ADVERTISEMENT

ಜನರ ಗಮನ ಬೇರೆಡೆ ಸೆಳೆಯಲು ಎಸ್‌ಐಟಿ ತನಿಖೆ: ಸುಭಾಷ ಗುತ್ತೇದಾರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:03 IST
Last Updated 19 ಅಕ್ಟೋಬರ್ 2025, 6:03 IST
ಸುಭಾಷ ಗುತ್ತೇದಾರ
ಸುಭಾಷ ಗುತ್ತೇದಾರ   

ಕಲಬುರಗಿ: ‘ಸರ್ಕಾರದ ಬಳಿ ಅಭಿವೃದ್ಧಿಗೆ ದುಡ್ಡಿಲ್ಲ. ಆದ್ದರಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಮತಗಳ್ಳತನದ ಆರೋಪದ ಮೇಲೆ ಎಸ್‌ಐಟಿ ತನಿಖೆ ನಡೆಸಲಾಗುತ್ತಿದೆ’ ಎಂದು ಆಳಂದದ ಬಿಜೆಪಿ ಮುಖಂಡ, ಮಾಜಿ ಶಾಸಕ ಸುಭಾಷ ಗುತ್ತೇದಾರ ಆರೋಪಿಸಿದರು

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನ ಮೇಲೆ 23 ಕೊಲೆಗಳ ಸುಳ್ಳು ಆರೋಪ ಮಾಡಲಾಗಿತ್ತು. ಆದರೆ ಅದ್ಯಾವುದೂ ಸಾಬೀತು ಆಗಲಿಲ್ಲ. ಈಗ ಈ ರೀತಿಯ ಷಡ್ಯಂತ್ರ ಹೆಣೆದಿದ್ದಾರೆ’ ಎಂದರು.

‘ರಾಜಕೀಯ ದ್ವೇಷದಿಂದ ನನ್ನ ಮೇಲೆ ಹಗೆ ಸಾಧಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ನನ್ನ ಮೇಲೆ ಎಸ್‌ಐಟಿ ತನಿಖೆ ಮಾಡಿಸುತ್ತಿದ್ದಾರೆ. ಎಸ್‌ಐಟಿಗೆ ಸಂಪೂರ್ಣ ಸಹಕಾರ ನೀಡಲಾಗಿದೆ. ಮತಗಳ್ಳತನ ಕುರಿತು ನನ್ನನ್ನು ಬಂಧಿಸಿದರೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಹೈದರಾಬಾದ್‌ ವಿಮೋಚನಾ ದಿನದ ಮಹತ್ವದ ಆಚರಣೆಗೆ ಮುಖ್ಯಮಂತ್ರಿಗಳೇ ಬಂದರೂ ಬಿ.ಆರ್.ಪಾಟೀಲ ಬರಲಿಲ್ಲ. ಆ ಮೂಲಕ ಸಿಎಂಗೆ ಗೌರವ ನೀಡಲಿಲ್ಲ’ ಎಂದರು.

‘ಆಳಂದದಲ್ಲಿ ಈಗ ಬಿ.ಆರ್. ಪಾಟೀಲ ಅವರ ಅಳಿಯ ಆರ್‌.ಕೆ. ಪಾಟೀಲರದ್ದೇ ಆಡಳಿತ. ಹೋದ ಸಲ ಆರ್‌.ಕೆ.ಪಾಟೀಲ ಪರಿಚಯದ ವ್ಯಕ್ತಿಯೊಬ್ಬರು ಜಿ.ಪಂ ಚುನಾವಣೆಯಲ್ಲಿ ಸೋತರು. ಆ ಕಾರಣಕ್ಕಾಗಿ ಆ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗೆ ಹಾದಿ ಸುಗಮವಾಗಿಸಲು ಮಹಾಂತಪ್ಪ ಆಲೂರೆ ಎಂಬ ವ್ಯಕ್ತಿಯನ್ನು ಕೊಲೆ ಮಾಡಿಸಿದರು. ನನ್ನ ಗನ್‌ಮ್ಯಾನ್‌ ವಾಪಸು ತಗೊಂಡಿದ್ದಾರೆ. ಈ ಕುರಿತು ಎಡಿಜಿಪಿ ಅವರನ್ನು ಕೇಳಿದರೆ ‘ಸಿದ್ದರಾಮಯ್ಯ ಅವರು ನಿಮಗೆ ಗನ್‌ಮ್ಯಾನ್ ಕೊಡಬೇಡ ಅಂದಿದ್ದಾರೆ’ ಎಂದು ಹೇಳುತ್ತಾರೆ. ಬಿ.ಆರ್. ಪಾಟೀಲ ಮತ್ತು ಆರ್‌.ಕೆ. ಪಾಟೀಲ ಅವರಿಗೆ ನನ್ನನ್ನು ಕೊಲೆ ಮಾಡುವ ಉದ್ದೇಶವಿದೆ’ ಎಂದು ಆರೋಪಿಸಿದರು.

‘ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬೋಗಸ್‌ ಮತದಾನ ನಡೆದಿರುವ ಕುರಿತು ನಾವು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ’ ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ, ಮಲ್ಲಿಕಾರ್ಜುನ ಕಂದಗೂಳೆ, ಲಿಂಗರಾಜ ಬಿರಾದಾರ, ಸಂತೋಷ ಹಾದಿಮನಿ ಮತ್ತಿತರರಿದ್ದರು.

‘ಸಂಸದನಾಗಿದ್ದಾಗ 50 ಐತಿಹಾಸಿಕ ಕಾರ್ಯಗಳು’

ಕಲಬುರಗಿ: ‘ನಾನು ಸಂಸದನಾಗಿದ್ದಾಗ ಐತಿಹಾಸಿಕ ವಂದೇ ಭಾರತ್ ರೈಲು ಸೇರಿದಂತೆ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಅಂದಾಜು 50 ಪ್ರಮುಖ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ’ ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಂಎಲ್‌ಸಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಅವರು ಅಭಿವೃದ್ಧಿ ಕುರಿತು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ‘ನಾನು ಸಂಸದನಾದ ಆರು ತಿಂಗಳೊಳಗೆ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿಸಿದ್ದೆ. ಹೊಸ ಎಂಪಿ ಬಂದ ಮೇಲೆ ನಿಲ್ದಾಣ ಬಂದ್ ಮಾಡಲಾಗಿದೆ. ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಕೆಲಸ ನಡೆಯುತ್ತಿದೆ. ಕಲಬುರಗಿ ನಗರಕ್ಕೆ ಕಡಿಮೆ ದರದಲ್ಲಿ ಅನಿಲ ಸಂಪರ್ಕ ಸೇರಿದಂತೆ ಹಲವು ಕೆಲಸಗಳನ್ನು ಮಾಡಿಸಿದ್ದೇನೆ. ದಿಶಾ ಸಭೆಗಳು ನಡೆಯಬೇಕು ಅದರಲ್ಲಿ ಭಾಗವಹಿಸಿದಾಗ ಎಂಎಲ್‌ಸಿ ಆಗಿರುವ ಅವರಿಗೆ ಎಲ್ಲ ತಿಳಿಯುತ್ತದೆ’ ಎಂದರು.

‘ಭಾರತದಲ್ಲಿ ಪಶ್ಚಿಮ ಬಂಗಾಳ ಬಿಟ್ಟು ಎಲ್ಲ ಕಡೆ ದಿಶಾ ಸಭೆಗಳು ಆಗಿವೆ. ಕಲಬುರಗಿಯಲ್ಲಿ ಯಾಕೆ ಆಗಿಲ್ಲ. ಸಂಸದ ರಾಧಾಕೃಷ್ಣ ಅವರು ಸಭೆ ಮಾಡದಿದ್ದರೆ ರಾಜ್ಯಸಭಾ ವಿರೋಧ ಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಾದರೂ ಮಾಡಬೇಕು. ಈ ಕುರಿತು ಒಂದು ದಿನ ಚರ್ಚೆ ಇಟ್ಟುಕೊಳ್ಳೋಣ’ ಎಂದರು.

‘ಪ್ರಚಾರಕ್ಕಾಗಿ ನಾವು ಪ್ರಿಯಾಂಕ್ ಖರ್ಗೆ ಟಾರ್ಗೆಟ್‌ ಮಾಡುತ್ತಿದ್ದೇವೆ ಎಂದು ಜಗದೇವ ಗುತ್ತೇದಾರ ಅವರು ಹೇಳಿದ್ದಾರೆ. ಅದು ಸುಳ್ಳು. ಪ್ರಿಯಾಂಕ್‌ ಖರ್ಗೆ ವಿರುದ್ಧ ನಿಂದನೆ ಖಂಡನೀಯ’ ಎಂದರು.

‘ಚಿತ್ತಾಪುರದಲ್ಲಿ ಪಥಸಂಚಲನ ನಡೆಯಲಿದೆ’

ಚಿತ್ತಾಪುರದಲ್ಲಿ ಭಾನುವಾರ ನಡೆಸಲು ಉದ್ದೇಶಿಸಿರುವ ಆರ್‌ಎಸ್‌ಎಸ್‌ ಪಥ ಸಂಚಲನ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ ‘ಮೂರು ದಿನದ ಹಿಂದೆ ಪಥ ಸಂಚಲನಕ್ಕೆ ಅನುಮತಿ ಕೇಳಿ ಮನವಿ ಸಲ್ಲಿಸಲಾಗಿದೆ. ಶುಲ್ಕ ಕೂಡ ಕಟ್ಟಲಾಗಿದೆ. ಬೆಳಿಗ್ಗೆ 4 ಗಂಟೆ ಸುಮಾರಿಗೆ ಭಗವಾಧ್ವಜದ ಬ್ಯಾನರ್ಸ್ ಬಂಟಿಂಗ್ಸ್ ತೆಗೆಯಲಾಗಿದೆ. ತಾವು ಇನ್ನೂ ಅನುಮತಿ ಕೊಟ್ಟಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇದರಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಏನೇ ಆದರೂ ಪಥಸಂಚಲನ ನಡೆಯಲಿದೆ’ ಎಂದರು.

‘ಪುರಸಭೆ ಪೊಲೀಸ್ ಅಧಿಕಾರಿಗಳು ಪ್ರಿಯಾಂಕ್ ಅಣತಿಯಂತೆ ನಡೆಯುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಡೆಸಬಾರದೆಂಬ ಕಾನೂನು ಇನ್ನೂ ಕರ್ನಾಟಕದ ಎಲ್ಲಿಯೂ ಜಾರಿಯಾಗದಿದ್ದರೂ ಚಿತ್ತಾಪುರದಲ್ಲಿ ಮಾತ್ರ ಜಾರಿಯಾಗಿದೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.