ಚಿತ್ತಾಪುರ( ಕಲಬುರಗಿ ಜಿಲ್ಲೆ): ರಾಜ್ಯ ಸರ್ಕಾರವು ಈಡಿಗ ಸಮುದಾಯದ 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕಿನ ಕರದಾಳ ಗ್ರಾಮದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಅವರು ಮಂಗಳವಾರ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದರು.
ಶಕ್ತಿ ಪೀಠದಲ್ಲಿ ಬೆಳಿಗ್ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಹಲಕರ್ಟಿಯ ಮುನೀಂದ್ರ ಶಿವಾಚಾರ್ಯ, ದೊಡ್ಡೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪಾದಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಪಾದಯಾತ್ರೆಗೆ ಮುಂಚೆ ಪ್ರಣಾವಾನಂದ ಸ್ವಾಮೀಜಿ ಮಾತನಾಡಿ, ಪಾದಯಾತ್ರೆ ಮಾಡುತ್ತಿರುವುದು ಈಡಿಗ ಸಮಾಜದ ಭವಿಷ್ಯಕ್ಕಾಗಿ. ಮುಂದಿನ ಪೀಳಿಗೆಯ ಏಳಿಗೆಗಾಗಿ. ಸಮುದಾಯದ ಅಸ್ತಿತ್ವದ ಉಳಿಸುವುದಕ್ಕಾಗಿ. ಸಮುದಾಯ ಗಟ್ಟಿಗೊಳಿಸಲಿಕ್ಕಾಗಿ ಎಂದು ಅವರು ಹೇಳಿದರು.
'ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ದೂರವಾಣಿ ಮೂಲಕ ಮಾತನಾಡಿ, ಸಮುದಾಯದ ಬೇಡಿಕೆಗಳ ಬಗ್ಗೆ ಒಂದೆಡೆ ಸೇರಿ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರವು ನಮ್ಮ ಬೇಡಿಕೆಗಳ ಪೈಕಿ ಐದು ಬೇಡಿಕೆಗಳನ್ನು ಈಡೇರಿಸದ ಹೊರತು ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲುವುದಿಲ್ಲ. ಪಾದಯಾತ್ರೆ ಸಂಭ್ರಮದ್ದಲ್ಲ, ಇಡೀ ಸಮುದಾಯದ ಜನರ ನೋವಿನ ಹೋರಾಟ' ಎಂದು ಅವರು ಹೇಳಿದರು.
ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಸಾಮಾಜಿಕ ನ್ಯಾಯ, ಹಕ್ಕು ಸೌಲಭ್ಯ ಸಿಗಬೇಕು. ಎಲ್ಲರೂ ಆನಂದ, ನೆಮ್ಮದಿ, ಸಂತೋಷದಿಂದ ಜೀವನ ಸಾಗಿಸುವಂತಾಗಬೇಕು. ಅಂತಹ ಮಹಾನ್ ಉದ್ದೇಶದೊಂದಿಗೆ ಪ್ರಣವಾನಂದ ಸ್ವಾಮೀಜಿ ಸಮುದಾಯದ ಪರವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಹೆಜ್ಜೆಗಳಲ್ಲಿ ನಾವೂ ಹೆಜ್ಜೆ ಹಾಕುತ್ತೇವೆ. ಒಂದು ಸಮುದಾಯದ ಸ್ವಾಮೀಜಿ ಸಮುದಾಯದ ಬೇಡಿಕೆ ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುವ ಪರಿಸ್ಥಿತಿ ಉಂಟಾಗಿದ್ದು ದುರ್ದೈವದ ಸಂಗತಿ. ಜನಪ್ರತಿನಿಧಿಗಳು, ಸರ್ಕಾರ ಪಾದಯಾತ್ರೆಗೆ ಅವಕಾಶ ಕೊಡದೆ ಸ್ವಾಮೀಜಿಯೊಂದಿಗೆ ಮಾತನಾಡಿ ಚರ್ಚೆ ನಡೆಸಬೇಕಿತ್ತು. ಆದರೆ, ಆ ಕೆಲಸ ಜನಪ್ರತಿನಿಧಿಗಳು, ಸರ್ಕಾರ ಮಾಡಿಲಿಲ್ಲ ಎಂದು ನೋವು ವ್ಯಕ್ತ ಮಾಡಿದರು.
ಶಕ್ತಿ ಪೀಠದ ಹತ್ತಿರ ಸಾರೋಟದಲ್ಲಿ ನಾರಾಯಣಗುರುಗಳ ಮೂರ್ತಿ ಇಟ್ಟು ಹಲಿಗೆ, ಡೊಳ್ಳುಗಳ ಮೂಲಕ ಪಾದಯಾತ್ರೆ ಮೆರವಣಿಗೆಯೊಂದಿಗೆ ಸಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಈಡಿಗ, ಬಿಲ್ಲವ, ನಾಮಧಾರಿ ಸಮಾಜದ ಮುಖಂಡರು ಸ್ವಾಮೀಜಿಯೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.