ADVERTISEMENT

ಶರಣಬಸವೇಶ್ವರ ವಿಜ್ಞಾನ ಕಾಲೇಜು ಚಾಂಪಿಯನ್‌

ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಮಹಾವಿದ್ಯಾಲಯ ಯುವಜನೋತ್ಸವಕ್ಕೆ ಅದ್ಧೂರಿ ತೆರೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 3:10 IST
Last Updated 23 ಡಿಸೆಂಬರ್ 2025, 3:10 IST
ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವದಲ್ಲಿ ಚಾಂಪಿಯನ್ ಪಟ್ಟ ಪಡೆದ ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅವರಿಂದ ಟ್ರೋಫಿ ಸ್ವೀಕರಿಸಿ ಸಂಭ್ರಮಿಸಿದರು
ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವದಲ್ಲಿ ಚಾಂಪಿಯನ್ ಪಟ್ಟ ಪಡೆದ ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅವರಿಂದ ಟ್ರೋಫಿ ಸ್ವೀಕರಿಸಿ ಸಂಭ್ರಮಿಸಿದರು   

ಕಲಬುರಗಿ: ಮೂರು ದಿನಗಳ ಗುಲಬರ್ಗಾ ವಿ.ವಿ. ವ್ಯಾಪ್ತಿಯ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವದ ಬಹುತೇಕ ಸ್ಪರ್ಧೆಗಳಲ್ಲಿ ಮುನ್ನಡೆ ಸಾಧಿಸಿದ ನಗರದ ಶರಣಬಸವೇಶ್ವರ ವಿಜ್ಞಾನ ಕಾಲೇಜು ಅಂತಿಮವಾಗಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡು ಗೆಲುವಿನ ನಗೆ ಬೀರಿತು.

ಗುಲಬರ್ಗಾ ವಿ.ವಿ.ಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕಲಬುರಗಿ ಪ್ರಾದೇಶಿಕ ಆಯುಕ್ತೆ, ಗುವಿವಿ ಹಳೆಯ ವಿದ್ಯಾರ್ಥಿನಿಯೂ ಆದ ಜಹೀರಾ ನಸೀಮ್ ಅವರು ಸಮಾರೋಪ ಭಾಷಣ ಮಾಡಿ ವಿಜೇತರಿಗೆ ಪದಕ ವಿತರಣೆ ಮಾಡಿದರು.

ನಗರದ ರೇಷ್ಮಿ ಎಜುಕೇಶನ್ ಅಂಡ್ ಚಾರಿಟಬಲ್‌ ಟ್ರಸ್ಟ್‌ ಅಧೀನದ ಪದವಿ ಕಾಲೇಜು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ADVERTISEMENT

ಗುಲಬರ್ಗಾ ವಿ.ವಿ. ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಅನುದಾನಿತ ಹಾಗೂ ಖಾಸಗಿ ಸೇರಿದಂತೆ 25 ಪದವಿ ಕಾಲೇಜುಗಳು ಮೂರು ದಿನಗಳ ಯುವಜನೋತ್ಸವದಲ್ಲಿ ಭಾಗವಹಿಸಿದ್ದವು.

530 ವಿದ್ಯಾರ್ಥಿಗಳು ಸಮೂಹ ನೃತ್ಯ, ಜಾನಪದ ನೃತ್ಯ, ಗಾಯನ, ಏಕಾಂಕ ನಾಟಕ, ಮೈಮ್, ಕ್ಲೇ ಮಾಡೆಲಿಂಗ್, ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ಸಂಗೀತ, ವಿವಿಧ ರಾಜ್ಯಗಳ ನೃತ್ಯ ಪ್ರಕಾರ, ಕಾರ್ಟೂನಿಂಗ್, ಕೊಲಾಜ್, ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಪ್ರಹಸನ, ಮೂಕಾಭಿನಯ, ಸೃಜನಾತ್ಮಕ ನೃತ್ಯ ಸಂಯೋಜನೆ, ರಂಗೋಲಿ, ಜಾನಪದ ಸಂಗೀತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದರು.

ಪ್ರಶಸ್ತಿ ಪ್ರದಾನಕ್ಕೂ ಮುನ್ನ ಅತ್ಯುತ್ತಮ ಪ್ರದರ್ಶನ ತೋರಿದ ರೈತರ ಬದುಕು ಬಿಂಬಿಸುವ ನೃತ್ಯ, ಪಂಜಾಬಿ ಶೈಲಿಯ ನೃತ್ಯ, ವಿದ್ಯಾರ್ಥಿನಿ ದೀಪಿಕಾರ ಮಿಮಿಕ್ರಿ ಗಮನ ಸೆಳೆದವು.

ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ‘ಗುಲಬರ್ಗಾ ವಿ.ವಿ.ಯ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಯನ ಮಾಡಿದ್ದೇನೆ. ಮತ್ತೊಮ್ಮೆ ಈ ವಿಶ್ವವಿದ್ಯಾಲಯಕ್ಕೆ ಬಂದಿದ್ದರಿಂದ ಹಳೆಯ ದಿನಗಳು ನೆನಪಾಗುತ್ತಿವೆ. ಸ್ಪರ್ಧೆ ಎಂದ ಮೇಲೆ ಸೋಲು ಗೆಲುವು ಸಹಜ. ಸೋಲಿಗೆ ಕಾರಣ ಏನು ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಬೇಕು. ಸೋಲು ಗೆಲುವಿನಾಚೆ ಇಲ್ಲಿ ಒಂದು ತಂಡವನ್ನು ಹೇಗೆ ಕಟ್ಟಬೇಕು ಎಂಬುದನ್ನು ಕಲಿತುಕೊಂಡಿದ್ದೀರಿ. ಆ ಅನುಭವಗಳನ್ನೇ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗುಲಬರ್ಗಾ ವಿ.ವಿ. ಕುಲಸಚಿವ ಪ್ರೊ.ರಮೇಶ ಲಂಡನಕರ್, ‘ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಂದ ಉದ್ಘಾಟನೆಗೊಂಡ ಯುವಜನೋತ್ಸವವು ಮೂರು ದಿನಗಳ ಕಾಲ ಅತ್ಯುತ್ತಮವಾಗಿ ನಡೆದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 500ಕ್ಕೂ ಅಧಿಕ ವಿದ್ಯಾರ್ಥಿಗಳು, 36 ತಂಡಗಳು ಭಾಗವಹಿಸಿದ್ದ ಈ ಯುವಜನೋತ್ಸವವನ್ನು ನಿಭಾಯಿಸಲು ಕುಲಪತಿಗಳ ನೇತೃತ್ವದಲ್ಲಿ ರಚಿಸಿದ್ದ 137 ಸದಸ್ಯರನ್ನೊಳಗೊಂಡ 19 ಉಪಸಮಿತಿಗಳು ಅಹರ್ನಿಶಿ ದುಡಿದಿದ್ದರಿಂದ ಯಶಸ್ಸು ಸಿಕ್ಕಿದೆ’ ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಜಿ.ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ, ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆನಂದ ಮೇತ್ರಿ ವೇದಿಕೆಯಲ್ಲಿದ್ದರು.

ಗುಲಬರ್ಗಾ ವಿಶ್ವವಿದ್ಯಾಲಯದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಬಂಜಾರ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು
ಪದವಿ ಕಾಲೇಜುಗಳಿಗೆ ರಜೆ ಇದ್ದರೂ ಹೆಚ್ಚಿನ ವಿದ್ಯಾರ್ಥಿಗಳ ತಂಡಗಳು ಈ ಬಾರಿ ಭಾಗವಹಿಸಿದ್ದವು. ದಕ್ಷಿಣ ವಲಯಕ್ಕೆ ಹೋಗುವ ವಿ.ವಿ.ಗಳೆಲ್ಲ ಇದೇ ಅವಧಿಯಲ್ಲಿ ಯುವಜನೋತ್ಸವ ನಡೆಸಿವೆ. ಯುವಜನೋತ್ಸವವು ಯಶಸ್ವಿಯಾಗಿದೆ
ಪ್ರೊ.ಶಶಿಕಾಂತ ಉಡಿಕೇರಿ ಗುವಿವಿ ಕುಲಪತಿ

- ಇಂಡಿಯಾ ಬುಕ್ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲು

ಗುಲಬರ್ಗಾ ವಿ.ವಿ.ಯು ಮೂರು ದಿನಗಳ ಕಾಲ ಅಚ್ಚುಕಟ್ಟಾಗಿ ಆಯೋಜಿಸಿದ್ದು ಹಾಗೂ ತಂಡಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡಿರುವುದು ಇಂಡಿಯಾ ಬುಕ್ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ವಿವಿಧ ಸ್ಪರ್ಧೆಗಳನ್ನು ವೀಕ್ಷಿಸಿದ ಇಂಡಿಯಾ ಬುಕ್ ಆಫ್‌ ರೆಕಾರ್ಡ್ಸ್‌ನ ಅಧಿಕಾರಿಗಳಾದ ಪಾವನಿ ಹಾಗೂ ಮೀನಾಕ್ಷಿ ಪದ್ಮನಾಭನ್ ಅವರು ‘ಯೂತ್ ಕಲ್ಚರಲ್ ಎಕ್ಸಲೆನ್ಸ್’ ವಿಭಾಗದಲ್ಲಿ ಈ ಯುವಜನೋತ್ಸವವನ್ನು ದಾಖಲಿಸಿಕೊಳ್ಳಲು ಶಿಫಾರಸು ಮಾಡಿದ್ದರು’ ಎಂದು ಗುವಿವಿ ಗ್ರಂಥಾಲಯ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಸುರೇಶ ಜಂಗೆ ಕಾರ್ಯಕ್ರಮದಲ್ಲಿ ತಿಳಿಸಿದರು.

- ವಿಜೇತ ಕಾಲೇಜುಗಳ ವಿವರ ಸಾಂಸ್ಕೃತಿಕ ಮೆರವಣಿಗೆ: ಗುಲಬರ್ಗಾ ವಿಶ್ವವಿದ್ಯಾಲಯ ತಂಡ (ಪ್ರಧಾನ ಕ್ಯಾಂಪಸ್) (ಪ್ರಥಮ); ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ದ್ವಿತೀಯ) ಸಂಗೀತ ವಿಭಾಗ: ರೇಷ್ಮಿ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ (ಪ್ರಥಮ); ಶರಣಬಸವೇಶ್ವರ ವಿಜ್ಞಾನ ಕಾಲೇಜು (ದ್ವಿತೀಯ) ನೃತ್ಯ ವಿಭಾಗ: ಶರಣಬಸವೇಶ್ವರ ವಿಜ್ಞಾನ ಕಾಲೇಜು (ಪ್ರಥಮ); ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ದ್ವಿತೀಯ) ಸಾಹಿತ್ಯಿಕ ವಿಭಾಗ: ಎನ್‌.ವಿ. ಪದವಿ ಕಾಲೇಜು ಕಲಬುರಗಿ (ಪ್ರಥಮ); ರೇಷ್ಮಿ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ (ದ್ವಿತೀಯ) ನಾಟಕ ವಿಭಾಗ: ಶರಣಬಸವೇಶ್ವರ ವಿಜ್ಞಾನ ಕಾಲೇಜು (ಪ್ರಥಮ); ರೇಷ್ಮಿ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ (ದ್ವಿತೀಯ) ಫೈನ್ ಆರ್ಟ್ ವಿಭಾಗ: ಗುಲಬರ್ಗಾ ವಿಶ್ವವಿದ್ಯಾಲಯ ತಂಡ (ಪ್ರಧಾನ ಕ್ಯಾಂಪಸ್) (ಪ್ರಥಮ); ರೇಷ್ಮಿ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ (ದ್ವಿತೀಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.