ಕಲಬುರಗಿ: ‘ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳು ಕಣ್ಣುಮುಚ್ಚುತ್ತಿವೆ, ನಿದ್ರೆಗೆ ಜಾರುತ್ತಿವೆ. ನಾವೆಲ್ಲ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸುತ್ತಿರುವುದೇ ಇದಕ್ಕೆಲ್ಲ ಕಾರಣ’ ಎಂದು ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಗುಂಡಪ್ಪ ವೈ.ಗೊಟಕರ ಅವರ ‘ಅಕ್ಷರದ ಬೆಳದಿಂಗಳು’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘1981ರ ಜುಲೈ ತಿಂಗಳು. ಪಟ್ಟಭದ್ರ ಹಿತಾಸಕ್ತಿಗಳು ಸೇರಿ ಕನ್ನಡ ನಾಡಿನಲ್ಲಿ ಸರ್ಕಾರದಿಂದ ಸಂಸ್ಕೃತಕ್ಕೆ ಮಣೆಹಾಕಿಸುವಲ್ಲಿ ಯಶಸ್ವಿಯಾದವು. ಆಗ ಚಂದ್ರಶೇಖರ ಪಾಟೀಲರು (ಚಂಪಾ) ಕಸಾಪ ಅಧ್ಯಕ್ಷರಾಗಿದ್ದರು. ಸರ್ಕಾರದ ನಿರ್ಧಾರದಿಂದ ನೊಂದು ಚಂಪಾ ತಮ್ಮ ಗುರು ವಿ.ಕೃ.ಗೋಕಾಕರ ಬಳಿ ಓಡಿದರು. ಅವರು ಚಳವಳಿ ರೂಪಿಸೋಣ ಎಂದರು. ವಿ.ಕೃ.ಗೋಕಾಕರೇ ನೇತೃತ್ವ ವಹಿಸಿದರು. ಡಾ.ರಾಜ್‌ಕುಮಾರ್ ಮುಂಚೂಣಿಯಲ್ಲಿ ನಿಂತರು. ಜನರೇ ಬೀದಿಗಳಿದು ಹೋರಾಡಿ ಕನ್ನಡವನ್ನು ಉಳಿಸಿಕೊಂಡರು’ ಎಂದು ಸ್ಮರಿಸಿದರು.
‘ಸ್ವಾತಂತ್ರ್ಯದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯ ಫಲವಾಗಿ ಕನ್ನಡಿಗರೆಲ್ಲ ಒಗ್ಗೂಡಿದ್ದೇವೆ. ನಮ್ಮ ನಾಡು ಕನ್ನಡ, ನುಡಿಯೂ ಕನ್ನಡ. ನಮ್ಮ ಇರುವಿಕೆ ಕನ್ನಡ, ಸಭ್ಯತೆಯೂ ಕನ್ನಡ. ನಾವೆಲ್ಲ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಹಚ್ಚಿದ್ದರೆ, ಕನ್ನಡ ಶಾಲೆಗಳ ಸ್ಥಿತಿ ಹೀಗೆ ಇರುತ್ತಿರಲಿಲ್ಲ. ಕನ್ನಡ ತನ್ನ ಅಸ್ತಿತ್ವ ಉಳಿಸಿಕೊಂಡು, ಜಾಯಮಾನ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ನಾವೆಲ್ಲ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಬೇಕು’ ಎಂದರು.
‘ಇನ್ನೊಂದು ಭಾಷೆ ಕಲಿಸಬಾರದು ಎಂದಲ್ಲ. ಕನ್ನಡದ ಮೂಲಕವೇ ಭಾಷೆಯಾಗಿ ಇಂಗ್ಲಿಷ್, ಹಿಂದಿ, ಉರ್ದುವನ್ನೂ ಕಲಿಸಬಹುದು’ ಎಂದರು.
ಕೋಡ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ರಾಜಶೇಖರ ಮಾಂಗ್ ಕೃತಿ ಪರಿಚಯಿಸಿದರು. ‘ಈ ಕೃತಿಯಲ್ಲಿ 69 ಕವಿತೆಗಳಿವೆ. ಶಾಲೆ, ಶಿಕ್ಷಣ, ಬುದ್ಧ, ಬಸವಣ್ಣ, ಶಿವಯೋಗಿ ಸಿದ್ಧರಾಮ, ಪ್ರಕೃತಿ, ಜ್ಞಾನ, ಅಜ್ಞಾನ, ಸ್ವಾಭಿಮಾನ, ಭೋವಿ ಜನಾಂಗ ಒಡಲಾಳವನ್ನು ಕವನಗಳ ಸಾಲುಗಳಲ್ಲಿ ಹಿಡಿದಿಟ್ಟಿದ್ದಾರೆ’ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃತಿಕಾರ ಗುಂಡಪ್ಪ ವೈ.ಗೊಟಕರ, ವಿದ್ಯಾಸಾಗರ ದೇಶಮುಖ, ಶರಣಪ್ಪ ಗುಂಡಗುರ್ತಿ, ಧರ್ಮಣ್ಣ ಎಚ್.ಧನ್ನಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಬಾಲೆ ವೈಶಾಕಿ ಶಾಬಾದಕರ ಭರತನಾಟ್ಯ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.