
ಶಹಾಬಾದ್: ‘ಅಮೆರಿಕ ತೈಲ ಮಾರುಕಟ್ಟೆಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಹುನ್ನಾರ ನಡೆಸುತ್ತಿದೆ. ತೈಲನಿಕ್ಷೇಪ ಹೊಂದಿರುವ ರಾಷ್ಟ್ರಗಳನ್ನು ಕುತಂತ್ರದಿಂದ ತನ್ನ ಅಧೀದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತಿದೆ. ಈ ಕುತಂತ್ರವನ್ನು ಎಲ್ಲರೂ ಧಿಕ್ಕರಿಸಬೇಕು’ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಎಂ.ಶಶಿಧರ ಆಕ್ರೋಶ ವ್ಯಕ್ತಪಡಿಸಿದರು.
ಶಹಾಬಾದ್ ನಗರದ ಬಸವೇಶ್ವರ ವೃತ್ತದಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ವತಿಯಿಂದ ಅಮೆರಿಕ – ಇಸ್ರೇಲ್ ಸೇರಿ ಇರಾನ್ ಮೇಲೆ ಮಾಡುತ್ತಿರುವ ದಾಳಿಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ತೈಲನಿಕ್ಷೇಪ ಹೊಂದಿರುವ ರಾಷ್ಟ್ರಗಳನ್ನು ಕುತಂತ್ರದಿಂದ ತನ್ನ ಅಧೀನದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತಿದೆ. ಅದು ಸಾಧ್ಯವಾಗದಿದ್ದರೆ ಸಾರ್ವಭೌಮ ರಾಷ್ಟ್ರಗಳ ಮೇಲೆ ದಾಳಿ ಮಾಡಿ ಅಮೆರಿಕ ಮತ್ತು ಇಸ್ರೇಲ್ ಸಾಮ್ರಾಜ್ಯಶಾಹಿಗಳು ಪ್ರಪಂಚವನ್ನು ಸ್ಮಶಾನ ಮಾಡುತ್ತಿರುವುದು ಪ್ರತಿಯೊಬ್ಬರು ಧಿಕ್ಕರಿಸಬೇಕು’ ಎಂದು ಕರೆ ನೀಡಿದರು.
‘ವಿಶ್ವದ ಸಾರ್ವಭೌಮ ರಾಷ್ಟ್ರಗಳ ಮೇಲೆ ಯಾವುದೇ ರಾಷ್ಟ್ರವು ದಾಳಿ ಮಾಡುವುದು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದನ್ನು ಅಮೆರಿಕ, ರಷ್ಯಾ ಮತ್ತು ಇಸ್ರೇಲ್ ಸಾಮ್ರಾಜ್ಯಶಾಹಿ ದೇಶಗಳು ನಿರಂತರವಾಗಿ ಉಲ್ಲಂಘನೆ ಮಾಡುತ್ತಿವೆ’ ಎಂದು ಅಸಮಾಧಾನ ಹೊರಹಾಕಿದರು.
‘ವಿಶ್ವಸಂಸ್ಥೆಯು ಇವರ ಅಟ್ಟಹಾಸವನ್ನು ಮಟ್ಟಹಾಕಲು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅದು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಉಳಿದ ರಾಷ್ಟ್ರಗಳು ಮೌನವಾಗಿರುವುದರಿಂದ ಅಮೆರಿಕ ಮತ್ತು ಇಸ್ರೇಲ್ ತನ್ನ ಭಯೋತ್ಪಾದನೆಯನ್ನು ಮುಂದುವರೆಸುತ್ತಿದೆ’ ಎಂದು ಹೇಳಿದರು.
‘ಶಾಲೆ ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದರ ಮೂಲಕ ಮಕ್ಕಳ ಹಾಗೂ ಜನಸಾಮಾನ್ಯರ ಮಾರಣಹೋಮ ನಡೆಸುತ್ತಿರುವುದು ರಾಕ್ಷಸಿಕೃತ್ಯವನ್ನು ನಮ್ಮ ಎಸ್‌ಯುಸಿಐ (ಸಿ)ಯು ಪ್ರಬಲವಾಗಿ ವಿರೋಧಿಸುತ್ತದೆ. ಈ ಕೂಡಲೇ ನರಹಂತಕ ಅಮೆರಿಕ ಇಸ್ರೇಲ್ ಸಾಮ್ರಾಜ್ಯಶಾಹಿಗಳು ಇರಾನ್ ಮೇಲೆ ಮಾಡುತ್ತಿರುವ ದಾಳಿಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
ಎಸ್‌ಯುಸಿಐ (ಸಿ) ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಗಣಪತರಾವ ಕೆ.ಮಾನೆ, ರಾಮಣ್ಣ ಎಸ್.ಇಬ್ರಾಹಿಂಪುರ್, ರಾಘವೇಂದ್ರ, ಎಂ.ಜಿ ಮಾತನಾಡಿದರು.
ಜಗನ್ನಾಥ.ಎಸ್.ಎಚ್., ಗುಂಡಮ್ಮ ಮಡಿವಾಳ, ರಾಜೇಂದ್ರ ಆತ್ನೂರ, ಭಾಗಣ್ಣ ಬುಕ್ಕ, ನೀಲಕಂಠ ಹುಲಿ, ರಮೇಶ ದೇವಕರ್, ಮಹಾದೇವಿ ಮಾನೆ, ಮಹಾದೇವಿ ಆತ್ನೂರ್, ಕಿರಣ ಮಾನೆ, ರಘು ಪವಾರ, ಆನಂದ, ಸಿದ್ದು ಚೌಧರಿ, ತಿಮ್ಮಣ್ಣ ಮಾನೆ, ರಾಧಿಕ ಚೌಧರಿ, ನೂರಾರು ಜನರು, ವಿದ್ಯಾರ್ಥಿ-ಯುವಜನರು ಹಾಗೂ ಮಹಿಳೆಯರು ಭಾಗವಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.