ADVERTISEMENT

ಸಂಘ ಪರಿವಾರದ ವಿರುದ್ಧ ಮೊಳಗಿದ ಘೋಷಣೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 6:26 IST
Last Updated 26 ನವೆಂಬರ್ 2025, 6:26 IST
ಸಚಿವ ಪ್ರಿಯಾಂಕ್‌ ಖರ್ಗೆಯವರನ್ನು ಬೆಂಬಲಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ದಸಂಸ ರಾಜ್ಯ ಸಂಚಾಲಕ ಡಿ.ಜಿ.ಸಾಗರ್, ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು
ಸಚಿವ ಪ್ರಿಯಾಂಕ್‌ ಖರ್ಗೆಯವರನ್ನು ಬೆಂಬಲಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ದಸಂಸ ರಾಜ್ಯ ಸಂಚಾಲಕ ಡಿ.ಜಿ.ಸಾಗರ್, ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು   

ಕಲಬುರಗಿ: ಆರ್‌ಎಸ್‌ಎಸ್‌ನ ನೀತಿ ಖಂಡಿಸಿ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆಯವರನ್ನು ಬೆಂಬಲಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರು, ಸಚಿವ ಪ್ರಿಯಾಂಕ್ ಖರ್ಗೆ ಅಭಿಮಾನಿಗಳು ಮಧ್ಯಾಹ್ನ ನಗರದ ಜಗತ್ ವೃತ್ತದಲ್ಲಿ ಜಮಾಯಿಸಿದರು. ಬಳಿಕ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.

ಪ್ರಿಯಾಂಕ್ ಖರ್ಗೆಯವರನ್ನು ಬೆಂಬಲಿಸುವ ಬರಹ ಇದ್ದ ನೀಲಿ ಟೊಪ್ಪಿಗೆ ಮತ್ತು ಶಾಲು ಧರಿಸಿ, ಕೈಯಲ್ಲಿ ನೀಲಿ ಧ್ವಜ, ಡಾ.ಬಿ.ಆರ್‌.ಅಂಬೇಡ್ಕರ್, ಬುದ್ಧ, ಬಸವಣ್ಣ, ಸಂವಿಧಾನದ ಪೂರ್ವ ಪೀಠಿಕೆ, ಪ್ರಿಯಾಂಕ್ ಖರ್ಗೆಯವರ ಚಿತ್ರ ಹಿಡಿದು ಜಿಲ್ಲಾಧಿಕಾರಿ ಕಚೇರಿ ಕಡೆಗೆ ಸಾಗಿದರು. 

ADVERTISEMENT

‘ಆರ್‌ಎಸ್‌ಎಸ್‌ ನಿಷೇಧಿಸಿ, ದೇಶ ಉಳಿಸಿ’, ‘ಪ್ರಿಯಾಂಕ್‌ ಖರ್ಗೆಯವರೊಂದಿಗೆ ನಾವಿದ್ದೇವೆ’, ‘ಮನುವಾದಿಗಳ ವಿರುದ್ಧ ಪ್ರಜಾಪ್ರಭುತ್ವವಾದಿಗಳ ಪ್ರತಿರೋಧ’, ‘ಜೈ ಭೀಮ್’ ಘೋಷಣೆಗಳನ್ನು ಮೊಳಗಿಸಿದರು.

ಪ್ರತಿಭಟನಾ ಮೆರವಣಿಗೆ ಸಾಗುವಾಗ ರಸ್ತೆ ನೀಲಿಮಯವಾಗಿತ್ತು. ಘೋಷಣೆಗಳು ಹಾಗೂ ಹಲಗೆ ಸದ್ದಿನೊಂದಿಗೆ ಮೆರವಣಿಗೆ ಸಾಗಿತು. ಮೆರವಣಿಗೆಯ ಮುಂಭಾಗದಲ್ಲಿ ಧ್ವನಿವರ್ಧಕ ಅಳವಡಿಸಿದ್ದ ಆಟೊಗಳೂ ಸಾಗಿದವು. ಧ್ವನಿ ವರ್ಧಕದಲ್ಲೂ ಘೋಷಣೆಗಳನ್ನು ಮೊಳಗಿಸಲಾಯಿತು.

ನೂರಾರು ಜನ ಯುವಕರು, ಮಹಿಳೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಡಿಸಿ ಕಚೇರಿ ಮುಂಭಾಗದಲ್ಲಿ ಸ್ವಲ್ಪ ಸಮಯ ಪ್ರತಿಭಟನೆ ನಡೆಸಿದರು. 

ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ, ಮುಖಂಡರಾದ ಕೃಷ್ಣಪ್ಪ ಕರಣಿಕ್, ಬಿ.ಸಿ.ವಾಲಿ, ಎಸ್‌.ಪಿ. ಸುಳ್ಳದ್, ಅಂಬಣ್ಣ ಜೀವಣಗಿ, ಎಸ್‌.ಶಂಕರ, ಮಹಾದೇವ ತರನಳ್ಳಿ, ಸುಭಾಷ ಡಾಂಗೆ, ಶಿವಶರಣ ಮಾರಡಗಿ, ರವಿ ಬಡಿಗೇರ, ತಿಪ್ಪಣ್ಣ ಕಣೇಕರ್, ಮಹಾಲಿಂಗ ಅಂಗಡಿ ಹಾಗೂ ಶಿವಪುತ್ರ ರಾಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತಿಭಟನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಗತ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಸಾಗಿದ ಕಾರಣ ಕೆಲಕಾಲ ವಾಹನ ದಟ್ಟಣೆ ಉಂಟಾಗಿ ಸಂಚಾರಕ್ಕೆ ತೊಂದರೆಯಾಯಿತು.  

ವ್ಯಕ್ತಿಯೊಬ್ಬರು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

Highlights - ನೀಲಿ ಟೊಪ್ಪಿಗೆ, ಶಾಲು ಧರಿಸಿ ಭಾಗಿ ಧ್ವನಿ ವರ್ಧಕದಲ್ಲೂ ಮೊಳಗಿದ ಘೋಷಣೆ ಸಂಸದ ಕಾಗೇರಿ ಬಂಧನಕ್ಕೆ ಒತ್ತಾಯ

Quote - ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿಗಳ ಸ್ವಾಗತಕ್ಕೆ ಬರೆಯಲಾಗಿತ್ತು ಎಂದು ಹೇಳಿಕೆ ನೀಡಿರುವ ಸಂಸದ ಕಾಗೇರಿ ಅವರನ್ನು ಕೂಡಲೇ ಬಂಧಿಸಬೇಕು ಡಿ.ಜಿ.ಸಾಗರ್ ದಸಂಸ ರಾಜ್ಯ ಸಂಚಾಲಕ

Cut-off box - ‘ದ್ವೇಷ ಬಿತ್ತುವ ಆರ್‌ಎಸ್‌ಎಸ್‌’ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ಮಾತನಾಡಿ ‘ಆರ್‌ಎಸ್‌ಎಸ್‌ ಈ ನೆಲದ ಕಾನೂನು ಗೌರವಿಸುವುದಿಲ್ಲ. ಮನುಶಾಸ್ತ್ರವನ್ನು ಭಾರತದ ಕಾನೂನಾಗಿಸಲು ಹೊಂಚು ಹಾಕುತ್ತಿದೆ. ಬಿಜೆಪಿಯ ಮೂಲಕ ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ’ ಎಂದು ದೂರಿದರು. ‘ಬಹುಕಾಲ ಆರ್‌ಎಸ್‌ಎಸ್‌ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಲಿಲ್ಲ. ಹಾರಿಸಲು ನಿರಾಕರಿಸಿದರು. ಸಂವಿಧಾನದ ಅಡಿ ನೋಂದಣಿ ಮಾಡಿಕೊಂಡಿಲ್ಲ. ಅನಧಿಕೃತ ಆದಾಯದ ಮೂಲಗಳಿಂದ ಹಣ ಪಡೆಯುತ್ತಿದೆ. ದೇಶದ ಕಾನೂನಿನ ಹಾದಿಯಲ್ಲಿಯೇ ಪ್ರತಿಯೊಬ್ಬರೂ ಸಾಗಬೇಕು. ಅದಕ್ಕೆ ಆರ್‌ಎಸ್‌ಎಸ್‌ ಹೊರತಲ್ಲ. ಇಂಥ ಪ್ರಶ್ನೆಗಳನ್ನು ಎತ್ತಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನುವಾದಿಗಳು ಬೆದರಿಕೆ ಹಾಕಿದ್ದಾರೆ. ಅವರ ಕುಟುಂಬದವರನ್ನು ನಿಂದಿಸಿದ್ದಾರೆ. ಆರ್‌ಎಸ್‌ಎಸ್‌ ಅನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು. ‘ಮನುವಾದಿಗಳಿಂದ ಸಂವಿಧಾನ ರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಆರ್‌ಎಸ್‌ಎಸ್‌ನ ದಲಿತ ವಿರೋಧಿ ನೀತಿ ಖಂಡಿಸಿ ದಲಿತ ಸಂಘರ್ಷ ಸಮಿತಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ನಡೆಸುತ್ತಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.