ADVERTISEMENT

ಹಿಂದೂ ರಾಷ್ಟ್ರ ದ ಹುನ್ನಾರ: ಸೀತಾರಾಂ ಯೆಚೂರಿ ಟೀಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 22:07 IST
Last Updated 22 ಜನವರಿ 2020, 22:07 IST
CPI(M) National Leader Sitaram Yechury. -Photo/ Anand Bakshi
CPI(M) National Leader Sitaram Yechury. -Photo/ Anand Bakshi   

ಕಲಬುರ್ಗಿ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಆಣತಿಯಂತೆ ಬಿಜೆಪಿಯು ಧಾರ್ಮಿಕ ಅಲ್ಪಸಂಖ್ಯಾತರನ್ನು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಟ್ಟು ದೇಶ ಬಿಡಿಸುವ ಮೂಲಕ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಹುನ್ನಾರ ಮಾಡುತ್ತಿದೆ’ ಎಂದು ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ‌ಸೀತಾರಾಂ ಯೆಚೂರಿ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್‌ಆರ್‌ಸಿ, ಎನ್‌ಪಿಆರ್‌ಗೆ ಯಾವುದೇ ದಾಖಲೆಗಳನ್ನು ನೀಡದಿರುವ ಮೂಲಕ ಅಸಹ ಕಾರ ಚಳವಳಿ ನಡೆಸಲು ನಿರ್ಧರಿ ಸಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಪಕ್ಷದಿಂದ ಮನೆ ಮನೆಗೆ ತೆರಳುವ ಅಭಿಯಾನ ನಡೆಸಲಿದ್ದೇವೆ. ನಮ್ಮ ವಿರೋಧ ಇರುವುದು ಎನ್‌ಆರ್‌ಸಿ, ಎನ್‌ಪಿಆರ್‌ಗೆ ಹೊರತು ಜನಗಣತಿಗಲ್ಲ’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಕೇಂದ್ರ ಸರ್ಕಾರದ ಪ್ರಕಾರ 4.8 ಜಿಡಿಪಿ‌ ಇದೆ. ಆದರೆ, ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಕಾರ ಭಾರತದ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ಜಿಡಿಪಿ ಶೇ 2.8 ಇದೆ’ ಎಂದರು.

ADVERTISEMENT

‘ಜನವರಿ 23ರಂದು ನೇತಾಜಿ ಸುಭಾಷ್‌ಚಂದ್ರ ಬೋಸರ ಜನ್ಮ ದಿನದಂದು ಪ್ರಾರಂಭ ಮಾಡಿ ಜ 26ನೇ ದಿವಸವನ್ನು ಸಂವಿಧಾನ ಶಪಥ ದಿನವನ್ನಾಗಿ ಆಚರಿಸಲಾಗುವುದು. ಜನವರಿ 30ರಂದು ಗಾಂಧಿಯವರ ಹುತಾತ್ಮ ದಿನದಂದು ಗಾಂಧಿ ಕೊಂದವರ ವಿರುದ್ಧ ಪ್ರತಿಭಟಿಸಲಾಗುವುದು’ ಎಂದು ‌ಯೆಚೂರಿ ತಿಳಿಸಿದರು.

ಕೇರಳ ಹಾಗೂ ಪಂಜಾಬ್‌ ಸರ್ಕಾರಗಳು ಸಿಎಎ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.