ADVERTISEMENT

ಯುದ್ಧ ಬೇಡ ಬುದ್ಧ ಬೇಕು: ಪ್ರೊ. ಶಿವಾಜಿ ಜೋಯಿಸ್‌

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 3:56 IST
Last Updated 14 ಆಗಸ್ಟ್ 2023, 3:56 IST
ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಬುದ್ಧನ ಚರಿತ್ರೆ, ಕೃತಿಗಳ ಅನುಸಂಧಾನ ಕಾರ್ಯಾಗಾರದಲ್ಲಿ ಪ್ರೊ.ಶಿವಾಜಿ ಜೋಯಿಸ್‌ ಅವರಿಗೆ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಪ್ರೊ.ಎಚ್‌.ಟಿ.ಪೋತೆ, ಡೀನ್‌ ರಮೇಶ ರಾಠೋಡ ಸೇರಿ ಇತರರಿದ್ದರು
ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಬುದ್ಧನ ಚರಿತ್ರೆ, ಕೃತಿಗಳ ಅನುಸಂಧಾನ ಕಾರ್ಯಾಗಾರದಲ್ಲಿ ಪ್ರೊ.ಶಿವಾಜಿ ಜೋಯಿಸ್‌ ಅವರಿಗೆ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಪ್ರೊ.ಎಚ್‌.ಟಿ.ಪೋತೆ, ಡೀನ್‌ ರಮೇಶ ರಾಠೋಡ ಸೇರಿ ಇತರರಿದ್ದರು   

ಕಲಬುರಗಿ: ‘ಯುದ್ಧ ಮಾನವೀಯತೆಯನ್ನು ನಾಶ ಮಾಡುತ್ತದೆ. ಆದ್ದರಿಂದ ಬುದ್ಧನಿಗೆ ಯುದ್ಧ ಭೂಮಿಯ ಭಯವಿತ್ತು. ಹಾಗಾಗಿ ಇಂದು ನಮಗೆ ಯುದ್ಧ ಬೇಡ ಬುದ್ಧ ಬೇಕು’ ಎಂದು ವಿಶ್ರಾಂತ ಪ್ರಾಧ್ಯಾಪಕರು, ಬೌದ್ಧ ಸಾಹಿತ್ಯ ವಿದ್ವಾಂಸ ಪ್ರೊ. ಶಿವಾಜಿ ಜೋಯಿಸ್‌ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಭಾನುವಾರ ನಡೆದ ಗೌತಮ ಬುದ್ಧನ ಜೀವನ ಚರಿತ್ರೆ, ಕೃತಿಗಳ ಅನುಸಂಧಾನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಕನ್ನಡದಲ್ಲಿ ಬುದ್ಧನ ಜೀವನ ಕುರಿತಾಗಿ 80 ಕೃತಿಗಳು ಬಂದಿವೆ. ಬೌದ್ಧ ಸಾಹಿತ್ಯದ ಅಧ್ಯಯನ ದಶಕದಿಂದ ಈಚೆಗೆ ವಿಸ್ತಾರಗೊಳ್ಳುತ್ತಿದೆ. ಬುದ್ಧನ ಬಗ್ಗೆ ಪಾಶ್ಚಾತ್ಯರೂ ಅಧ್ಯಯನ ನಡೆಸಿದ್ದಾರೆ. ಹಾಗಾಗಿ ಕನ್ನಡದಲ್ಲಿ ಬೌದ್ಧ ಸಾಹಿತ್ಯ ರೂಪಿಸುವ ಕೆಲಸವಾಗಬೇಕು’ ಎಂದು ಅವರು ಹೇಳಿದರು.

ಕಾರ್ಯಾಗಾರದಲ್ಲಿ ಆಶಯ ನುಡಿಗಳನ್ನಾಡಿದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್‌.ಟಿ.ಪೋತೆ, ‘ಗುಲ್ಬರ್ಗಾ ವಿವಿಯಲ್ಲಿ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆ 2008ರಲ್ಲಿ ಪ್ರಾರಂಭವಾಗಿದೆ. ಏಷ್ಯಾದ ಬೆಳಕು ಎಂದು ಕರೆಯುತ್ತಿದ್ದ ಬುದ್ಧ ಈಗ ಜಗತ್ತಿನ ಬೆಳಕಾಗಿದ್ದಾನೆ. ಹೃದಯ ಮತ್ತು ಮೆದುಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ವ್ಯಕ್ತಿ ಎಂದರೆ ಬುದ್ಧ. ಜಗತ್ತನ್ನು ಆಳುವುದು ವ್ಯಕ್ತಿಯಲ್ಲ, ವಿಚಾರಗಳು ಹಾಗಾಗಿ ಇಂದು ಬುದ್ಧನ ಬದುಕು ನಮ್ಮದಾಗಬೇಕು’ ಎಂದು ಹೇಳಿದರು.

ADVERTISEMENT

ವಿವಿಯ ಕಲಾನಿಕಾಯ ಡೀನ್‌ ರಮೇಶ ರಾಠೋಡ ಮಾತನಾಡಿ ‘ಪಾಲಿ ಭಾಷೆ ಸಂಸ್ಕೃತಕ್ಕಿಂತ ಹಳೆಯದು. ಭಾಷೆ ಸ್ವಾಭಾವಿಕವಾಗಿ ಹುಟ್ಟಲ್ಲ, ಅದು ತಯಾರಾಗುತ್ತದೆ’ ಎಂದರು.

ಪಾಲಿ ಇನ್‌ಸ್ಟಿಟ್ಯೂಟ್‌ ಗೌರವ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿ, ‘ಬುದ್ಧನ ಕುರಿತಾದ ಸಮಗ್ರ ಅಧ್ಯಯನದ ಅಗತ್ಯವಿದೆ. ಮಹಾಯಾನ ಹಾಗೂ ಹೀನಯಾನ ಎರಡೂ ಶಾಖೆಗಳ ಅಧ್ಯಯನದ ಅಗತ್ಯವಿದೆ. ಇದಕ್ಕೆ ವಿಸ್ತಾರವಾದ ಓದು ಬೇಕು. ಸಂಸ್ಕೃತ, ಪ್ರಾಕೃತ ಮತ್ತು ಪಾಲಿ ಸಹೋದರ ಭಾಷೆಗಳು’ ಎಂದು ತಿಳಿಸಿದರು.

ವೇದಿಕೆಯಲ್ಲಿ ಬುದ್ಧ ವಿಹಾರ ಟ್ರಸ್ಟ್‌ ಅಧಿಕಾರಿ ರಮೇಶ ಬೇಗಾರ ಇದ್ದರು. ಪ್ರೊ. ಎಂ.ಬಿ.ಕಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಆಂಜನಪ್ಪ, ಗವಿಸಿದ್ದಪ್ಪ ಪಾಟೀಲ, ಉಪನ್ಯಾಸಕರು. ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.

ಬುದ್ಧ ಮನೆಬಿಡಲು ಕಾರಣ ನದಿ ವಿವಾದ

‘ಬುದ್ಧ ವೈರಾಗ್ಯ ತಾಳಲು ಕಾರಣ ರೋಗಿ ವೃದ್ಧ ಮತ್ತು ಶವದ ಚಿತ್ರಣ ಎಂಬು ಬಹುತೇಕರು ಹೇಳುತ್ತಾರೆ. ಶವವನ್ನು ನೋಡಿದರೆ ಆ ಕ್ಷಣಕ್ಕೆ ಯಾರಿಗಾದರೂ ವೈರಾಗ್ಯ ಭಾವನೆ ಬರುವುದು ಸಹಜ. ಆದರೆ ಬುದ್ಧ ಮನೆ ಬಿಡಲು ಕಾರಣ ರೋಹಿಣಿ ನದಿ ವಿವಾದ. ಯುದ್ಧ ಬೇಡವೆಂದು ಬುದ್ಧ ಮನೆ ತೊರೆದ’ ಎಂದು ಪ್ರೊ. ಶಿವಾಜಿ ಜೋಯಿಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.