ಕಲಬುರಗಿ ನಗರದ ಗುಬ್ಬಿ ಕಾಲೊನಿಯಲ್ಲಿರುವ ಆಳಂದ ಕ್ಷೇತ್ರ ಮತ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತಿಗೆದಾರ ಅವರ ಮನೆ ಮೇಲೆ ದಾಳಿ ನಡೆಸಿರುವುದು
ಬೆಂಗಳೂರು/ಕಲಬುರಗಿ: ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ಮನೆ ಸೇರಿ ಕಲಬುರಗಿಯ ಹಲವೆಡೆ ಶುಕ್ರವಾರ ಶೋಧ ನಡೆಸಿದೆ. ಆಳಂದದಲ್ಲಿರುವ ಗುತ್ತೇದಾರ ಅವರ ಮನೆಯ ಎದುರಲ್ಲಿ ಅಪಾರ ಸಂಖ್ಯೆಯ ಮತದಾರರ ಪಟ್ಟಿ, ಮತದಾರರ ಚೀಟಿಗಳನ್ನು ಸುಟ್ಟಿರುವುದು ಇದೇ ವೇಳೆ ಪತ್ತೆಯಾಗಿದೆ.
‘ಎಸ್‌ಐಟಿಯಲ್ಲಿರುವ ಸಿಐಡಿ ಎಸ್‌ಪಿ ಶುಭಾನ್ವಿತಾ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಪೊಲೀಸರಿದ್ದ 100 ಮಂದಿಯ ತಂಡವು ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ ಕಲಬುರಗಿ ನಗರದ ನಾಲ್ಕು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಸುಭಾಷ ಗುತ್ತೇದಾರ ಅವರ ಮನೆ, ಅವರ ಮಕ್ಕಳಾದ ಹರ್ಷಾನಂದ ಗುತ್ತೇದಾರ ಮತ್ತು ಸಂತೋಷ ಗುತ್ತೇದಾರ ಅವರ ಕಚೇರಿಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆದಿದೆ’ ಎಂದು ಮೂಲಗಳು ಖಚಿತ ಪಡಿಸಿವೆ.
‘ಈ ದಾಳಿ ನಡೆಯುತ್ತಿದ್ದಂತೆಯೇ, ಅತ್ತ ಆಳಂದದ ಆರ್‌ಎಸ್‌ಕೆ ಕಾಲೊನಿಯಲ್ಲಿರುವ ಗುತ್ತೇದಾರ ಅವರ ಮತ್ತೊಂದು ಮನೆಯ ಎದುರು ಅಪಾರ ಪ್ರಮಾಣದ ಕಾಗದಪತ್ರಗಳ ರಾಶಿಗೆ ಬೆಂಕಿ ಹಚ್ಚಿ ಸುಡಲಾಗಿದೆ. ತೀವ್ರವಾಗಿದ್ದ ಬೆಂಕಿಯನ್ನು ನಂದಿಸಲು ನೀರು ಹಾಯಿಸುತ್ತಿದ್ದ ವೇಳೆ ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
‘ದಾಖಲೆ ಸುಡುತ್ತಿರುವ ಮಾಹಿತಿ ದೊರೆತ ಕೂಡಲೇ ಎಸ್‌ಐಟಿ ಅಧಿಕಾರಿಗಳ ಒಂದು ತಂಡವು ಆಳಂದಕ್ಕೆ ತೆರಳಿತು. ಆದರೆ ಅಷ್ಟರಲ್ಲಾಗಲೇ, ಅರೆಬರೆ ಸುಟ್ಟ ಕಾಗದಪತ್ರಗಳನ್ನು ಮಿನಿ ಟ್ರಕ್ ಒಂದರಲ್ಲಿ ಶಕಾಪುರ ಸೇತುವೆ ಬಳಿಗೆ ಕೊಂಡೊಯ್ದು ಅಮರ್ಜಾ ನದಿಗೆ ಸುರಿಯಲಾಗಿದೆ. ಮಿನಿ ಟ್ರಕ್ ಅನ್ನು ಬೆನ್ನಟ್ಟಿದ್ದ ಎಸ್‌ಐಟಿ ಅಧಿಕಾರಿಗಳು ಮತ್ತು ಪೊಲೀಸರು, ಅದರ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
‘ನದಿಗೆ ಎಸೆಯಲಾಗಿದ್ದ ಮತ್ತು ಶಕಾಪುರ ಸೇತುವೆ ಮೇಲೆ ಬಿದ್ದಿದ್ದ ಕಾಗದಪತ್ರಗಳಲ್ಲಿ ಮತದಾರರ ಪಟ್ಟಿಗಳು, ಮತದಾರರ ಚೀಟಿಗಳು ಮತ್ತು ಮತದಾರರ ಚೀಟಿ ರದ್ದತಿಗೆ ಸಲ್ಲಿಸಲಾಗುವ ನಮೂನೆ ಸಂಖ್ಯೆ 7ರ ಹಲವು ಪ್ರತಿಗಳು ಪತ್ತೆಯಾಗಿವೆ. ಸುಭಾಷ ಗುತ್ತೇದಾರ ಅವರ ಆಳಂದದ ಮನೆಯ ಎದುರು ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮತದಾರರ ಚೀಟಿಗಳು (ಎಪಿಕ್ ಕಾರ್ಡ್) ಸಿಕ್ಕಿವೆ.
‘ರಾತ್ರಿ 8ರ ವೇಳೆಗೆ ಆಳಂದ ಡಿವೈಎಸ್‌ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ್ ಯಾತನೂರು, ಸಿಐಡಿ ಇನ್‌ಸ್ಪೆಕ್ಟರ್ ಶರಣಗೌಡ ಅವರಿದ್ದ ತಂಡವು, ಅಮರ್ಜಾ ನದಿಯ ಬಳಿ ಮಹಜರು ನಡೆಸಿದೆ. ತಂಡದಲ್ಲಿ ವಿಧಿ ವಿಜ್ಞಾನ ತಜ್ಞರೂ ಇದ್ದು, ನದಿಗೆ ಎಸೆಯಲಾಗಿರುವ ಕಾಗದ ಪತ್ರಗಳನ್ನು ಮೊಬೈಲ್ ಬೆಳಕಿನಲ್ಲಿಯೇ ಸಂಗ್ರಹಿಸಿದೆ.
‘ಇನ್ನೊಂದೆಡೆ, ಎಸ್‌ಪಿ ಶುಭಾನ್ವಿತಾ ಮತ್ತು ಡಿವೈಎಸ್‌ಪಿ ಅಸ್ಲಾಂ ಪಾಶಾ ಅವರ ನೇತೃತ್ವದ ತಂಡವು ಆಳಂದದಲ್ಲಿರುವ ಸುಭಾಷ ಗುತ್ತೇದಾರ ಅವರ ಮನೆಗೆ ರಾತ್ರಿ 9ರ ವೇಳೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ ತಂಡದಲ್ಲಿರುವ ವಿಧಿ ವಿಜ್ಞಾನ ತಜ್ಞರು, ಮನೆಯ ಎದುರು ಸುಡಲಾಗಿರುವ ಕಾಗದಪತ್ರಗಳನ್ನು ಸಂಗ್ರಹಿಸುತ್ತಿದ್ದಾರೆ. ಅರೆಸುಟ್ಟ ಕಾಗದಪತ್ರಗಳನ್ನು ಮಿನಿಟ್ರಕ್‌ಗೆ ತುಂಬಿದವರು, ನದಿಗೆ ಎಸೆದವರನ್ನೂ ಪತ್ತೆ ಮಾಡಲಾಗಿದೆ. ಸುಭಾಷ ಗುತ್ತೇದಾರ ಅವರ ಆಳಂದ ಮನೆಯ ಕೆಲಸದವರು ಸೇರಿ ಎಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸುಳ್ಳು ಆರೋಪ ಹೊರಿಸಿ ಮುಂದಿನ ಚುನಾವಣೆ ಗೆಲ್ಲುವ ತಂತ್ರ ಹೂಡುತ್ತಿದೆ. ತನಿಖೆ ನಡೆಯಲಿ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ.ಸುಭಾಷ್ ಆರ್. ಗುತ್ತೇದಾರ, ಬಿಜೆಪಿ ಮಾಜಿ ಶಾಸಕ
ಕಾಲ್‌ಸೆಂಟರ್ ಚಟುವಟಿಕೆ ಪತ್ತೆ
ಮತದಾರರ ಹೆಸರಿನಲ್ಲಿ ಮತ್ತೊಬ್ಬ ಮತದಾರರ ಚೀಟಿಯನ್ನು (ಎಪಿಕ್) ರದ್ದುಪಡಿಸುವಂತೆ ನಮೂನೆ–7 ಅನ್ನು ಸಲ್ಲಿಸಲು ಕಲಬುರ್ಗಿಯಲ್ಲಿ ವ್ಯವಸ್ಥಿತವಾದ ಕಾಲ್‌ಸೆಂಟರ್ ಒಂದನ್ನು ರೂಪಿಸಲಾಗಿತ್ತು. 2022ರ ಡಿಸೆಂಬರ್‌ನಿಂದ 2023ರ ಫೆಬ್ರುವರಿವರೆಗೆ ಈ ಕಾಲ್‌ಸೆಂಟರ್ ಕಾರ್ಯನಿರ್ವಹಿಸಿದ್ದು ಇಲ್ಲಿಂದಲೇ 7000ಕ್ಕೂ ಹೆಚ್ಚು ನಮೂನೆ–7 ಅಪ್‌ಲೋಡ್ ಮಾಡಲಾಗಿದೆ ಎಂಬುದು ಪತ್ತೆಯಾಗಿದೆ.
ಆಳಂದ ಕ್ಷೇತ್ರದಲ್ಲಿ ಅಕ್ರಮವಾಗಿ ಮತದಾರರ ಚೀಟಿ ರದ್ದತಿಗೆ ಅರ್ಜಿ ಸಲ್ಲಿಸಿದ ಪ್ರಕರಣದ ಸಂಬಂಧ ಇದೇ 14ರಂದು ಎಸ್‌ಐಟಿ ಅಧಿಕಾರಿಗಳು ಕಲಬುರಗಿ ಮತ್ತು ಆಳಂದದಲ್ಲಿ ದಾಳಿ ನಡೆಸಿದ್ದರು. ಆ ಕಾಲ್‌ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅಸ್ಲಂ ಅಕ್ರಂ ಜುನೈದ್ ಅಷ್ಪಾಕ್ ಮತ್ತು ನದೀಂ ಅವರ ಮನೆಗಳಲ್ಲಿ ಶೋಧ ನಡೆಸಲಾಗಿತ್ತು. ಅವರ ಮನೆಯಲ್ಲಿ ಮತದಾರರ ಪಟ್ಟಿ ಎಪಿಕ್ ಕಾರ್ಡ್‌ಗಳು ಪ್ರಿಂಟರ್‌ಗಳು ಪತ್ತೆಯಾಗಿದ್ದವು.
‘ಈ ಐವರ ಮೊಬೈಲ್ ಲ್ಯಾಪ್‌ಟಾಪ್‌ಗಳು ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ಪರಿಶೀಲನೆ ನಡೆಸಲಾಗಿತ್ತು. ಬೇರೆ–ಬೇರೆ ರಾಜ್ಯಗಳಲ್ಲಿನ ಐ.ಪಿ. ವಿಳಾಸಗಳನ್ನು ಸೃಷ್ಟಿಸಿ ಈ ಲ್ಯಾಪ್‌ಟಾಪ್‌ಗಳಿಂದ ಏಕಕಾಲಕ್ಕೆ ನಮೂನೆ–7 ಅನ್ನು ಚುನಾವಣಾ ಆಯೋಗದ ಜಾಲತಾಣಕ್ಕೆ ಅಪ್‌ಲೋಡ್ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಲ್ಯಾಪ್‌ಟಾಪ್‌ಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
‘ಈ ಐವರ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿದಾಗ ಚಾರ್ಟರ್ಡ್ ಅಕೌಂಟೆಂಟ್ ಮಲ್ಲಿಕಾರ್ಜುನ ಮಹಾಂತಗೋಳ ಅವರ ಖಾತೆಗಳಿಂದ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಅವರ ಖಾತೆಗಳ ವಹಿವಾಟನ್ನು ಪರಿಶೀಲಿಸಿದಾಗ ಸುಭಾಷ ಗುತ್ತೇದಾರ ಅವರ ಆಪ್ತರು ಮತ್ತು ಅವರ ಒಡೆತನದ ಬಾರ್ ಆ್ಯಂಡ್ ರೆಸ್ಟೋರೆಂಟ್ ಒಂದರ ನೌಕರರ ಜತೆಗೆ ಹಣಕಾಸು ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ಈ ಆಧಾರದಲ್ಲಿ ಮಲ್ಲಿಕಾರ್ಜುನ ಅವರ ಮನೆ–ಕಚೇರಿ ಆಪ್ತರ ಒಡೆತನದ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿಯೂ ಶುಕ್ರವಾರ ಶೋಧ ನಡೆಸಲಾಗಿದೆ’ ಎಂದು ತಿಳಿಸಿವೆ.
ಆರೋಪ
2023ರ ವಿಧಾನಸಭೆ ಚುನಾವಣೆಗೂ ಮುನ್ನ ಆಳಂದ ಮತಕ್ಷೇತ್ರದಲ್ಲಿ 6 ಸಾವಿರದಷ್ಟು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ತೆಗೆದು ಹಾಕುವ ಯತ್ನ ನಡೆದಿದೆ ಎಂದು ಆರೋಪಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಪಾಟೀಲ ಈ ಬಗ್ಗೆ ಧ್ವನಿ ಎತ್ತಿದ್ದರು. ಬಳಿಕ ಚುನಾವಣೆ ಅಧಿಕಾರಿ ದೂರು ದಾಖಲಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಸುಭಾಷ ಗುತ್ತೇದಾರ ಶಾಸಕರಾಗಿದ್ದರು. ಬಳಿಕ ನಡೆದ 2023ರ ಚುನಾವಣೆಯಲ್ಲಿ ಸುಭಾಷ ಗುತ್ತೇದಾರ ಸೋಲುವುದರೊಂದಿಗೆ ಬಿ.ಆರ್.ಪಾಟೀಲ ಶಾಸಕರಾಗಿ ಆಯ್ಕೆಯಾಗಿದ್ದರು. ಮತಗಳವು ಯತ್ನದ ತನಿಖೆಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಬಳಿಕ ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವಹಿಸಲಾಗಿತ್ತು. ‘ಸಿಐಡಿ ತನಿಖೆಗೆ ಚುನಾವಣಾ ಆಯೋಗ ಸಹಕಾರ ನೀಡುತ್ತಿಲ್ಲ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈಚೆಗೆ ಧ್ವನಿ ಎತ್ತಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.