ಕಲಬುರಗಿ ನಗರದ ಗುಬ್ಬಿ ಕಾಲೊನಿಯಲ್ಲಿರುವ ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಮನೆಯಲ್ಲಿ ಸಿಐಡಿ ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಸಿಐಡಿ ಎಸ್ಪಿ ಶುಭನ್ವಿತಾ ಹಾಗೂ ಡಿವೈಎಸ್ಪಿ ಅಸ್ಲಂಪಾಷಾ ಇದ್ದಾರೆ
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಆಳಂದ (ಕಲಬುರಗಿ ಜಿಲ್ಲೆ): ಪಟ್ಟಣದಲ್ಲಿನ ರೇವಣಸಿದ್ದೇಶ್ವರ ಕಾಲೊನಿಯಲ್ಲಿರುವ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ಮನೆ ಮೇಲೆ ದಾಳಿ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳ ತಂಡವು ಶುಕ್ರವಾರ ತಡರಾತ್ರಿಯವರೆಗೂ ಪರಿಶೀಲನೆ ನಡೆಸಿ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಹಾಗೂ ಮನೆ ಮುಂದೆ ಸುಟ್ಟು ಹಾಕಿದ್ದ ದಾಖಲೆಗಳು ಹಾಗೂ ಬೂದಿಯನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗಿದೆ.
ಎಸ್‌ಐಟಿ ತಂಡದ ನೇತೃತ್ವ ವಹಿಸಿದ್ದ ಎಸ್ಪಿ ಶುಭನ್ವಿತಾ, ಡಿವೈಎಸ್‌ಪಿ ಅಸ್ಲಂ ಪಾಷಾ, ಶರಣಗೌಡ ನೇತೃತ್ವದಲ್ಲಿ ಶುಕ್ರವಾರ ಸಂಜೆ ಮಾಜಿ ಶಾಸಕರ ಮನೆ ಮೇಲೆ ದಾಳಿ ನಡೆಸಿತು. ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದರು.
ತಾಲ್ಲೂಕಿನ ಶಕಾಪುರ ಸೇತುವೆ ಬಳಿ ಬಿಸಾಡಿದ ಮತದಾರರ ಪಟ್ಟಿ, ಫಾರ್ಮ್, ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಅರ್ಜಿ ನಮೂನೆಗಳು ಹಾಗೂ ಕರಪತ್ರ ಮತ್ತಿತರ ದಾಖಲೆಗಳ ಹರಿದ ಚೂರು, ಹಳ್ಳದ ನೀರಿನಲ್ಲಿ ತೇಲಾಡುತ್ತಿದ್ದ ಕಾಗದ ಮತ್ತು ದಂಡೆಯಲ್ಲಿ ಬಿದ್ದ ವಿವಿಧ ಕಾಗದಗಳ ತುಣುಕುಗಳನ್ನು ಎಸ್ಐಟಿ ಅಧಿಕಾರಿ ಶರಣಗೌಡ ಹಾಗೂ ಪೊಲೀಸ್ ಸಿಬ್ಬಂದಿ ಸಂಗ್ರಹಿಸಿಕೊಂಡು ಹೋದರು.
‘ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲದ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಅದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್ಐಟಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.