ಕಲಬುರಗಿ: ತಾಲ್ಲೂಕಿನ ಅವರಾದ (ಬಿ) ಗ್ರಾಮದ ಮುಖ್ಯ ರಸ್ತೆಯ ಬದಿಯಲ್ಲಿನ ಕೊಳವೆ ಬಾವಿ ಸಮೀಪವೇ ಚರಂಡಿ ನೀರು ಹರಿಯುತ್ತಿದೆ. ಇದೇ ನೀರು ಬಳಸಿದರೆ ಆರೋಗ್ಯ ಸಮಸ್ಯೆಯಾಗುವ ಆತಂಕ ಸ್ಥಳೀಯರಲ್ಲಿ ಉಂಟಾಗಿದೆ.
ರಸ್ತೆ ಬದಿಯ ಕೊಳವೆ ಬಾವಿಯಿಂದ ವಾರ್ಡ್ ನಂಬರ್ 2 ಮತ್ತು 3ರಲ್ಲಿನ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ಸರಬರಾಜು ಆಗುತ್ತಿದೆ. ಮಳೆ, ಚರಂಡಿಯ ಕೊಳಚೆ ನೀರು ಅದರ ಪಕ್ಕದಲ್ಲಿ ಹರಿದು ಹೋಗುತ್ತಿದೆ. ಸುತ್ತಲೂ ಗಿಡಗಂಟಿಗಳು ಸಹ ಬೆಳೆದಿವೆ. ಹರಿದ ಗೋಣಿ ಚೀಲ, ಪ್ಲಾಸ್ಟಿಕ್ ತ್ಯಾಜ್ಯ ಸಹ ಕೊಳವೆ ಬಾವಿ ಬಳಿ ಎಸೆಯಲಾಗಿದೆ. ಸ್ವಚ್ಛತೆ ಎಂಬುದು ಸಂಪೂರ್ಣವಾಗಿ ಮರೀಚಿಕೆಯಾಗಿದೆ ಎನ್ನುತ್ತಾರೆ ಸ್ಥಳೀಯರು.
‘ಕೊಳವೆ ಬಾವಿಯ ಬದಿಯಲ್ಲಿ ಮರಂ ಹಾಕಿ ಕೊಳಚೆ ನೀರು ಬೇರೆ ಕಡೆ ಹರಿದುಹೋಗುವ ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ತಿಂಗಳಿಂದ ಮನವಿ ಮಾಡಿದ್ದೇವೆ. ಇದುವರೆಗೂ ಸ್ಪಂದಿಸಿಲ್ಲ. ಇವತ್ತು ಮಾಡುತ್ತೇವೆ, ನಾಳೆ ಮಾಡುತ್ತೇವೆ ಎಂದು ದಿನಗಳನ್ನು ದೂಡುತ್ತಿದ್ದಾರೆ. ಮಳೆಗಾಲದಲ್ಲಿ ಕಲುಷಿತ ನೀರು ಬಳಸಿ ರೋಗಕ್ಕೆ ತುತ್ತಾಗುವ ಆತಂಕ ಇದೆ’ ಎನ್ನುತ್ತಾರೆ ಗ್ರಾಮದ ನಿವಾಸಿ ಷಣ್ಮುಖ ಹೊಸಮನಿ.
‘ಸ್ಥಗಿತವಾಗಿರುವ ಕುಡಿಯುವ ನೀರು ಶುದ್ಧೀಕರಣ ಘಟಕವನ್ನು ದುರಸ್ತಿ ಮಾಡುವಂತೆ ಕೇಳಿಕೊಂಡರೂ ಕಿವಿಗೊಡುತ್ತಿಲ್ಲ. ಇದರಿಂದ ಕಲುಷಿತ ನೀರು ಕುಡಿಯುವಂತೆ ಆಗಿದೆ. ಗ್ರಾಮದ ಸಮಸ್ಯೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ದೂರಿದರು.
‘ಗ್ರಾಮದ ಮುಖ್ಯ ರಸ್ತೆ, ಒಳ ರಸ್ತೆಗಳ ಬದಿಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಎಲ್ಲೆಂದರೆಲ್ಲಿ ಕಸವೂ ಬಿದ್ದಿದೆ. ವಿಷಜಂತುಗಳ ತಾಣವಾಗಿದ್ದು, ಪಂಚಾಯಿತಿಯವರು ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಕೊಳಚೆ ನೀರು ಎಲ್ಲೆಂದರಲ್ಲಿ ನಿಂತು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗ್ರಾಮದಲ್ಲಿ ಸ್ವಚ್ಛ ವಾತಾವರಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ಗ್ರಾಮಸ್ಥರು.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಕರೆ ಮಾಡಿದರೂ ಪ್ರತಿಕ್ರಿಯೆಗೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.