ದಾನೇಶ್ವರಿ ದೇವಾಲಯದಿಂದ ಸೇಡಂ–ರಿಬ್ಬನಪಲ್ಲಿ ರಸ್ತೆಯ ಕುರಕುಂಟಾ ಕ್ರಾಸ್ ನೇರವಾಗಿ ಬೈಪಾಸ್ ರಸ್ತೆ ನಿರ್ಮಾಣವಾಗಬೇಕು ಎಂಬ ಬೇಡಿಕೆಯಿದ್ದು ಇದರ ಕುರಿತು ಸಚಿವ ಸತೀಶ ಜಾರಕಿಹೊಳಿ ಜೊತೆಗೆ ಚರ್ಚಿಸಲಾಗಿದೆ ಎನ್ನಲಾಗಿದೆ.

‘ಕಾಗಿಣಾ ಯೋಜನೆ ಸಂಪೂರ್ಣ ಜಾರಿಗೊಳ್ಳಲಿ‌’

‘ಕಾಗಿಣಾ ಏತ‌ ನೀರಾವರಿ ಯೋಜನೆಯ 40 ಹಳ್ಳಿಗಳ 10 ಬ್ಯಾರೇಜ್‌ಗಳ 40 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಈ ಯೋಜನೆ ಈಗ ಕೇವಲ ನಾಲ್ಕು ಬ್ಯಾರೇಜ್ ಮೂಲಕ ಪ್ರಾರಂಭಿಸಲಾಗುತ್ತಿದೆ. ನಾನು ₹ 650 ಕೋಟಿ 10 ಬ್ಯಾರೇಜ್‌ಗಳಂತೆ 40 ಹಳ್ಳಿಗಳಿಗೆ ಅನುಕೂಲವಾಗುತ್ತಿತ್ತು. ಅದನ್ನೇ ಯಥಾವತ್ ಜಾರಿಗೊಳಿಸುವ ಬದಲು ಮರು ಟೆಂಡರ್ ಮಾಡಿ ನೀರಾವರಿ ವ್ಯಾಪ್ತಿಯನ್ನು ಕುಗ್ಗಿಸಲಾಗಿದೆ.  ₹ 500 ಕೋಟಿ ವೆಚ್ಚದ ಸನ್ನತಿಯಿಂದ ಸೇಡಂ ತಾಲ್ಲೂಕಿನ ಆಡಕಿ ಮುಧೋಳ ಕೋಡ್ಲಾ ಕೋಲ್ಕುಂದಾ ಕಡೆಗಳಲ್ಲಿ ಕೆರೆಗೆ ನೀರು‌ ತುಂಬಿಸುವ ಯೋಜನೆಯನ್ನು ಈ ವರ್ಷದ ಬಜೆಟ್‌ನಲ್ಲಿ ಸರ್ಕಾರ ಘೋಷಿಸಲಿ. ಸೇಡಂ ನಗರಕ್ಕೆ ಆರ್‌ಟಿಒ ಕೇಂದ್ರ ಮಂಜೂರಾಗಲಿ’ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.