ಮಹಾರಾಷ್ಟ್ರದ ಪುಣೆಯಲ್ಲಿ ಆಳಂದ ಬಸ್ ಘಟಕದ ಚಾಲಕನ ಮುಖಕ್ಕೆ ಮರಾಠಿ ಭಾಷಿಕ ಹೋರಾಟಗಾರ ಮಸಿ ಬಳಿಯುವ ದೃಶ್ಯ
ಆಳಂದ: ಇಲ್ಲಿನ ಬಸ್ ಘಟಕದ ಕಲ್ಯಾಣ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಬಸ್ ಚಾಲಕನನ್ನು ಬಸ್‌ನಿಂದ ಇಳಿಸಿ ಮುಖಕ್ಕೆ ಮಸಿ ಬಳಿದು ಪುಂಡಾಟ ಮೆರೆದ ಘಟನೆ ಮಂಗಳವಾರ ನಡೆದಿದೆ.
ಆಳಂದ -ಪುಣೆ ಸಂಚರಿಸುವ ಬಸ್ ಚಾಲಕ ಸಾದಿಕ್ ಮುಲಗೆ ಹಾಗೂ ನಿರ್ವಾಹಕ ಪರಮೇಶ್ವರ ಅವರು ಪುಣೆಗೆ ಪ್ರಯಾಣಿಕರೊಂದಿಗೆ ತೆರಳಿದ್ದರು. ಪುಣೆ ಸಮೀಪದ ಸ್ವರಗೇಟ್ ಬಳಿ ಬಸ್ ತಡೆದು ನಿಲ್ಲಿಸಿ, ಜೈ ಮಹಾರಾಷ್ಟ್ರ ಘೋಷಣೆ ಕೂಗಿ, ಚಾಲಕನನ್ನು ಕೆಳಗೆ ಇಳಿಸಿ ಬಲವಂತವಾಗಿ ಆತನ ಮುಖಕ್ಕೆ ಮಸಿ ಬಳಿದು ತಮ್ಮ ಮರಾಠಿ ಪ್ರೇಮವನ್ನು ತೊರಿದಲ್ಲದೆ ಕನ್ನಡ ಭಾಷಿಕರ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಡೆದಿದೆ. ಅಲ್ಲದೆ ಚಾಲಕ ಮತ್ತು ನಿರ್ವಾಹಕರಿಬ್ಬರಿಗೆ ಮರಾಠಿ ಮಾತನಾಡಬೇಕು. ಕನ್ನಡ ಮಾತನಾಡಬೇಡಿ ಎಂದು ಬೆದರಿಕೆ ಹಾಕಿ ಉದ್ಧಟತನ ಮೆರೆದಿದ್ದಾರೆ.
ಬಸ್ ಚಾಲಕ ಸಾದಿಕ್ ಮುಲಗೆ ಮಾಹಿತಿ ನೀಡಿ, ‘ಪುಣೆಗೆ ಬಸ್ ಸಂಚರಿಸುವ ಸಮಯದಲ್ಲಿ ತಡರಾತ್ರಿ ಏಕಾಏಕಿ ಬಂದ ಮೂವರು ನನ್ನನ್ನು ಕೆಳಗೆ ಇಳಿಸಿ ಮುಖಕ್ಕೆ ಮಸಿ ಬಳಿದಿದ್ದಾರೆ. ಅಲ್ಲದೆ ಮಹಾರಾಷ್ಟ್ರದಲ್ಲಿ ಮರಾಠಿ ಮಾತನಾಡಬೇಕು ಎಂದು ಒತ್ತಾಯಿಸಿದರು’ ಎಂದು ತಿಳಿಸಿದ್ದಾರೆ.
ಕಿಡಿಗೇಡಿಗಳು ನಮ್ಮ ಬಸ್ ಘಟಕದ ಬಸ್ ಚಾಲಕ, ನಿರ್ವಾಹಕರ ಜತೆ ಅನುಚಿತ ವರ್ತನೆ ಮಾಡಿರುವುದು ನಮ್ಮ ಘಟಕದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಪುಣೆಯಲ್ಲಿನ ಸಂಚಾರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಆಳಂದ ಬಸ್ ಘಟಕದ ವ್ಯವಸ್ಥಾಪಕ ಯೋಗಿರಾಜ ಸರಸಂಬಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.